ಶಾಸಕ ರಾಮದಾಸ್‍ಗೆ ಸರಣಿ ಸಮಸ್ಯೆಗಳ  ದರ್ಶನ ಮುಂದುವರೆದ ಪಾದಯಾತ್ರೆ
ಮೈಸೂರು

ಶಾಸಕ ರಾಮದಾಸ್‍ಗೆ ಸರಣಿ ಸಮಸ್ಯೆಗಳ  ದರ್ಶನ ಮುಂದುವರೆದ ಪಾದಯಾತ್ರೆ

August 3, 2018

ಮೈಸೂರು: ಮೈಸೂರಿನ ವಿದ್ಯಾರಣ್ಯಪುರಂ ಮತ್ತು ವಿಶ್ವೇಶರನಗರ ಪ್ರದೇಶಗಳಲ್ಲಿ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಅವರು 14 ಇಲಾಖೆ ಅಧಿಕಾರಿಗಳೊಡಗೂಡಿ ಇಂದು ಪಾದಯಾತ್ರೆ ನಡೆಸಿದರು.

ಈ ವೇಳೆ ಕೈಗಾರಿಕಾ ಪ್ರದೇಶ ಯಾವುದೇ ಅಭಿವೃದ್ಧಿಯಾಗದೇ ಇರುವುದು ಕಂಡು ಬಂತು. ಈ ಪ್ರದೇಶದ ಬಹುತೇಕ ಎಲ್ಲಾ ರಸ್ತೆಗಳಲ್ಲಿಯೂ ಮಳೆ ನೀರು ಚರಂಡಿಗಳು ಮುಚ್ಚಿ ಹೋಗಿರುವ ಪರಿಣಾಮವಾಗಿ ಮಳೆ ನೀರು ರಸ್ತೆಯಲ್ಲೇ ಹರಿದ ಕಾರಣ ರಸ್ತೆಗಳೆಲ್ಲವೂ ಹಳ್ಳಕೊಳ್ಳಗಳಿಂದ ಕೂಡಿರುವುದನ್ನು ಕಂಡ ಶಾಸಕರು, ಈ ರಸ್ತೆಗಳ ಚರಂಡಿಗಳಲ್ಲಿ ಹೂಳೆತ್ತುವಂತೆಯೂ ಚರಂಡಿಗಳಿಲ್ಲದ ರಸ್ತೆಗಳಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲು ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರಣ್ಯಪುರಂ 22,23 ಮತ್ತು 24ನೇ ಕ್ರಾಸ್‍ನಿಂದ ಆರಂಭವಾಗಿ 30ನೇ ಕ್ರಾಸ್‍ವರೆಗಿನ ಎಲ್ಲಾ ರಸ್ತೆಗಳಲ್ಲಿಯೂ ಮಳೆ ನೀರು ಚರಂಡಿಗೆ ಒಳಚರಂಡಿ ನೀರು ನಿಂತಿರುವುದರಿಂದ ದುರ್ವಾಸನೆ ಬೀರುತ್ತಿದೆ ಎಂದು ಸಾರ್ವಜನಿಕರು ದೂರಿದರು. ಅಲ್ಲದೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದು ವಾರದೊಳಗೆ ಕಾಮಗಾರಿ ಆರಂಭಿಸುವುದಾಗಿ ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಭರವಸೆ ನೀಡಿದರು.

ಈ ವಾರ್ಡ್‍ನಲ್ಲಿ ನಿಗದಿತ ಸಮಯಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಆದ್ದರಿಂದ ಬೆಳಿಗ್ಗೆ ಸಮಯದಲ್ಲಿ ಕುಡಿಯುವ ನೀರು ಹಾಗೂ ದಿನದ 24 ಗಂಟೆ ಬೋರ್‍ವೆಲ್ ನೀರು ಪೂರೈಸಬೇಕೆಂದು, ಅಲ್ಲದೆ, ಪೈಪ್‍ಲೈನ್‍ಗಾಗಿ ಅಗೆದಿರುವ ರಸ್ತೆ ಸರಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿದರು.

ಎಲ್ಲೆಡೆ ಬೀದಿ ದೀಪಗಳ ಸಮಸ್ಯೆ ಕೇಳಿ ಬಂದ ಹಿನ್ನಲೆಯಲ್ಲಿ ಕೃಷ್ಣರಾಜ ಕ್ಷೇತ್ರವನ್ನು ಎಲ್‍ಇಡಿ ದೀಪಗಳ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಪ್ರಧಾನಮಂತ್ರಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳನ್ನು ಶಾಸಕರು ಪರಿಶೀಲನೆ ಮಾಡಿದರು. ಕೆಲವು ಮನೆಗಳ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಮಾತನಾಡಿದ ರಾಮದಾಸ್, ರಾಜ್ಯ ಸರ್ಕಾರದ ಕೇಂದ್ರ ಸರ್ಕಾರಕ್ಕೆ ಯುಟಿಲೈಜೇಷನ್ ಸರ್ಟಿಫಿಕೇಟ್ ನೀಡದ ಕಾರಣ ಕೇಂದ್ರದಿಂದ ಹಣ ಮಂಜೂರಾಗಿಲ್ಲ ಎಂದು ತಿಳಿಸಿದರು. ಅಲ್ಲದೆ, ತಾವು ಆ.7 ರಿಂದ 10ರವರೆಗೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಆ ಸಂದರ್ಭದಲ್ಲಿ ಇಂತಹ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸಲಾಗುವುದು. ಇದೇ ಭಾನುವಾರದಂದು ಕ್ಷೇತ್ರದ ಎಲ್ಲಾ ವಾರ್ಡ್‍ಗಳ ಪಾದಯಾತ್ರೆ ಮುಗಿಯಲಿದ್ದು, ನಂತರ ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಮಂಜೂರಾತಿ ಬಗ್ಗೆ ಕೇಂದ್ರ ಸಚಿವರುಗಳ ಜೊತೆ ಭೇಟಿ ಮಾಡುವುದಾಗಿ ಶಾಸಕರು ತಿಳಿಸಿದರು.

Translate »