ಮೈಸೂರು: ಮೈಸೂರಿನ ವಿವಿಧ ಬಡಾವಣೆಗಳ ನೀರಿನ ಸಮಸ್ಯೆ ಕುರಿತು ಮೈಸೂರು ಗ್ರಾಹಕರ ಪರಿಷತ್‍ನಲ್ಲಿ ಭಾನುವಾರ ಬಿಸಿ ಬಿಸಿ ಚರ್ಚೆ ನಡೆಯಿತು.
ಯಾದವಗಿರಿಯಲ್ಲಿರುವ ಮೈಸೂರು ಗ್ರಾಹಕರ ಪರಿಷತ್ತಿನ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೈಗ್ರಾಪ ಸದಸ್ಯರು ನೀರಿನ ಸಮಸ್ಯೆ ಕುರಿತು ಹತ್ತು ಹಲವು ಸಮಸ್ಯೆಗಳ ಬಗ್ಗೆ ಸದಸ್ಯರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮೈಗ್ರಾಪ ಸದಸ್ಯ ಮನ್ಸೂರ್ ಅಹಮದ್ ಮಾತನಾಡಿ, ಸಿದ್ದಿಕಿ ನಗರಕ್ಕೆ ಒಂದು ದಿನ ಕೊಳವೆ ಬಾವಿಯಿಂದ ಮತ್ತೊಂದು ದಿನ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದಿಂದ ನೀರು ಬಿಡಲಾಗುತ್ತಿತ್ತು. ಆದರೆ, ಕೆಲವು ದಿನಗಳಿಂದ ಕೊಳವೆ ಬಾವಿ ನೀರಿನ ಅಭಾವದಿಂದ ಹೆಚ್ಚಿನ ನೀರಿನ ಸಮಸ್ಯೆ ಉಲ್ಬಣಿಸಿದೆ. ಇದನ್ನು ಸರಿಪಡಿಸುವಂತೆ ವಾಣಿ ವಿಲಾಸ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಮತ್ತೊಬ್ಬ ಸದಸ್ಯ ಮಹೇಶ್ ಮಾತನಾಡಿ, ಕುಡಿಯುವ ನೀರಿನ ಶುದ್ಧೀಕರಣ ತಪಾಸಣೆ ಯಾವ ಹಂತದಲ್ಲಿ ಮಾಡಲಾಗುತ್ತಿದೆ ಎಂಬುದರ ಕುರಿತು ವಿವರ ನೀಡುವಂತೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇಲಾಖೆಯಿಂದ ಯಾವುದೇ ರೀತಿ ತಪಾಸಣೆ ಆಗುತ್ತಿಲ್ಲ. ಈ ಬಗ್ಗೆ ಒಂದು ಸಮಿತಿ ರಚಿಸಿ ಸಮಿತಿ ಮೂಲಕ ನೀರಿನ ತಪಾಸಣಾ ಕೆಲಸ ಆಗಬೇಕಿದೆ ಎಂದು ಆಗ್ರಹಿಸಿದರು.
ಮೈಗ್ರಾಪ ಸಂಸ್ಥಾಪಕ ಅಧ್ಯಕ್ಷ ಭಾಮಿಶೆಣೈ ಮಾತನಾಡಿ, ವಾಣಿ ವಿಲಾಸ ನೀರು ಸರಬ ರಾಜು ಮಂಡಳಿ ವಾರ್ಷಿಕ ಒಟ್ಟು ಎಷ್ಟು ಹಣ ಪಡೆಯುತ್ತಿದ್ದು, ಎಷ್ಟು ನೀರು ಸರಬರಾಜು ಮಾಡುತ್ತಿದೆ. ಬಹುತೇಕ ಭಾಗಗಳಲ್ಲಿ ನೀರಿನ ಶುಲ್ಕ ಪಾವತಿಸಿದವರಿಗೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಇನ್ನೂ ಹಲವೆಡೆ ನೀರಿನ ಶುಲ್ಕ ಪಾವತಿಸದವರಿಗೂ ನೀರು ಸರಬರಾಜು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಾರ್ಷಿಕ ವರದಿಯನ್ನಾದರೂ ಮಂಡಳಿ ಹೊರಡಿಸಬೇಕೆಂದು ಮನವಿ ಮಾಡಿದರು. ರಾಜರಾಜೇಶ್ವರಿ ನಗರದಲ್ಲಿನ ನೀರಿನ ಸಮಸ್ಯೆಗೆ ಸಂಬಂಧಪಟ್ಟವರು ಸ್ಪಂದಿಸಬೇಕು ಎಂಬ ಕೂಗು ಸಭೆಯಲ್ಲಿ ಕೇಳಿ ಬಂದಿತು. ಅಲ್ಲದೆ, ಎನ್.ಆರ್.ಮೊಹಲ್ಲಾದ ಕೆಲವೊಂದೆಡೆ ನೀರಿನ ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ಸರಿಪಡಿಸಿ ಎಲ್ಲರಿಗೂ ಸರಿ ಸಮಾನವಾಗಿ ನೀರು ಹರಿಸುವಂತೆ ಮನವಿ ಮಾಡಿದರು.
ವಾಣಿವಿಲಾಸ ನೀರು ಸರಬರಾಜು ಮಂಡಳಿ ಅಧಿಕಾರಿಗಳಾದ ಗಿರೀಶ್ ಮಾತನಾಡಿ, ಸಿದ್ಧಿಕಿನಗರದ ನೀರಿನ ಸಮಸ್ಯೆ ವಿತರಣೆಯಲ್ಲಿ ಸ್ವಲ್ಪ ತೊಂದರೆ ಆಗುತ್ತಿದೆ. ಆದರೆ, ಅಮೃತ ಯೋಜನೆಯಡಿಯಲ್ಲಿ ಆ ಭಾಗದ ಜನರಿಗೆ ನೀರು ಒದಗಿಸುವ ಚಿಂತನೆಯಲ್ಲಿದ್ದೇವೆ. ಉಳಿದಂತೆ ರಾಜರಾಜೇಶ್ವರಿ ನಗರ ಮುಡಾ ವ್ಯಾಪ್ತಿಗೆ ಬರುವ ನಿಟ್ಟಿನಲ್ಲಿ ಆ ಭಾಗದ ನೀರಿನ ಸಮಸ್ಯೆಗೆ ಶೀಘ್ರ ಸಂಬಂಧ ಪಟ್ಟವರ ಗಮನಕ್ಕೆ ತರಲಾಗುವುದು ಎಂದರು. ಸಭೆಯಲ್ಲಿ ವಾಣಿವಿಲಾಸ ನೀರು ಸರಬರಾಜು ಮಂಡಳಿ ಅಧಿಕಾರಿ ಚನ್ನ ಬಸವೇಗೌಡ, ಮೈಸೂರು ಗ್ರಾಹಕರ ಪರಿಷತ್ತಿನ ಅಧ್ಯಕ್ಷೆ ಪ್ರೊ.ಎಸ್.ಶೋಭನಾ, ಶ್ರೀಮತಿ ಹರಿಪ್ರಸಾದ್, ರೇಣು ಅಗರವಾಲ್, ನರೇಂದ್ರ, ವೆಂಕಟೇಶ್, ಪ್ರೊ.ಜಗನ್ನಾಥ್, ಡಾ.ಟಿ.ಎನ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು