ಪರಿಸರ ಸ್ವಚ್ಛತೆಯಿಂದ ಉತ್ತಮ ಆರೋಗ್ಯ: ಸ್ವಚ್ಛತಾ ಆಂದೋಲನದಲ್ಲಿ ಸಿಇಓ ಜಗದೀಶ್ ಅಭಿಪ್ರಾಯ
ಹಾಸನ

ಪರಿಸರ ಸ್ವಚ್ಛತೆಯಿಂದ ಉತ್ತಮ ಆರೋಗ್ಯ: ಸ್ವಚ್ಛತಾ ಆಂದೋಲನದಲ್ಲಿ ಸಿಇಓ ಜಗದೀಶ್ ಅಭಿಪ್ರಾಯ

August 10, 2018

ಹಾಸನ:  ‘ಪರಿಸರ ಸ್ವಚ್ಛತೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ, ಎಲ್ಲರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಸಲಹೆ ನೀಡಿದರು.

ನಗರದ ಆಕಾಶವಾಣಿ ಕೇಂದ್ರ ಹಿಂಭಾಗವಿರುವ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರು ವಾರ ಭಾರತ ಸೇವಾದಳ, ಹಸಿರು ಭೂಮಿ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್‍ನಿಂದ ಕ್ವಿಟ್ ಇಂಡಿಯಾ ಚಳವಳಿ ನೆನಪಿಗಾಗಿ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಜನರು ತಮ್ಮ ಮನೆಯ ಮುಂದೆ ತಾವೇ ಕಸವನ್ನು ಹಾಕಿ ಅನೈರ್ಮಲ್ಯ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ಹರಡಲು ದಾರಿ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಪ್ರತಿಯೊಬ್ಬರು ಪರಿಸರ ಸ್ವಚ್ಛತೆಗೆ ಗಮನ ಹರಿಸಬೇಕು. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಅಲ್ಲಿ ಬಿಸಾಡದೇ ನಗರ ಸಭೆ ವಾಹನ ಅಥವಾ ನಿಗದಿಪಡಿಸಿರುವ ಸ್ಥಳದಲ್ಲಿ ಹಾಕ ಬೇಕು ಎಂದು ತಿಳಿಸಿದರು.

ಮೈಸೂರಿನಲ್ಲಿರುವಂತೆ ಇಲ್ಲಿಯೂ ಸ್ವಚ್ಛತೆ ಮತ್ತು ಹಸಿರು ಕರಣ ಮಾಡಲು ಎನ್‍ಜಿಓಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಶ್ರಮಿಸಬೇಕು. ಗಿಡ ನೆಡುವುದು, ಅದರ ಪೋಷಣೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ಕಾಲೇಜು ಆವರಣದ ಸ್ವಚ್ಛತೆ ಕಾಪಾಡುವ ಮೂಲಕ ಎನ್‍ಎಸ್‍ಎಸ್ ಮೂಲಕ ಸಾರ್ವಜನಿಕ ರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸ್ವಚ್ಛ ಭಾರತ ಯೋಜನೆಯಡಿ ಸಾಕಷ್ಟು ಸಾಧನೆ ಮಾಡಬೇಕಾಗಿದೆ. ಸ್ವಚ್ಛತೆಯಿಂದ ಸಾವಿನ ಸಂಖ್ಯೆ ಕಡಿಮೆ ಆಗುತ್ತದೆ. ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ಬಳಸಬೇಕು. ಮಕ್ಕಳು ಕೂಡ ಶಿಕ್ಷಣ ಪಡೆಯುವ ಜೊತೆಯಲ್ಲಿ ಸ್ವಚ್ಛತೆ ಬಗ್ಗೆ ಅರಿವು ಪಡೆದು ಸಮಾಜದ ಒಳಿತಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಸ್ವಚ್ಛತೆ ಕಾಪಾಡುವ ಮನೋಭಾವನೆ ಎಲ್ಲರಲ್ಲಿಯೂ ಮೂಡಬೇಕು. ಮನೆ ಮತ್ತು ಮನೆಯ ಸುತ್ತ ಸ್ವಚ್ಛತೆ ಇದ್ದರೇ ದೇಶವೇ ಸ್ವಚ್ಛವಾಗುತ್ತದೆ. ಈ ನಿಟ್ಟಿನಲ್ಲಿ ಆ. 15ರಂದು ನಡೆಯುವ ಸ್ವಾತಂತ್ರ್ಯ ದಿನದ ಅಂಗವಾಗಿ ಆ. 13ರಂದು ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ.ವೆಂಕಟೇಶ್ ಮೂರ್ತಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಮರಾಜು, ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಶಿವಸ್ವಾಮಿ, ರೋಟರಿ ಕ್ಲಬ್‍ನ ಅಮೃತಗೌಡ, ಭಾರತ ಸೇವಾದಳ ಉಪಾಧ್ಯಕ್ಷ ಮಂಜಪ್ಪ, ಜಿಲ್ಲಾ ಸಂಚಾಲಕಿ ವಿ.ಎಸ್.ರಾಣಿ, ಉಪನ್ಯಾಸಕ ರಾದ ಉಮೇಶ್, ರಾಜೀವ್‍ಗೌಡ, ಶಿವಣ್ಣ ಹಾಜರಿದ್ದರು.

Translate »