ಬಲ್ಲಹಳ್ಳಿ ಬಡಾವಣೆ ಸಂಬಂಧ  ಆ.6ಕ್ಕೆ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಚರ್ಚೆ
ಮೈಸೂರು

ಬಲ್ಲಹಳ್ಳಿ ಬಡಾವಣೆ ಸಂಬಂಧ  ಆ.6ಕ್ಕೆ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಚರ್ಚೆ

August 3, 2018

ಮೈಸೂರು: ವಸತಿ ಬಡಾವಣೆ ರಚಿಸಿ ನಿವೇಶನ ಹಂಚಿಕೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ. ಮೈಸೂರು ಸುತ್ತಮುತ್ತ 5 ಹೊಸ ಬಡಾವಣೆಗಳನ್ನು ನಿರ್ಮಿಸಲು ಮುಂದಾಗಿದೆ. ಬಲ್ಲಹಳ್ಳಿ ಬಡಾವಣೆಯಲ್ಲಿ ಸರಿ ಸುಮಾರು 4 ಸಾವಿರ ಮಂದಿಗೆ ನಿವೇಶನ ಒದಗಿಸಲು ಯೋಜನೆ ರೂಪಿಸುತ್ತಿದೆ. ಈಗಾಗಲೇ ಸರ್ಕಾರದ ಅನುಮೋದನೆ ದೊರೆತಿರುವ ಬಲ್ಲಹಳ್ಳಿ ಬಡಾವಣೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಬಲ್ಲಹಳ್ಳಿ ಯೋಜನೆಯನ್ನು 285 ಎಕರೆ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಿದ್ದು, ಒಟ್ಟು 4,000 ನಿವೇಶನ ರಚಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ಬಲ್ಲಹಳ್ಳಿ ಗ್ರಾಮದಲ್ಲಿ 50:50ರ ಅನುಪಾತದಲ್ಲಿ ರೈತರ ಮನವೊಲಿಸಲು ಪ್ರಯತ್ನ ಮಾಡಲಾಗುತ್ತಿದೆ.

ಈಗಾಗಲೇ ಮುಡಾ ಕಮೀಷ್ನರ್ ಪಿ.ಎಸ್. ಕಾಂತರಾಜು, ವಿಶೇಷ ಭೂಸ್ವಾಧೀನಾಧಿಕಾರಿ ಇಂದ್ರಮ್ಮ, ನಗರ ಯೋಜಕ ಸದಸ್ಯ ಬಿ.ಎನ್. ಗಿರೀಶ ಸೇರಿದಂತೆ ಇತರ ಅಧಿಕಾರಿಗಳು ಎರಡು ಬಾರಿ ಭೂ ಮಾಲೀಕರೊಂದಿಗೆ ಸಮಾಲೋಚಿಸಿದ್ದಾರೆ. 50:50ರ ಅನುಪಾತ ದಡಿ ಬಡಾವಣೆ ಅಭಿವೃದ್ಧಿಗೆ ಬಹುತೇಕ ರೈತರು ಒಪ್ಪಿಗೆ ಸೂಚಿಸಿದ್ದು, ಒಂದು ಎಕರೆ ಭೂಮಿ ನೀಡಿದ್ದಲ್ಲಿ, ಅದರಲ್ಲಿ ಅಭಿವೃದ್ಧಿ ಗೊಂಡ ನಂತರ ಲಭ್ಯವಾಗುವ ನಿವೇಶನಗಳ ಪೈಕಿ (ಸಿಎ ನಿವೇಶನ, ಮೂಲೆ ನಿವೇಶನ, ಪಾರ್ಕು, ಓಪನ್ ಸ್ಪೇಸ್, ರಸ್ತೆ ಹೊರತು ಪಡಿಸಿ) ಶೇ.50ರಷ್ಟನ್ನು ಭೂ ಮಾಲೀಕರಿಗೆ ಬಿಟ್ಟುಕೊಡುವ ಮುಡಾ ಪ್ರಸ್ತಾವಕ್ಕೆ ರೈತರು ಸಮ್ಮತಿಸಿದ್ದಾರೆ. ಈ ಸಂಬಂಧ ರೈತರೊಂದಿಗೆ ಸಮಾಲೋಚನೆ ನಡೆಸಿ ಒಪ್ಪಂದ ಪತ್ರಕ್ಕೆ ಸಹಿ ಪಡೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆ ಭಾಗದ ಶಾಸಕ ಜಿ.ಟಿ. ದೇವೇಗೌಡರು

