ಕರುಣಾನಿಧಿ ಇನ್ನಿಲ್ಲ
ದೇಶ-ವಿದೇಶ

ಕರುಣಾನಿಧಿ ಇನ್ನಿಲ್ಲ

August 8, 2018

ಚೆನ್ನೈ:  ದ್ರಾವಿಡ ಚಳುವಳಿಯ ಹೋರಾಟಗಾರ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ಸಂಜೆ ನಿಧನರಾದರು. 94 ವರ್ಷ ವಯೋಮಾನದ ಅವರು ತೀವ್ರ ಅನಾರೋಗ್ಯದಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

1924ರ ಜೂನ್ 3 ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ತಿರುವಾರೂರ್‍ನಲ್ಲಿ ಜನಿಸಿದ ಅವರ ಮೂಲ ಹೆಸರು ದಕ್ಷಿಣಾಮೂರ್ತಿ. ತಮ್ಮ 14ನೇ ವರ್ಷದಲ್ಲೇ ರಾಜಕೀಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು, ಪೆರಿಯಾರ್ ಅವರ ದ್ರಾವಿಡ ಕಳಗಂನಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಿಂದೂ ವಿರೋಧಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ಗುರು ಅಣ್ಣಾದೊರೈ ಅವರು ದ್ರಾವಿಡ ಕಳಗಂನಿಂದ ಬೇರ್ಪಟ್ಟು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ರಾಜಕೀಯ ಪಕ್ಷ ಸ್ಥಾಪಿಸಿದಾಗ ಕರುಣಾನಿಧಿಯವರು ಸಹ ಅದರಲ್ಲಿ ಸೇರ್ಪಡೆಗೊಂಡರು. ಅವರಿಗೆ ಪಕ್ಷದ ಖಜಾಂಚಿ ಸ್ಥಾನ ನೀಡಿದ ಅಣ್ಣಾದೊರೈ, ಸ್ಥಾನಕ್ಕೆ ತಕ್ಕಂತೆ ಅವರಿಗೆ ‘ಕರುಣಾನಿಧಿ’ ಎಂದು ನಾಮಕರಣ ಮಾಡಿದರು. ಚಲನಚಿತ್ರಗಳಿಗೆ ಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ ಕರುಣಾನಿಧಿ ಯವರು, ತಾವು ಕಥೆ ಬರೆದಿದ್ದ ಚಿತ್ರಗಳಲ್ಲಿಯೇ ತಮಿಳುನಾಡಿನ ಹೆಸರಾಂತ ನಟರಾದ ಶಿವಾಜಿ ಗಣೇಶನ್ ಮತ್ತು ಎಂಜಿಆರ್ ಪರಿಚಯವಾಗಿದ್ದು ವಿಶೇಷ.

