ಜಿಲ್ಲಾಮಟ್ಟದ ಬ್ಯಾಂಕರ್ಸ್ ಪ್ರಗತಿ ಪರಿಶೀಲನೆ: ಕೊಡಗಿನ ಬೆಳೆಗಾರರ ಸಾಲಮನ್ನಾಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ
ಕೊಡಗು

ಜಿಲ್ಲಾಮಟ್ಟದ ಬ್ಯಾಂಕರ್ಸ್ ಪ್ರಗತಿ ಪರಿಶೀಲನೆ: ಕೊಡಗಿನ ಬೆಳೆಗಾರರ ಸಾಲಮನ್ನಾಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ

September 8, 2018

ಮಡಿಕೇರಿ: ಮಹಾಮಳೆಯಿಂದ ಜಿಲ್ಲೆಯಾದ್ಯಂತ ಕಾಫಿ ಮತ್ತು ಕರಿಮೆಣಸು ಬೆಳೆಗೆ ಶೇ.70ರಷ್ಟು ಹಾನಿಯಾಗಿರುವುದರಿಂದ ಕೊಡಗಿನ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಅಧ್ಯ ಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‍ಗಳ ಸಮನ್ವಯ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್‍ಸಿಂಹ, ಜಿಲ್ಲೆಯ ಮಡಿಕೇರಿ ಹಾಗೂ ಸೋಮವಾರಪೇಟೆ 6 ಗ್ರಾ.ಪಂ.ಗಳು ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಪೂರ್ಣವಾಗಿ ನಾಶವಾಗಿದ್ದು, ಈ ಹಿನ್ನೆಲೆಯಲ್ಲಿ ಆ ಗ್ರಾ.ಪಂ.ವ್ಯಾಪ್ತಿಯ ಜನತೆ ಪಡೆದಿರುವ ಯಾವುದೇ ಸಾಲವನ್ನು 3 ತಿಂಗಳವರೆಗೆ ವಸೂಲು ಮಾಡಲು ಮುಂದಾಗದಿರುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಈ ಅವಧಿಯಲ್ಲಿ ಅವರುಗಳ ಸಾಲವನ್ನು ಮನ್ನಾ ಮಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರಲ್ಲದೆ, ಈ ನಿಟ್ಟಿನಲ್ಲಿ ತಾವುಗಳು ಕೂಡ ಸರಕಾದ ಮಟ್ಟದಲ್ಲಿ ವ್ಯವಹರಿಸುವುದಾಗಿ ಹೇಳಿದರು.

ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಯಿಂದಾಗಿ ಬಹುತೇಕ ಎಲ್ಲಾ ವಿಧದ ಫಸಲು ಶೇ.70ರಷ್ಟು ಹಾನಿಯಾಗಿರು ವುದರಿಂದ ಜಿಲ್ಲೆಯಾದ್ಯಂತ ಮೂರು ತಿಂಗಳ ಕಾಲ ಯಾವುದೇ ಸಾಲ ವಸೂಲಿಗೆ ಮುಂದಾಗಬಾರದು ಎಂದು ಸಲಹೆ ಮಾಡಿದರು.

ಕೊಡಗಿನ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ತಾನು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 2.50 ಕೋಟಿ ರೂ.ಗಳನ್ನು ಒದಗಿಸುವುದಾಗಿ ಇದೇ ಸಂದರ್ಭ ಘೋಷಿಸಿದ ಪ್ರತಾಪ್‍ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ರಾಜ್ಯದ ವಿವಿಧ ಕ್ಷೇತ್ರಗಳ ಶಾಸಕರುಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 57 ಕೋಟಿ ರೂ.ಗಳನ್ನು ಒದಗಿಸಲು ಮುಂದಾಗಿದ್ದು, ಇದಕ್ಕಾಗಿ ಅವರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಬ್ಯಾಂಕ್‍ಗಳು ಕೂಡಾ ತಮ್ಮ ಸಿಎಸ್‍ಆರ್ ನಿಧಿಯಿಂದ ಸಂತ್ರಸ್ಥರ ಪರಿಹಾರ ಕಾರ್ಯಗಳಿಗೆ ನೆರವು ನೀಡುವಂತೆ ಮನವಿ ಮಾಡಿದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಮಹಾಮಳೆ ಹಾಗೂ ಪ್ರಕೃತಿ ವಿಕೋಪದಿಂದ ಇಡೀ ಕೊಡಗಿನ ಜನತೆ ಇಂದು ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ಥರಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಬೆಳೆಗಾರರು ಪಡೆದಿರುವ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರಲ್ಲದೆ, ಈ ಕುರಿತು ನಿರ್ಣಯ ಕೈಗೊಂಡು ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದರು. ಸಂಪೂರ್ಣ ಸಾಲ ಮನ್ನಾ ಸಾಧ್ಯವಾಗದಿದ್ದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ 6 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜನತೆ ಪಡೆದಿರುವ ಸಾಲವನ್ನು ಮುಂದಿನ 5 ವರ್ಷಗಳ ವರೆಗೆ ಮರುಪಾವತಿಗೆ ಒತ್ತಾಯಿಸಬಾರದು. ಅಲ್ಲದೆ ಆ ಬಳಿಕ ಕೂಡಾ ಅಸಲನ್ನು ಮಾತ್ರ ವಸೂಲು ಮಾಡಬೇಕು ಎಂದು ಸಲಹೆ ಮಾಡಿದರು.

ಕೆಲವು ಬ್ಯಾಂಕರ್‌ಗಳು ಕೂಡಾ ಧ್ವನಿಗೂಡಿಸಿ, ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಬ್ಯಾಂಕ್‍ಗಳಿಗೂ ಕಷ್ಟವಾಗುತ್ತದೆ. ಆದರೆ ಸ್ಥಳೀಯವಾಗಿ ಪರಿಹಾರ ನಿಧಿ ಸ್ಥಾಪಿಸಿದಲ್ಲಿ ಬ್ಯಾಂಕ್‍ಗಳು ಕೂಡಾ ಸ್ಪಂದಿಸಬಹುದಲ್ಲದೆ, ಹಲವು ದಾನಿಗಳು ಕೂಡಾ ಆ ಖಾತೆಗೆ ಹಣ ನೀಡಲು ಸಿದ್ಧರಿ ದ್ದಾರೆ ಎಂದು ಗಮನ ಸೆಳೆದರು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ವ್ಯವಹರಿಸುವುದಾಗಿ ಸಂಸದ ಪ್ರತಾಪ್‍ಸಿಂಹ ಹಾಗೂ ಶಾಸಕ ಅಪ್ಪಚ್ಚುರಂಜನ್ ಭರವಸೆ ನೀಡಿದರು.

ಲೀಡ್‍ಬ್ಯಾಂಕ್ ವ್ಯವಸ್ಥಾಪಕ ಗುಪ್ತಾ ಕಾರ್ಪೋ ರೇಷನ್ ಬ್ಯಾಂಕ್ ಮೈಸೂರು ವಲಯದ ಡಿಜಿಎಂ ಎಸ್.ಎಲ್ ಗಣಪತಿ, ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕ ಎಂ.ಸಿ.ನಾಣಯ್ಯ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ ಹಾಜರಿದ್ದರು.

Translate »