ಆಗಸ್ಟ್ 6ರಂದು ಬೆಳಿಗ್ಗೆ 9 ಗಂಟೆಗೆ ಬಲ್ಲಹಳ್ಳಿ ಗ್ರಾಮದಲ್ಲಿ ಸಭೆ ನಡೆಸುವರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ಅಭಿವೃದ್ಧಿಪಡಿಸಿ ರಸ್ತೆ, ನೀರು, ಒಳ ಚರಂಡಿ, ಪಾರ್ಕು ಇತ್ಯಾದಿ ಮೂಲ ಸೌಕರ್ಯಗಳೊಂದಿಗೆ ಬಡಾವಣೆ ನಿರ್ಮಿಸು ತ್ತದೆ. ತದ ನಂತರ ಲಭ್ಯವಾಗುವ ನಿವೇಶನಗಳ ಪೈಕಿ ಶೇ.50ರಷ್ಟನ್ನು ರೈತರಿಗೆ ಬಿಟ್ಟುಕೊಟ್ಟು, ಅವರು ಹೇಳಿದವರಿಗೆ ನೋಂದಣಿ ಹಾಗೂ ಟೈಟಲ್ ಡೀಡ್ ನೋಂದಣಿ ಮಾಡಿಕೊಡುತ್ತದೆಯಾದ್ದರಿಂದ ಭೂ ಮಾಲೀಕರಿಗೆ ಹೆಚ್ಚು ಲಾಭವಾಗುತ್ತದೆ ಎಂಬುದನ್ನು ಸಚಿವರು ಮನದಟ್ಟು ಮಾಡಿಕೊಡಲಿದ್ದಾರೆ.

ಬಡಾವಣೆ ಅಭಿವೃದ್ಧಿಪಡಿಸಿದ ತಕ್ಷಣವೇ ಲಭ್ಯವಾದ ನಿವೇಶನವನ್ನು ಮಾರಾಟ ಮಾಡಲು ಅವಕಾಶ ವಿರುವುದರಿಂದ ಹಾಗೂ ಮುಡಾ ಬಡಾವಣೆಗೆ ಹೆಚ್ಚು ಬೇಡಿಕೆ ಇರುವ ಕಾರಣ ರೈತರಿಗೆ ವರದಾನವಾಗುತ್ತದೆ ಎಂಬುದನ್ನೂ ಅದೇ ಸಂದರ್ಭ ಮನದಟ್ಟು ಮಾಡಿಕೊಡ ಲಾಗುವುದು. ರೈತರೆಲ್ಲರೂ ಸಮ್ಮತಿಸಿ ಒಪ್ಪಂದಕ್ಕೆ (ಅಗ್ರಿಮೆಂಟ್) ಮುಂದಾದಲ್ಲಿ ತಕ್ಷಣವೇ ಬಲ್ಲಹಳ್ಳಿ ವಸತಿ ಬಡಾವಣೆ ರಚನೆ ಕಾಮಗಾರಿಗೆ ಮುಡಾ ಚಾಲನೆ ನೀಡಲಿದೆ. ಅದೇ ರೀತಿ ಆರ್.ಟಿ.ನಗರ 2ನೇ ಹಂತ, ಸ್ವರ್ಣ ಜಯಂತಿ ನಗರ, ಸರ್ದಾರ್ ವಲ್ಲಭಬಾಯ್ ಪಟೇಲ್ ನಗರ, ನಾಲ್ವಡಿ ಕೃಷ್ಣರಾಜ ಒಡೆಯರ್ ನಗರ ಹಾಗೂ ಶಾಂತವೇರಿ ಗೋಪಾಲಗೌಡ ನಗರ ಬಡಾವಣೆಗೂ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಹಲವು ಬಾರಿ ಮುಡಾ ಕಮೀಷ್ನರ್ ಕಾಂತರಾಜು ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದು, ಡಿಪಿಆರ್ ತಯಾರಿಸಲು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.

Translate »