ತಮಿಳುನಾಡಿನಲ್ಲಿ ಮೊಟ್ಟಮೊದಲ ಬಾರಿಗೆ ದ್ರಾವಿಡ ಪಕ್ಷಗಳ ಆಡಳಿತವು ಅಣ್ಣಾದೊರೈ ನೇತೃತ್ವದಲ್ಲಿ 1967ರಲ್ಲಿ ಸ್ಥಾಪನೆಯಾಯಿತು. ಅಣ್ಣಾದೊರೈ ಯವರ ನಿಧನದ ನಂತರ 1969ರ ಫೆಬ್ರವರಿ 10 ರಂದು ಕರುಣಾನಿಧಿ ಮೊದಲ ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದರು. ನಂತರ ನಡೆದ ಚುನಾವಣೆ ಯಲ್ಲೂ ಸಹ ಡಿಎಂಕೆ ಗೆಲುವು ಸಾಧಿಸಿ ಮತ್ತೇ ಅವರು ಮುಖ್ಯಮಂತ್ರಿಯಾದರು. 1976ರಲ್ಲಿ ಕೇಂದ್ರ ಸರ್ಕಾರವು ತಮಿಳುನಾಡು ಸರ್ಕಾರವನ್ನು ವಜಾಗೊಳಿಸುವ ವೇಳೆಗೆ ಏಳು ವರ್ಷ ಮುಖ್ಯ ಮಂತ್ರಿಯಾಗಿದ್ದ ಕರುಣಾನಿಧಿ ಅಧಿಕಾರ ಕಳೆದುಕೊಂಡರು. ಅಷ್ಟರಲ್ಲಾಗಲೇ ಡಿಎಂಕೆ ತೊರೆದು ಎಐಎಡಿಎಂಕೆ ಸ್ಥಾಪಿಸಿದ್ದ ಎಂಜಿಆರ್ ಮುಖ್ಯಮಂತ್ರಿ ಪಟ್ಟಕ್ಕೇರಿದರು. ಅವರು ಜೀವಂತವಾಗಿರು ವವರೆವಿಗೂ ಕರುಣಾನಿಧಿ ಅವರಿಗೆ ಮುಖ್ಯಮಂತ್ರಿ  ಪಟ್ಟ ಲಭಿಸದೇ ವಿರೋಧ ಪಕ್ಷದಲ್ಲಿ ಕೂರುವಂತಾಯಿತು. ಎಂಜಿಆರ್ ನಿಧನದ ನಂತರ ಮತ್ತೆ ಕರುಣಾನಿಧಿ ಮುಖ್ಯಮಂತ್ರಿ ಆದರು. ಒಟ್ಟಾರೆ ಅವರು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಸುದೀರ್ಘ 50 ವರ್ಷ ಕಾಲ ಡಿಎಂಕೆ ಅಧ್ಯಕ್ಷರಾಗಿ ದಾಖಲೆ ಬರೆದಿರುವ ಕರುಣಾನಿಧಿ, ಚಿತ್ರಕಥೆ, ಸಂಭಾಷಣೆ, ಕವನಗಳು ಮುಂತಾದವುಗಳಿಂದ ಜನಮನ್ನಣೆ ಗಳಿಸಿ, ಅವರಿಗೆ ‘ಕಲೈಜ್ಞರ್’ ಎಂಬ ಬಿರುದನ್ನು ತಂದುಕೊಟ್ಟಿತು. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರುವ ಮುನ್ನ ಅ ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಸಲುವಾಗಿ ‘ಮುರಸೊಲಿ’ ಎಂಬ ದಿನಪತ್ರಿಕೆಯನ್ನು ಹೊರತಂದ ಕರುಣಾನಿಧಿಯವರು, ಆ ಪತ್ರಿಕೆಯಲ್ಲಿ ‘ಉಡನ್ ಪಿರಪ್ಪೆ’ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಪತ್ರಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದವು. ವಿಶೇಷವೆಂದರೆ ಅವೆಲ್ಲವೂ ರಾಜಕೀಯ ಪತ್ರಗಳೇ ಆಗಿದ್ದು ತಮಿಳುನಾಡಿನಲ್ಲಿ ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಲು ಸಹಕಾರಿಯಾಗಿತ್ತು.

ತಮ್ಮ ರಾಜಕೀಯ ಜೀವನದ ಪ್ರಾರಂಭದಲ್ಲಿ ಹಿಂದಿ ವಿರೋಧಿ ಹೋರಾಟವನ್ನು ನಡೆಸಿದ್ದ ಕರುಣಾನಿಧಿ, ಆನಂತರ ಹಿಂದೂ ವಿರೋಧಿ ಹೋರಾಟಗಳಲ್ಲಿ ತೊಡಗಿಸಿ ಕೊಂಡು ಮೂಢ ನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದರು. ತುರ್ತು ಪರಿಸ್ಥಿತಿ ವೇಳೆ ನಡೆಸಿದ ಹೋರಾಟಕ್ಕಾಗಿ ಅವರು ಜೈಲು ಸೇರಿದ್ದರು.

