ಕರುಣಾನಿಧಿ ಅಂತ್ಯಕ್ರಿಯೆ
ದೇಶ-ವಿದೇಶ

ಕರುಣಾನಿಧಿ ಅಂತ್ಯಕ್ರಿಯೆ

August 9, 2018

ಚೆನ್ನೈ: ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ ಮರಿನಾ ಬೀಚ್‍ನಲ್ಲಿರುವ ಅವರ ರಾಜಕೀಯ ಗುರು ಅಣ್ಣಾ ದೊರೈ ಅವರ ಸಮಾಧಿಗೆ ಹೊಂದಿ ಕೊಂಡಂತೆ ಸಾಂಪ್ರದಾಯಿಕ ವಿಧಿ-ವಿಧಾನಗಳಿಲ್ಲದೆ ದ್ರಾವಿಡ ವಿಧಿ-ವಿಧಾನದಂತೆ ನಡೆಯಿತು.

ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್‍ನಲ್ಲಿ ಜಾಗ ನೀಡಲು ತಮಿಳು ನಾಡು ಸರ್ಕಾರ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಡಿಎಂಕೆ ಮಂಗಳವಾರ ರಾತ್ರಿಯೇ ಹೈಕೋರ್ಟ್ ಮೊರೆ ಹೋಗಿತ್ತು. ಮದರಾಸ್ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲು ವಾಡಿ ಜಿ.ರಮೇಶ್ ಅವರು ತಮ್ಮ ನಿವಾಸ ದಲ್ಲೇ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ವಿಚಾರಣೆ ಆರಂಭಿಸಿದ್ದರು. ರಾತ್ರಿ ಸುಮಾರು 1.30ರವರೆಗೆ ವಿಚಾರಣೆ ನಡೆಸಿದ್ದ ಅವರು, ಇಂದು ಬೆಳಿಗ್ಗೆ 8 ಗಂಟೆಗೆ ವಿಚಾರಣೆ ಮುಂದೂಡಿದ್ದರು. ಅಂತಿಮವಾಗಿ ಇಂದು ಬೆಳಿಗ್ಗೆ ಕರುಣಾನಿಧಿ ಅಂತ್ಯ ಸಂಸ್ಕಾರವನ್ನು ಮರೀನಾ ಬೀಚ್‍ನಲ್ಲಿ ನಡೆಸಬಹುದೆಂದು ನ್ಯಾಯಾಧೀಶರು ಆದೇಶ ನೀಡಿದ ಹಿನ್ನೆಲೆಯಲ್ಲಿ ಅಣ್ಣಾ ದೊರೈ ಸಮಾಧಿಗೆ ಹೊಂದಿ ಕೊಂಡಂತೆ ಕರುಣಾನಿಧಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಇಂದು ಮುಂಜಾನೆ 4 ಗಂಟೆಗೆ ರಾಜಾಜಿ ಹಾಲ್‍ನಲ್ಲಿ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಸಾರ್ವ ಜನಿಕ ದರ್ಶನಕ್ಕೆ ಇಡಲಾಗಿತ್ತು. ಅವರ ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನಕ್ಕಾಗಿ ಮುಗಿ ಬಿದ್ದ ಕಾರಣ ಉಂಟಾದ ನೂಕು-ನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಇಬ್ಬರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪೊನ್.ರಾಧಾಕೃಷ್ಣನ್, ಬಿಜೆಪಿ ತಮಿಳ್ನಾಡು ರಾಜ್ಯಾಧ್ಯಕ್ಷೆ ತಮಿಳಿಸೈ ಸೌಂದರ ರಾಜನ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಚಿತ್ರರಂಗದ ಗಣ್ಯರು ಅಗಲಿದ ಕರುಣಾನಿಧಿ ಅವರ ಅಂತಿಮ ದರ್ಶನ ಪಡೆದರು.

ಸಂಜೆ 4 ಗಂಟೆ ನಂತರ ಕರುಣಾನಿಧಿ ಅವರ ಅಂತಿಮ ಯಾತ್ರೆ ರಾಜಾಜಿ ಹಾಲ್‍ನಿಂದ ಹೊರಟು ಕಾಮರಾಜರ್ ರಸ್ತೆ, ವಾಲಾಜಾ, ಅಣ್ಣಾ ರಸ್ತೆ ಮೂಲಕ ಅಲಂಕೃತ ಮಿಲಿಟರಿ ವಾಹನದಲ್ಲಿ ಮರೀನಾ ಬೀಚ್ ತಲುಪಿತು.

ಅಂತಿಮ ಯಾತ್ರೆ ಸಾಗಿದ ರಸ್ತೆಗಳ ಇಕ್ಕೆಲಗಳಲ್ಲೂ ಲಕ್ಷಾಂತರ ಅಭಿಮಾನಿಗಳು ಡಿಎಂಕೆ ಧ್ವಜದೊಂದಿಗೆ ನಿಂತು ತಮ್ಮ ನಾಯಕನ ಅಂತಿಮ ದರ್ಶನ ಪಡೆದರು. ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ಪಾರ್ಥಿವ ಶರೀರವಿದ್ದ ಮಿಲಿಟರಿ ವಾಹನ ಏರದೇ ಅದರ ಹಿಂದೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ನಡಿಗೆಯಲ್ಲೇ ಮರೀನಾ ಬೀಚ್ ತಲುಪಿದರು. ಮರೀನಾ ಬೀಚ್‍ನಲ್ಲಿ ಸಕಲ ಸರ್ಕಾರಿ ಗೌರವ ಹಾಗೂ ಸೇನಾ ಗೌರವ ಸಲ್ಲಿಸಿದ ನಂತರ ಕರುಣಾನಿಧಿ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ತೆಗೆದು ಸ್ಟಾಲಿನ್ ಅವರಿಗೆ ಮಿಲಿಟರಿ ಅಧಿಕಾರಿಗಳು ಹಸ್ತಾಂತರಿಸಿದರು. ಅಂತಿಮ ಸಂಸ್ಕಾರದ ವೇಳೆ ತಮಿಳುನಾಡು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕರುಣಾನಿಧಿ ಅವರ ಒಡನಾಡಿ ಅನ್ಬಳಗನ್, ತಮಿಳುನಾಡು ಸಚಿವ ಜಯಕುಮಾರ್ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು. ಕರುಣಾನಿಧಿ ಅವರ ಪಾರ್ಥಿವ ಶರೀರವಿದ್ದ ಶ್ರೀಗಂಧ ಪೆಟ್ಟಿಗೆಯನ್ನು ಗುಂಡಿಯೊಳಗೆ ಇಳಿಸುವ ಮುನ್ನ ಅವರ ಪತ್ನಿ ರಾಜಾತಿ ಅಮ್ಮಾಳ್, ಪುತ್ರರಾದ ಅಳಗಿರಿ, ಸ್ಟಾಲಿನ್, ತಮಿಳರಸು, ಪುತ್ರಿಯರಾದ ಸೆಲ್ವಿ, ಕನಿಮೊಳಿ ಹಾಗೂ ಕುಟುಂಬ ವರ್ಗದವರು ಅಂತಿಮ ನಮನ ಸಲ್ಲಿಸಿದರು. ಗುಂಡಿಯೊಳಗೆ ಪಾರ್ಥಿವ ಶರೀರ ಇಳಿಸಿದ ನಂತರ ಕುಟುಂಬ ವರ್ಗದವರು ಪಾರ್ಥಿವ ಶರೀರದ ಮೇಲೆ ಹೂವುಗಳನ್ನು ಚೆಲ್ಲಿ, ನಮಿಸಿದರು.

Translate »