ಆಷಾಢ ಶುಕ್ರವಾರಗಳಲ್ಲಿ ಚಾಮುಂಡಿಬೆಟ್ಟದಲ್ಲಿ ವಿವಿಐಪಿಗಳ ಹಾವಳಿ: ಭಕ್ತರ ಫಜೀತಿ
ಮೈಸೂರು

ಆಷಾಢ ಶುಕ್ರವಾರಗಳಲ್ಲಿ ಚಾಮುಂಡಿಬೆಟ್ಟದಲ್ಲಿ ವಿವಿಐಪಿಗಳ ಹಾವಳಿ: ಭಕ್ತರ ಫಜೀತಿ

August 9, 2018

ಮೈಸೂರು: ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಶುಕ್ರವಾರ ನಡೆಯುವ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಣ್ಯರು ಹಾಗೂ ಅಧಿಕಾರಿಗಳ ತಂಡ ಲಗ್ಗೆ ಇಡುವುದರಿಂದ ಲಕ್ಷಾಂತರ ಭಕ್ತರು ನೆಮ್ಮದಿಯಾಗಿ ದೇವರ ದರ್ಶನ ಪಡೆಯಲಾಗದೇ ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಷಾಢ ಶುಕ್ರವಾರದಂದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ರಾಜ್ಯದ ವಿವಿಧೆಡೆ ಯಿಂದ ಲಕ್ಷಾಂತರ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ. ಹಲವು ಭಕ್ತರು ಮುಂಜಾನೆಯೇ ಮೆಟ್ಟಿಲುಗಳ ಮೂಲಕ ಬೆಟ್ಟವೇರಿದರೆ, ಮತ್ತೆ ಹಲವರು ಗುರುವಾರ ರಾತ್ರಿಯೇ ಸಾಲಿನಲ್ಲಿ ನಿಲ್ಲುವುದು ಸರ್ವೇ ಸಾಮಾನ್ಯವಾಗಿದೆ.

ಧರ್ಮ ದರ್ಶನದ ಸಾಲು ಮಾತ್ರವಲ್ಲದೇ, 300 ರೂ. ಟಿಕೆಟ್ ಇರುವ ವಿಶೇಷ ದರ್ಶನದ ಸಾಲಿನಲ್ಲೂ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಕಾದು ನಿಂತಿರುತ್ತಾರೆ. ಈ ವೇಳೆ ಗಣ್ಯ ವ್ಯಕ್ತಿಗಳು ಬಂದರಂತೂ ಸಾಮಾನ್ಯ ಭಕ್ತರ ದರ್ಶನ ಸ್ಥಗಿತಗೊಂಡು ಗಣ್ಯರಿಗೆ ವಿಶೇಷ ದರ್ಶನ ಹಾಗೂ ವಿಶೇಷ ಪೂಜೆಯ ಭಾಗ್ಯವನ್ನೂ ಸಹ ಕಲ್ಪಿಸಲಾ ಗುತ್ತದೆ. ಓರ್ವ ಗಣ್ಯರು ಬಂದರೆ ಕನಿಷ್ಠ ಅರ್ಧ ಗಂಟೆಯಾದರೂ ಸಾಮಾನ್ಯ ಭಕ್ತರ ಸಾಲು ಸ್ಥಗಿತಗೊಳ್ಳುತ್ತದೆ. ಗಣ್ಯರೆಲ್ಲರೂ ಒಟ್ಟಿಗೆ ಏನೂ ಬರುವುದಿಲ್ಲ. ಓರ್ವ ಗಣ್ಯರು ಬಂದು ವಿಶೇಷ ಪೂಜೆ ಸಲ್ಲಿಸಿ, ಹೊರ ಹೋಗುತ್ತಿದ್ದಂತೆಯೇ ಇನ್ನೇನು, ನಮ್ಮ ಸಾಲು ಸಾಗುತ್ತದೆ ಎಂದು ಭಕ್ತರು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೋರ್ವ ಗಣ್ಯರ ಪ್ರವೇಶವಿರುತ್ತದೆ. ಭಕ್ತರದ್ದು ಮತ್ತೆ ಅದೇ ಗೋಳು. ಇದು ಮಾತ್ರವಲ್ಲದೇ ಕೆಲ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ತಮಗೆ ಬೇಕಾದವರನ್ನು ನೇರವಾಗಿ ದೇವಸ್ಥಾನದೊಳಗೆ ಕರೆದೊಯ್ದು, ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿಸುವುದು ಸಾಮಾನ್ಯ ಭಕ್ತರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.