ಕರುಣಾನಿಧಿ ಪದ್ಮಾವತಿ ಅಮ್ಮಾಳ್, ದಯಾಳು ಅಮ್ಮಾಳ್ ಮತ್ತು ರಾಜಾತ್ತಿ ಅಮ್ಮಾಳ್ ಹೀಗೆ ಮೂವರನ್ನು ವಿವಾಹವಾಗಿದ್ದರು. ಪದ್ಮಾವತಿ ಅಮ್ಮಾಳ್ ನಿಧನದ ನಂತರ ಅವರು ದಯಾಳು ಅಮ್ಮಾಳ್ ಮತ್ತು ರಾಜಾತ್ತಿ ಅಮ್ಮಾಳ್ ಅವರನ್ನು ವಿವಾಹವಾಗಿದ್ದು, ಇವರಿಬ್ಬರೂ ಮಾತ್ರವಲ್ಲದೇ ಮಕ್ಕಳಾದ ಮುತ್ತು, ಮಾಜಿ ಕೇಂದ್ರ ಸಚಿವ ಅಳಗಿರಿ, ಮಾಜಿ ಉಪಮುಖ್ಯಮಂತ್ರಿ ಸ್ಟಾಲಿನ್, ರಾಜ್ಯಸಭಾ ಸದಸ್ಯೆ ಕನಿಮೊಳಿ, ಸೆಲ್ವಿ ಮತ್ತು ತಮಿಳರಸು ಅವರನ್ನು ಅಗಲಿದ್ದಾರೆ.
ಸಮಾಧಿ ಸಂಘರ್ಷ

ಇಂದು ವಿಚಾರಣೆ ಮುಂದುವರಿಕೆ

ಚೆನ್ನೈ:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿಧನದಿಂದಾಗಿ ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದ್ದರೆ, ಅವರ ಸಮಾಧಿ ಸ್ಥಳದ ಬಗ್ಗೆ ಎಐಎಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ಮತ್ತು ಡಿಎಂಕೆ ನಡುವೆ ಸಮಾಧಿ ಸಂಘರ್ಷ ಶುರು ವಾಗಿದೆ. ಕರುಣಾನಿಧಿ ಅವರ ರಾಜಕೀಯ ಗುರುಗಳೂ ಆದ ದಿ. ಮಾಜಿ ಮುಖ್ಯ ಮಂತ್ರಿ ಅಣ್ಣಾದೊರೈ ಸಮಾಧಿ ಪಕ್ಕದಲ್ಲೇ ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಸಮಾಧಿಗೆ ಅವಕಾಶ ನೀಡಬೇಕೆಂದು ಡಿಎಂಕೆ ಸಲ್ಲಿಸಿದ್ದ ಮನವಿಯನ್ನು ತಮಿಳುನಾಡು ಸರ್ಕಾರ ಕಾನೂನು ಬಿಕ್ಕಟ್ಟಿನ ಕಾರಣ ನೀಡಿ ನಿರಾಕರಿಸಿದೆ. ಆದರೆ, ಸರ್ದಾರ್ ವಲ್ಲಭಭಾಯ್ ಪಟೇಲ್ ರಸ್ತೆಯಲ್ಲಿರುವ ಗಾಂಧಿ ಮಂಟಪದ ಬಳಿ ಕರುಣಾನಿಧಿ ಸಮಾಧಿಗಾಗಿ 2 ಎಕರೆ ಜಾಗ ಕೊಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಡಿಎಂಕೆ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಕರುಣಾನಿಧಿಯವರು ಅಸುನೀಗಿದ ಕಾವೇರಿ ಆಸ್ಪತ್ರೆ ಮುಂಭಾಗ ನೆರೆದಿದ್ದ ಸಾವಿರಾರು
ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿದರು. ಪೊಲೀಸರು ಅಳವಡಿಸಿದ್ದ ಬ್ಯಾರಿಕ್ಯಾಡ್‍ಗಳನ್ನು ಬೀಳಿಸಿ ಆಕ್ರೋಶ ವ್ಯಕ್ತಪಡಿ ಸಿದರು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರನ್ನು ಚದುರಿಸಿದರು. ಈ ಮಧ್ಯೆ ಮರೀನಾ ಬೀಚ್‍ನಲ್ಲೇ ಕರುಣಾನಿಧಿ ಸಮಾಧಿಗೆ ಜಾಗ ನೀಡಬೇಕೆಂದು ಡಿಎಂಕೆ ಹೈಕೋರ್ಟ್ ಮೊರೆ ಹೋಗಿದೆ.

