ಮೈಸೂರು, ಮಾ.೩೦(ಪಿಎಂ)_ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಕಾರ್ಮಿಕ ಕುಟುಂಬಗಳಿಗೆ ವಾರಕ್ಕೆ ಆಗುವಷ್ಟು ಪಡಿತರ ಪೊಟ್ಟಣ ವಿತರಣೆಗೆ ಶೀಘ್ರ ಕ್ರಮ ವಹಿಸುವುದಾಗಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಾಲಿಕೆ ನಡೆಸುತ್ತಿರುವ ಕಾರ್ಯ ಚಟುವಟಿಕೆ ಕುರಿತು ಭಾನುವಾರ ವಾರ್ತಾ ಇಲಾಖೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಪಡಿತರ ಪದಾರ್ಥಗಳ ಪೊಟ್ಟಣ ಹಂಚಲು ಪಾಲಿಕೆ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ದಾನಿಗಳು ಸಹಕಾರ ನೀಡಬಹುದು. ಸಿದ್ಧ ಆಹಾರ ಹಂಚುವ ಬದಲು ಇದಕ್ಕೆ ಸಹಕಾರ ನೀಡಿದರೆ, ಬಡ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಇಂದಿನಿಂದ (ಮಾ.೨೯) ನಗರದ ಎಲ್ಲಾ ವಾರ್ಡ್ ಗಳಲ್ಲಿ ಹೈಡ್ರೋ ಪೆರಾಕ್ಸೈಡ್ ಸ್ಪ್ರೇ ಮಾಡಲಾಗುತ್ತಿದೆ. ಇದರಲ್ಲಿ ಹೋಮ್ ಕ್ವಾರಂಟೈನ್ ಇರುವ ಮನೆಗಳಿಗೆ ವಿಶೇಷ ಒತ್ತು ನೀಡಲಾಗುವುದು. ನಾಗರಿಕರು ಈ ಸ್ಪ್ರೇ ಅನ್ನು ತಮ್ಮ ಪ್ರದೇಶಗಳಿಗೆ ಮಾಡುವಂತೆ ಕೇಳುತ್ತಿದ್ದಾರೆ. ಮೂರು ದಿನಗಳಲ್ಲಿ ಎಲ್ಲಾ ವಾರ್ಡ್ ಗಳಲ್ಲೂ ಈ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಒಂದೊಂದು ವಾರ್ಡ್ ಗೆ ಒಂದು ಸ್ಪ್ರೇ ಯಂತ್ರ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದರು.
ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಣೆ ಯನ್ನು ಎಲ್ಲಾ ಮುಖ್ಯ ರಸ್ತೆ ಗಳಿಗೆ ಮಾಡಲಾಗುವುದು. ಎಲ್ಲಾ ೯ ವಲಯ ಕಚೇರಿ ವ್ಯಾಪ್ತಿಯಲ್ಲಿ ಇದಕ್ಕಾಗಿ ಬೃಹತ್ ವಾಹನಗಳನ್ನು ಬಳಕೆ ಮಾಡಲಾಗುವುದು. ಜೊತೆಗೆ ನಾಗರಿಕರ ಮನವಿಯಂತೆ ಎಲ್ಲಾ ವಾರ್ಡ್ ಗಳಲ್ಲಿ ಫ್ಯೂಮಿಗೇಷನ್ (ಕೀಟನಾಶಕ) ಮಾಡಲು ಕ್ರಮ ಕೈಗೊಂಡಿದ್ದು, ಇದಕ್ಕಾಗಿ ನಮ್ಮಲ್ಲಿ ಮೂರು ವಾಹನಗಳಿವೆ. ಇದು ಕೊರೊನಾ ವೈರಾಣು ಸಂಬಂಧಿಸಿದ್ದಲ್ಲ. ಆದರೆ ಇದು ಮಲೇರಿಯಾ, ಡೆಂಗ್ಯೂ ತಡೆಗೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಸಹಕಾರಿ ಆಗಲಿದೆ ಎಂದು ವಿವರಿಸಿದರು.
ಮಾಂಸ ಹೋಮ್ ಡೆಲವರಿಗೆ ಬೇಕಿದ್ದರೆ ಪಾಸ್ ವ್ಯವಸ್ಥೆ…
ಇಂದಿನಿಂದ (ಮಾ.೨೯) ಮಾಂಸದಂಗಡಿ ತೆರೆಯಲು ಅವಕಾಶ ನೀಡಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಂಸ ಖರೀದಿ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇಲ್ಲವಾದರೆ ಮತ್ತೆ ಮುಚ್ಚಿಸುವ ಅನಿವಾರ್ಯತೆ ಎದುರಾಗಲಿದೆ. ಬೇಕಿದ್ದರೆ ಹೋಮ್ ಡೆಲವರಿಗಾಗಿ ಪಾಲಿಕೆ ಪಾಸ್ ನೀಡಲು ಸಿದ್ಧವಿದೆ.– ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