ಈ ಸಂಬಂಧ `ಮೈಸೂರು ಮಿತ್ರ’ ಓದುಗರಾದ ಕಲ್ಕಿ ಎಂಬುವರು ಕಳೆದ ಎರಡು ಶುಕ್ರವಾರಗಳಂದು ತಮಗಾದ ಕಹಿ ಅನುಭವವನ್ನು ಪತ್ರದ ಮೂಲಕ ಹಂಚಿಕೊಂಡಿ ದ್ದಾರೆ. ದೇವಿ ದರ್ಶನಕ್ಕಾಗಿ ಗುರುವಾರ ರಾತ್ರಿ 10 ಗಂಟೆಯಿಂದಲೇ ಧರ್ಮ ದರ್ಶನದ ಸಾಲಿನಲ್ಲಿ ಭಕ್ತರು ಸಾಲುಗಟ್ಟಿ ನಿಂತಿರುತ್ತಾರೆ. ರಾತ್ರಿ ಇಡೀ ಕೊರೆಯುವ ಚಳಿಯಲ್ಲಿ ತೂಕಡಿಸುತ್ತಾ ಭಕ್ತರು ನಿಂತಿರುತ್ತಾರೆ. ಕೆಲವರಂತೂ ಅಲ್ಲೇ ಕುಳಿತು ನಿದ್ದೆಯನ್ನೂ ಮಾಡುತ್ತಾರೆ. ಮುಂಜಾನೆಯಿಂದಲೇ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಸಾರಿಗೆ ಬಸ್‍ಗಳಲ್ಲಿ ಬೆಟ್ಟಕ್ಕೆ ಆಗಮಿಸುವ ಭಕ್ತರು ಕೂಡ ಈ ಸಾಲಿಗೆ ಸೇರಿಕೊಳ್ಳುತ್ತಾರೆ. ಕಿ.ಮೀ.ಗಟ್ಟಲೆ ಭಕ್ತರು ಸಾಲುಗಟ್ಟಿ ನಿಂತು ದೇವಿ ದರ್ಶನಕ್ಕಾಗಿ ಹಾತೊರೆಯುತ್ತಿರುತ್ತಾರೆ. ಈ ವೇಳೆ ಗಣ್ಯರು ಬಂದಾಗ ನೇರವಾಗಿ ದೇವಸ್ಥಾನದ ಗರ್ಭಗುಡಿಯವರೆವಿಗೂ ತೆರಳಿ, ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಾಲಿನಲ್ಲಿ ಬಂದ ಭಕ್ತರಂತೂ ಒಂದು ನಿಮಿಷವೂ ಸಹ ದೇವಿ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಅದಾಗಲೇ ಸಿಬ್ಬಂದಿಯು ಭಕ್ತರನ್ನು ಸಾಗ ಹಾಕುತ್ತಿರುತ್ತಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿರುವ ಅವರು, ಕೊನೆಯ ಶುಕ್ರವಾರವಾದ ಆ.10ರಂದಾದರೂ ಗಣ್ಯರ ಹಾವಳಿಯನ್ನು ನಿಯಂತ್ರಿಸಿ ಸಾಮಾನ್ಯ ಭಕ್ತರ ಭಾವನೆಗಳಿಗೆ ಗೌರವ ನೀಡಿ, ನೆಮ್ಮದಿಯಾಗಿ ನಾಡ ದೇವತೆ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಅವರು ಕೋರಿದ್ದಾರೆ.

ಮೆಟ್ಟಿಲು ಹತ್ತುವವರಿಗೆ ಇಲ್ಲ ಭದ್ರತೆ: ಕಳೆದ ಆಷಾಢ ಶುಕ್ರವಾರದಂದೇ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವವೂ ಇದ್ದ ಕಾರಣ ಭಕ್ತರ ಸಂಖ್ಯೆ ಇಮ್ಮಡಿಯಾಗಿತ್ತು. ಅಪಾರ ಸಂಖ್ಯೆಯ ಭಕ್ತರು ಮೆಟ್ಟಿಲುಗಳ ಮೂಲಕ ಬೆಟ್ಟವೇರಿ ದೇವಿ ದರ್ಶನ ಪಡೆದರು. ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ನೂಕು-ನುಗ್ಗಲು ಉಂಟಾಗಿ ಅನಾಹುತ ಸಂಭವಿಸುವ ಸಾಧ್ಯತೆಗಳೂ ಇತ್ತು. ಮೆಟ್ಟಿಲುಗಳಲ್ಲಿ ಬ್ಯಾರಿಕೇಡ್ ಅಥವಾ ರೇಲಿಂಗ್ಸ್ ಇಲ್ಲದ ಕಾರಣ ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಅನಾಹುತವೇ ಜರುಗುವ ಅಪಾಯವಿತ್ತು. ಪೊಲೀಸ್ ಭದ್ರತೆಯಂತೂ ಇದ್ದಂತೆ ಕಾಣಲಿಲ್ಲ. ಆದ್ದರಿಂದ ಮೆಟ್ಟಿಲುಗಳ ಮಾರ್ಗದುದ್ದಕ್ಕೂ ಪೊಲೀಸ್ ಭದ್ರತೆ ಏರ್ಪಡಿಸಬೇಕು. ಮೆಟ್ಟಿಲುಗಳ ಮಧ್ಯೆ ಹಗ್ಗ ಕಟ್ಟಿ, ಬೆಟ್ಟ ಹತ್ತುವವರು ಮತ್ತು ಇಳಿಯುವವರು ಪ್ರತ್ಯೇಕವಾಗಿ ಸಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಮನವಿ ಮಾಡಿದ್ದಾರೆ.

Translate »