ಟ್ರಬಲ್ ಶೂಟರ್ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?
ಮೈಸೂರು

ಟ್ರಬಲ್ ಶೂಟರ್ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?

December 16, 2019

ಬೆಂಗಳೂರು, ಡಿ.15-ನಾಯಕರ ಕಚ್ಚಾಟದಿಂದ ರಾಜ್ಯದಲ್ಲಿ ಪಕ್ಷದ ಪುನಶ್ಚೇತನಕ್ಕೆ ಕಾಂಗ್ರೆಸ್ ಹೈಕಮಾಂಡ್ ಗಂಭೀರ ಪ್ರಯತ್ನ ಆರಂಭಿಸಿದ್ದು, ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಪಕ್ಷದ ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವ ರಿಗೆ ಕಟ್ಟಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನನುಭವಿಸಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ವಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿದ್ದಾರೆ. ಇವ ರಲ್ಲಿ ದಿನೇಶ್ ಗುಂಡೂರಾವ್ ರಾಜೀನಾಮೆಯನ್ನು ಅಂಗೀ ಕರಿಸಿ, ಕೆಪಿಸಿಸಿಗೆ ಹೊಸ ಸಾರಥಿಯನ್ನು ನೇಮಕ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ವಿಪಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಸಿದ್ದರಾಮಯ್ಯ ಅವರ ಮನವೊಲಿ ಸಲು ಹೈಕಮಾಂಡ್ ಚಿಂತನೆ ನಡೆಸಿದೆ. ಇದಕ್ಕೆ ಪೂರಕ ವಾಗಿ ರಾಜ್ಯ ಕಾಂಗ್ರೆಸ್‍ನ ಹಲವು ಮುಖಂಡರು ಸಿದ್ದರಾಮಯ್ಯ ಅವರನ್ನೇ ವಿಪಕ್ಷ ಸ್ಥಾನದಲ್ಲಿ ಮುಂದುವರೆಸುವುದು ಒಳಿತು ಎಂದು ವರಿಷ್ಠರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಹೊಸ ವರ್ಷದಲ್ಲಿ ಕ್ರಿಯಾಶೀಲ ಹಾಗೂ ಉತ್ಸಾಹಿ ಹೊಸ ಮುಖಗಳನ್ನಿಟ್ಟುಕೊಂಡು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಜರಿಗೆ ವರಿಷ್ಠರು ತಯಾರಿ ನಡೆಸಿ ದ್ದಾರೆ. ಸಾಂಪ್ರದಾಯಿಕ ಮತ ಬ್ಯಾಂಕ್ ಉಳಿಸಿಕೊಂಡು ಪಕ್ಷದ ತೆಕ್ಕೆಯಿಂದ ದೂರ ಸರಿಯುತ್ತಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಓಲೈಕೆ ಮಾಡಲು ಹೈಕ ಮಾಂಡ್ ಬಯಸಿದೆ ಎಂದು ಹೇಳಲಾಗಿದ್ದು, ಸಿದ್ದರಾಮಯ್ಯ ಹೊರತುಪಡಿಸಿದರೆ ರಾಜ್ಯದಲ್ಲಿ ಮಾಸ್ ಲೀಡರ್ ಆಗಿ ಹೊರ ಹೊಮ್ಮಿರುವ ಒಕ್ಕಲಿಗ ಮುಖಂಡ ಡಿ.ಕೆ.ಶಿವ ಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿ ಪಕ್ಷ ಬಲಪಡಿಸುವ ಬಗ್ಗೆ ವರಿಷ್ಠರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸ್ಥಿರ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಇನ್ನುಳಿದ ಮೂರೂವರೆ ವರ್ಷ ಕಾಲ ಕ್ರಿಯಾಶೀಲರಾಗಿ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡುವಲ್ಲಿ ಡಿ.ಕೆ.ಶಿವಕುಮಾರ್ ಸಫಲರಾಗುತ್ತಾರೆ ಎಂಬ ವಿಶ್ವಾಸ ಕಾಂಗ್ರೆಸ್ ಹೈಕಮಾಂಡ್‍ನದ್ದು. ಒಂದು ವೇಳೆ ವಿಪಕ್ಷ ಸ್ಥಾನದಲ್ಲಿ ಮುಂದುವರೆಯಲು ಸಿದ್ದರಾಮಯ್ಯ ಸುತರಾಂ ಒಪ್ಪದಿದ್ದರೆ ಅವರನ್ನು ಮುಂಚೂಣಿ ಸ್ಥಾನವೊಂದರಲ್ಲಿ ಉಳಿಸಿಕೊಂಡು ಡಾ. ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್ ಮತ್ತು ಎಚ್.ಕೆ.ಪಾಟೀಲ್ ಸೇರಿ ಹಲವು ನಾಯಕರಿಗೆ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ನೀಡುವ ಬಗ್ಗೆಯೂ ಹೈಕಮಾಂಡ್‍ನಲ್ಲಿ ಚರ್ಚೆ ನಡೆದಿದೆ. ಅದೇ ವೇಳೆ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ, ವೀರಪ್ಪ ಮೊಯ್ಲಿ ಅವರುಗಳನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ `ಭಾರತ್ ಬಚಾವೋ’ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿರುವ ಕಾಂಗ್ರೆಸ್ ನಾಯಕರ ಜೊತೆ ಈ ಸಂಬಂಧ ವರಿಷ್ಠರು ಸಮಾ ಲೋಚನೆ ಆರಂಭಿಸಿದ್ದಾರೆ. ಇದರ ಭಾಗವಾಗಿ ರಾಜ್ಯದ ಕೆಲವು ನಾಯಕರ ಜೊತೆ ಎಐಸಿಸಿ ಮುಖಂಡರುಗಳಾದ ಅಹ್ಮದ್ ಪಾಟೀಲ್, ಮಧುಸೂದನ ಮಿಸ್ತ್ರಿ ಮತ್ತು ಕೆ.ಸಿ.ವೇಣು ಗೋಪಾಲ್ ಅವರು ಸಮಾಲೋಚನೆ ನಡೆಸಿ, ಅವರುಗಳ ಅಭಿಪ್ರಾಯಗಳನ್ನು ಪಡೆದಿದ್ದಾರೆ.

Translate »