ಮೈಸೂರು: ಮೈಸೂರು ಅರಮನೆಗೆ ಹೊಂದಿಕೊಂಡಂತಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದ ಕಾರ್ಯ ಚಟುವಟಿಕೆಗಳು ವಿಜಯನಗರದ ಪರಿಷತ್ತಿನ ಸ್ವಂತ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುತ್ತಿದೆ.
ಅರಮನೆ ಉತ್ತರದ ಜಯರಾಮ ದ್ವಾರದ ಬಳಿ ಇರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದ ದುರಸ್ತಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ನಿರ್ದೇಶನದ ಮೇರೆಗೆ ಸ್ಥಳಾಂತರ ಮಾಡಲಾಗುತ್ತಿದೆ.
ಪರಿಷತ್ತಿನ ಸಭಾಂಗಣದ ದುರಸ್ತಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ವತಿಯಿಂದ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈಗ ಸ್ಥಳಾಂತರ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಸಭಾಂಗಣದಲ್ಲಿದ್ದ ಪೀಠೋಪಕರಣಗಳನ್ನು ಪರಿಷತ್ತಿನ ವಿಜಯನಗರದ ಕಟ್ಟಡಕ್ಕೆ ಸಾಗಿಸಲಾಗಿದೆ. ಸಭಾಂಗಣದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸುವ ಜೊತೆಗೆ ಅಗತ್ಯವಿರುವ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, 1990ರಲ್ಲಿ ಅರಮನೆ ಆವರಣದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಂದಿನಿಂದ ಪರಿಷತ್ತಿನ ಕಾರ್ಯ ಚಟುವಟಿಕೆ ಅರಮನೆ ಉತ್ತರ ದ್ವಾರದ ಸಭಾಂಗಣದಲ್ಲಿ ನಡೆಯುತ್ತಿದೆ. ಇದೀಗ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ವಿಜಯನಗರದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಾಗುತ್ತಿದೆ. ಸೋಮವಾರ ಸಭಾಂಗಣ ಬಿಟ್ಟುಕೊಡಲಿದ್ದೇವೆ ಎಂದು ತಿಳಿಸಿದರು. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ದುರಸ್ತಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಕೈಗೆತ್ತಿಕೊಳ್ಳುತ್ತಿದೆ. ಕಾಮಗಾರಿ ಪ್ರಾರಂಭಗೊಂಡ ಬಳಿಕ ಸುಮಾರು 6 ತಿಂಗಳ ಅವಧಿಯಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.