ಕೃಷಿ ಮಾಹಿತಿಗೆ ಡ್ರೋನ್ ಬಳಕೆಕೃಷಿ ಮಾಹಿತಿಗೆ ಡ್ರೋನ್ ಬಳಕೆ
ಮೈಸೂರು

ಕೃಷಿ ಮಾಹಿತಿಗೆ ಡ್ರೋನ್ ಬಳಕೆಕೃಷಿ ಮಾಹಿತಿಗೆ ಡ್ರೋನ್ ಬಳಕೆ

August 9, 2018

ಬೆಂಗಳೂರು: ಕೃಷಿ ಚಟುವಟಿಕೆ, ಬೆಳೆ ವಿಸ್ತೀರ್ಣದ ನಿಖರ ಮಾಹಿತಿ ಪಡೆಯಲು ಡ್ರೋನ್ ಬಳಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಹಿಡುವಳಿ ಬಗ್ಗೆ ಸಮರ್ಪಕ ಮಾಹಿತಿ ದೊರೆಯದ ಕಾರಣ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಈ ಪ್ರಯೋಗವನ್ನು ಜಾರಿಗೆ ತರಲಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಇಂದಿಲ್ಲಿ ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯಲ್ಲಿ ಡ್ರೋನ್ ತನ್ನ ಕಾರ್ಯ ಆರಂಭಿಸಿದ್ದು, ಒಂದು ಡ್ರೋನ್ ಪ್ರತಿನಿತ್ಯ ಒಂದು ಸಾವಿರ ಎಕರೆ ಭೂ ವ್ಯಾಪ್ತಿಯಲ್ಲಿರುವ ಬೆಳೆ ಮಾಹಿತಿ ಹಾಗೂ ರೈತರಿಗೆ ಸಂಬಂಧಪಟ್ಟ ವಿಸ್ತೀರ್ಣವನ್ನು ಚಿತ್ರ ಸಮೇತ ದಾಖಲೆ ಒದಗಿಸಲಿದೆ.

ಈ ಹಿಂದೆ ಶಾನಬೋಗರು ಸಿದ್ಧಪಡಿಸಿದ ದಾಖಲೆ, ನಂತರ ಆರ್‍ಟಿಸಿಯನ್ನು ಕಂಪ್ಯೂಟರೀಕರಣಗೊಳಿಸಿದ ನಂತರ ಯಾವುದೇ ಬೆಳೆ ಮಾಹಿತಿ ದೊರೆಯುತ್ತಿಲ್ಲ. ಹೊಸ ಪ್ರಯೋಗದಿಂದ ರೈತರು ಎಷ್ಟು ಭೂಮಿಯಲ್ಲಿ ಹಿಡುವಳಿ ಕೈಗೊಂಡಿದ್ದಾರೆ. ಆ ಸ್ವತ್ತಿಗೆ ಯಾರು ಮಾಲೀಕರು, ಬೆಳೆ ಯಾವ ಹಂತದಲ್ಲಿದೆ. ಎಂಬೆಲ್ಲ ಮಾಹಿತಿಯನ್ನು ಡ್ರೋನ್ ನೀಡಲಿದೆ. ಒಂದು ವೇಳೆ ಅತೀ ವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಬೆಳೆ ನಷ್ಟವುಂಟಾದಾಗಲೂ ಡ್ರೋನ್ ಬಳಸಿ, ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗುವುದು. ಖಾಸಗಿ ಸಹಭಾಗಿತ್ವ ದಲ್ಲಿ ವಿನೂತನ ಯೋಜನೆ ಹಮ್ಮಿಕೊಂಡಿದ್ದು, ಹಾವೇರಿ ಜಿಲ್ಲೆಯಲ್ಲಿ ಪೂರ್ಣಗೊಂಡ ನಂತರ ಅದರ ಮಾಹಿತಿ ಆಧರಿಸಿ, ಪ್ರತಿ ರೈತರಿಗೂ, ಆಧಾರ್ ಮಾದರಿಯಲ್ಲಿ ಅವರ ಆಸ್ತಿಪಾಸ್ತಿಗಳ ಮತ್ತು ಭೂಮಿ ಯಲ್ಲಿ ಯಾವ ಹಿಡುವಳಿ ಪಡೆಯುತ್ತಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿಯುಳ್ಳ ಕಾರ್ಡ್‍ಗಳನ್ನು ವಿತರಿಸಲಾಗುವುದು ಎಂದರು.

ರೈತರು ಬೆಳೆದ ಸಿರಿಧಾನ್ಯಗಳನ್ನು ಸರ್ಕಾರವೇ ಖರೀದಿಸಿ, ಹಾಪ್‍ಕಾಮ್ಸ್ ಮಳಿಗೆ ಮತ್ತು ಕೆಎಂಎಫ್ ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ. ಇದರಿಂದ ರೈತರ ಬೆಳೆಗೂ ಮಾರುಕಟ್ಟೆ ದೊರೆಯುವುದಲ್ಲದೆ, ಸಿರಿಧಾನ್ಯಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

ಕೆಎಂಎಫ್ ಗ್ರಾಹಕರಿಗೆ ಯಾವ ರೀತಿ ಮನೆ ಮನೆಗೆ ಹಾಲು ತಲುಪಿಸುತ್ತದೆಯೋ ಅದೇ ಮಾದರಿಯಲ್ಲಿ ಸಿರಿಧಾನ್ಯವನ್ನು ವಿತರಿಸುವ ಚಿಂತನೆ ನಡೆದಿದೆ. ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಎರಡು ಸಂಸ್ಥೆಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿ, ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಮುಂಗಾರು ಮಳೆ ಅಸಮರ್ಪಕವಾಗಿರುವುದರಿಂದ ಶೇ.44 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ವಾಡಿಕೆಯಂತೆ 1156 ಮಿಲಿಮೀಟರ್‍ನಷ್ಟು ಮಳೆಯಾಗಬೇಕಿತ್ತು. 13 ಜಿಲ್ಲೆಗಳಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. 11 ಜಿಲ್ಲೆಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಬಿತ್ತನೆಯಾ ಗಿದೆ. ಈ ಮುಂಗಾರು ಹಂಗಾಮಿನಲ್ಲಿ 74.69 ಲಕ್ಷ ಹೆಕ್ಟೇರ್‍ನಲ್ಲಿ ಬಿತ್ತನೆ ಮಾಡುವ ಗುರಿ ಇತ್ತು. ಆದರೆ ಇದುವರೆಗೂ, 49.47 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಇದು ಶೇ.66 ರಷ್ಟು ಗುರಿ ತಲುಪಿದ್ದು, ಉಳಿದ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ದಕ್ಷಿಣ ಕರ್ನಾಟಕ ಭಾಗದಲ್ಲಿ ನೀಲಗಿರಿ ಮತ್ತು ಸಾರ್ವೆ ಬೆಳೆಗಳಿಂದ ಅಂತರ್ಜಲ ಮಟ್ಟ ಹಾಳಾಗುತ್ತಿದೆ. ಇದನ್ನು ನಿಷೇಧಿಸಿದ್ದರೂ, ರೈತರು ಅದನ್ನು ಬೆಳೆಯುತ್ತಿದ್ದಾರೆ ಎಂದರು.

Translate »