ಚಾಮುಂಡಿಬೆಟ್ಟದ ಸರ್ಕಾರಿ ಶಾಲೆಯಲ್ಲಿ ಕಿಡಿಗೇಡಿಗಳಿಂದ ದಾಂಧಲೆ ಪೀಠೋಪಕರಣ ಧ್ವಂಸ, ಪುಸ್ತಕಗಳು ಚೆಲ್ಲಾಪಿಲ್ಲಿ
ಮೈಸೂರು

ಚಾಮುಂಡಿಬೆಟ್ಟದ ಸರ್ಕಾರಿ ಶಾಲೆಯಲ್ಲಿ ಕಿಡಿಗೇಡಿಗಳಿಂದ ದಾಂಧಲೆ ಪೀಠೋಪಕರಣ ಧ್ವಂಸ, ಪುಸ್ತಕಗಳು ಚೆಲ್ಲಾಪಿಲ್ಲಿ

August 3, 2018

ಮೈಸೂರು:  ಚಾಮುಂಡಿ ಬೆಟ್ಟದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚು ತೆಗೆದು ಒಳ ನುಸುಳಿರುವ ಕಿಡಿಗೇಡಿಗಳು, ಹೆಂಚು, ಟೇಬಲ್ ಹಾಗೂ ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.

ಇಂದು ಬೆಳಿಗ್ಗೆ ಶಾಲೆಗೆ ಹೋದಾಗ ಕಿಡಿಗೇಡಿಗಳ ಕೃತ್ಯ ಶಿಕ್ಷಕರು ಹಾಗೂ ಮಕ್ಕಳಿಗೆ ತಿಳಿಯಿತು. ಶಾಲೆಯ ಛಾವಣೆ ಮಂಗಳೂರು ಹೆಂಚುಗಳನ್ನು ತೆಗೆದು, ಕೊಠಡಿಗಿಳಿದಿರುವ ಕಿಡಿಗೇಡಿಗಳು ಪುಸ್ತಕಗಳನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ದಾಂಧಲೆ ನಡೆಸಿದ್ದಾರೆ.

ಬೆಂಚು, ಟೇಬಲ್‍ಗಳನ್ನು ಜಖಂಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದಾವಿಸಿದ ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸುಮಾರು 2.5 ಲಕ್ಷ ರೂ. ಮೌಲ್ಯದ ಪೀಠೋಪಕರಣ ಮತ್ತು ಪುಸ್ತಕಗಳಿಗೆ ಹಾನಿಯಾಗಿದೆ.

ಚಾಮುಂಡಿ ಬೆಟ್ಟದಲ್ಲಿರುವ ಉಪ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಮಹಜರು ಮಾಡಿದರು. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ದಾಂಧಲೆ ಮಾಡಿದಂತೆ ಕಂಡು ಬಂದಿದೆ.

ಕಳ್ಳತನ ಮಾಡಲು ಬಂದಿದ್ದರೆ, ಪೀಠೋಪಕರಣಗಳನ್ನು ಧ್ವಂಸ ಮಾಡುತ್ತಿರಲಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಠಾಣೆ ಇನ್ಸ್‍ಪೆಕ್ಟರ್ ಪ್ರಕಾಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಈ ಹಿಂದೆಯೂ ಶಾಲೆಯಲ್ಲಿ ಇದೇ ಮಾದರಿ ಕೃತ್ಯ ನಡೆದಿತ್ತು. ತದ ನಂತರ ಅಲ್ಲಿಗೆ ಸಿಸಿ ಕ್ಯಾಮರಾ ಅಳವಡಿಸಿ ಎಂದು ಸಲಹೆ ನೀಡಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಿಡಿಗೇಡಿಗಳ ಕೃತ್ಯದಿಂದ ಶಿಕ್ಷಕರು ಕೊಠಡಿಗಳ ಹೊರ ಭಾಗದಲ್ಲೇ ಇಂದು ಮಕ್ಕಳಿಗೆ ಪಾಠ-ಪ್ರವಚನ ಮಾಡಬೇಕಾದ ಸ್ಥಿತಿ ನಿರ್ಮಾಣವಾಯಿತು ಎಂದು ಶಾಲಾ ಶಿಕ್ಷಕರು ತಿಳಿಸಿದರು.

Translate »