ಇಂದು ರಾತ್ರಿ ಮದ್ರಾಸ್ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲವಾಡಿ ಜಿ. ರಮೇಶ್ ಅವರ ಮುಂದೆ ಡಿಎಂಕೆ ಅರ್ಜಿ ಸಲ್ಲಿಸಿದ್ದು, ಇಂದು ರಾತ್ರಿಯೇ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿತು. ಡಿಎಂಕೆ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗಳ ಅದಿಕೃತ ನಿವಾಸದಲ್ಲೇ ಹೈಕೋರ್ಟ್ ದ್ವಿಸದಸ್ಯ ಪೀಠದ ವಿಚಾರಣೆ ಆರಂಭವಾಗಿದೆ. ಮರೀನಾ ಬೀಚ್‍ನಲ್ಲಿ ಕರುಣಾನಿಧಿಯವರ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಡಿಎಂಕೆ ವಕೀಲರು ವಾದ ಮಂಡಿಸುತ್ತಿದ್ದಾರೆ. ಅದೇ ವೇಳೆ ಮರೀನಾ ಬೀಚ್‍ನಲ್ಲಿ ಸಮಾಧಿಗಳನ್ನು ನಿರ್ಮಿಸಿ, ಸ್ಮಶಾನ ಮಾಡಬಾರದೆಂದು ಹೈಕೋರ್ಟ್‍ಗೆ ಕಳೆದ ವಾರ 5 ಪಿಐಎಲ್‍ಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಡಿಎಂಕೆ ವಕೀಲ ದೊರೆಸ್ವಾಮಿ ಮತ್ತು ಬಾಲು ಸೇರಿದಂತೆ ನಾಲ್ವರು ತಮ್ಮ ಪಿಐಎಲ್‍ಗಳನ್ನು ಇಂದು ರಾತ್ರಿ ಹಿಂಪಡೆದಿದ್ದು, ಸಾಮಾಜಿಕ ಹೋರಾಟ ಗಾರ ಟ್ರಾಫಿಕ್ ರಾಮಸ್ವಾಮಿ ತಮ್ಮ ಪಿಐಎಲ್ ಹಿಂಪಡೆಯಲು ನಿರಾಕರಿಸಿದ್ದಾರೆ. ಡಿಎಂಕೆ ವಕೀಲರ ವಾದ ಅಂತಿಮಗೊಂಡಿದ್ದು, ಸರ್ಕಾರಿ ಪರ ವಕೀಲರ ವಾದವನ್ನು ನ್ಯಾಯಮೂರ್ತಿಗಳು ಆಲಿಸಬೇಕಾಗಿದೆ. ಈ ಹಂತದಲ್ಲಿ ನಾಳೆ (ಬುಧವಾರ) ಬೆಳಿಗ್ಗೆ 8 ಗಂಟೆಗೆ ವಿಚಾರಣೆಯನ್ನು ಮುಂದೂಡಲಾಗಿದೆ.

ದೇಶಾದ್ಯಂತ ಇಂದು ಶೋಕಾಚರಣೆ

ಎಂ. ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ನಾಳೆ (ಆ.8) ಒಂದು ದಿನ ಶೋಕಾಚರಣೆ ಘೋಷಿಸಿದೆ. ಕರುಣಾನಿಧಿ ಗೌರವಾರ್ಥ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಬೇಕು. ಯಾವುದೇ ರೀತಿಯ ಅಧಿಕೃತ ಸಾರ್ವಜನಿಕ ಸಭೆ ಸಮಾರಂಭಗಳು ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ರಾಜ್ಯದಲ್ಲೂ ಶೋಕಾಚರಣೆ: ಕರುಣಾನಿಧಿ ಗೌರವಾರ್ಥ ರಾಜ್ಯ ಸರ್ಕಾರ ನಾಳೆ ಒಂದು ದಿನ ಶೋಕಾಚರಣೆ ಘೋಷಿಸಿದ್ದು, ಕೆಂಪೇಗೌಡ ಜಯಂತಿ ಯನ್ನು ಮೂರು ದಿನ ಮುಂದೂಡಿದೆ. ಸಭೆ ಸಮಾರಂಭ ಹಾಗೂ ಮನ ರಂಜನಾ ಕಾರ್ಯಕ್ರಮಗಳನ್ನು ರದ್ದುಪಡಿಸಿದೆ.

ತಮಿಳುನಾಡಿನಲ್ಲಿ ವಾರ ಶೋಕಾಚರಣೆ: ತಮಿಳುನಾಡು ಸರ್ಕಾರವು ನಾಳೆ ಒಂದು ದಿನ ರಜೆ ಘೋಷಿಸಿದ್ದು, ಒಂದು ವಾರ ಶೋಕಾಚರಣೆ ಘೋಷಿಸಿದೆ.

Translate »