ವ್ಯಾಪ್ತಿ ಮೀರಿ ದೂರ ಶಿಕ್ಷಣ ಅನುಮತಿ ಸರಿಯಿಲ್ಲ: ಡಾ.ಎನ್.ಎಸ್.ರಾಮೇಗೌಡ
ಮೈಸೂರು

ವ್ಯಾಪ್ತಿ ಮೀರಿ ದೂರ ಶಿಕ್ಷಣ ಅನುಮತಿ ಸರಿಯಿಲ್ಲ: ಡಾ.ಎನ್.ಎಸ್.ರಾಮೇಗೌಡ

December 19, 2019

ಮೈಸೂರು, ಡಿ. 18(ಆರ್‍ಕೆ)- ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಪ್ತಿ ಮೀರಿ ದೂರ ಶಿಕ್ಷಣ ವ್ಯಾಸಂಗಕ್ಕೆ ಅನುಮತಿ ನೀಡಿರುವುದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಆಘಾತಕಾರಿ ಎಂದು ವಿಶ್ರಾಂತ ಕುಲಪತಿ ಡಾ. ಎನ್.ಎಸ್.ರಾಮೇಗೌಡ ತಿಳಿಸಿದ್ದಾರೆ.

ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಸಾಂಪ್ರ ದಾಯಿಕ ವಿಶ್ವವಿದ್ಯಾನಿಲಯಗಳಿಗೆ ದೂರ ಶಿಕ್ಷಣಕ್ಕೆ ಅನುಮತಿ ನೀಡಿರುವುದರಿಂದ ಮುಕ್ತ ವಿಶ್ವವಿದ್ಯಾನಿಲಯದ ಅಸ್ತಿತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ವಿಟಿಯು, ರಾಜೀವ್‍ಗಾಂಧಿ, ಕಾನೂನು ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬಂದಾಗ ಆಯಾ ವ್ಯಾಪ್ತಿಗೆ ಬರುವ ಕಾಲೇಜುಗಳನ್ನು ಸೇರಿಸಲಾಯಿತು. ಆದರೆ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದ ಮೇಲೆ ಆ ವಿಶ್ವವಿದ್ಯಾನಿಲಯಗಳು ನಡೆಸುತ್ತಿದ್ದ ದೂರ ಶಿಕ್ಷಣ ಪರಿಮಿತಿ ಯನ್ನು ಮುಕ್ತ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿ ಪ್ರವೇಶಾನುಮತಿ ಆ ಪ್ರದೇಶದ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದ್ದರೂ, ದೂರ ಶಿಕ್ಷಣ ಪ್ರವೇಶಾತಿಯನ್ನು ಇಡೀ ರಾಜ್ಯಕ್ಕೆ ಅನ್ವ ಯಿಸುವಂತೆ ಸರ್ಕಾರವೇ ತೀರ್ಮಾನಿಸಿದೆ. ಅಷ್ಟಾದರೂ ಸಾಂಪ್ರದಾಯಿಕ ವಿಶ್ವವಿದ್ಯಾ ನಿಲಯಗಳಿಗೆ ದೂರ ಶಿಕ್ಷಣ ನಡೆಸಲು ಅನುಮತಿ ನೀಡಿರುವುದು ಸರಿಯಲ್ಲ ಎಂದೂ ಡಾ. ರಾಮೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ 2005ರ ಜುಲೈ 21, ಜುಲೈ 28 ಹಾಗೂ ಆಗಸ್ಟ್ 16ರಂದು ರಾಜ್ಯದ ಸರ್ಕಾರಿ ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ಪತ್ರ ಬರೆದಿದ್ದ ಅಂದಿನ ರಾಜ್ಯಪಾಲರ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ದೂರಶಿಕ್ಷಣ ನೀಡಬೇಕು. ಬೇರೆ ವಿಶ್ವವಿದ್ಯಾನಿಲಯಗಳು ತಮ್ಮ ನಿಗದಿತ ಶಿಕ್ಷಣ ನೀಡುವತ್ತ ಗಮನ ಹರಿಸಬೇಕೆಂದು ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »