ನಾಲ್ಕು ದಶಕದ ನಂತರ ಇತಿಹಾಸ ಪ್ರಸಿದ್ಧಿ ರಾಜರ ಕಾಲದ ಚಾ.ನಗರದ ದೊಡ್ಡ ಅರಸನಕೊಳ ಬಹುತೇಕ ಭರ್ತಿ ಅಂತರ್ಜಲ ವೃದ್ಧಿ, ನಾಗರಿಕರಲ್ಲಿ ಹರ್ಷ
ಚಾಮರಾಜನಗರ

ನಾಲ್ಕು ದಶಕದ ನಂತರ ಇತಿಹಾಸ ಪ್ರಸಿದ್ಧಿ ರಾಜರ ಕಾಲದ ಚಾ.ನಗರದ ದೊಡ್ಡ ಅರಸನಕೊಳ ಬಹುತೇಕ ಭರ್ತಿ ಅಂತರ್ಜಲ ವೃದ್ಧಿ, ನಾಗರಿಕರಲ್ಲಿ ಹರ್ಷ

May 26, 2018

ಚಾಮರಾಜನಗರ: ಚಾಮ ರಾಜನಗರದ ಇತಿಹಾಸ ಪ್ರಸಿದ್ಧ ದೊಡ್ಡ ಅರಸನಕೊಳ ಅರ್ಧದಷ್ಟು ಭರ್ತಿ ಆಗಿದೆ. ಇದು ನಗರದ ನಾಗರಿಕರಲ್ಲಿ ಹರ್ಷ ತರಿಸಿದೆ.

ನಗರದಲ್ಲಿ ಗುರುವಾರ ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ಮಿಂಚು-ಗುಡುಗು ಸಹಿತ ಭರ್ಜರಿ ಮಳೆ ಸುರಿಯಿತು. ಹೀಗಾಗಿ ಪೈಪ್‍ಲೈನ್ ಮೂಲಕ ದೊಡ್ಡ ಅರಸನ ಕೊಳಕ್ಕೆ ಮಳೆ ನೀರು ಹರಿದು ಬಂದಿದೆ. ಮೂಡ್ಲುಪುರ ಬಡಾವಣೆ ಬಳಿಯ ಬಂಜಾರ್ ಸ್ಕೂಲ್ ಬಳಿ ಇರುವ ಅಡ್ಡಹಳ್ಳದಿಂದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕೊಳದ ಬೀದಿಯ ದೊಡ್ಡ ಅರಸನ ಕೊಳಕ್ಕೆ ನಗರ ಸಭೆಯಿಂದ ಪೈಪ್‍ಲೈನ್ ಮಾಡಲಾಗಿತ್ತು.

ಇದರ ಪರಿಣಾಮ ನೂರಾರು ವರ್ಷಗಳ ಇತಿಹಾಸ ಇರುವ ದೊಡ್ಡ ಅರಸನಕೊಳ ಸುಮಾರು ಅರ್ಧದಷ್ಟು ತುಂಬಿದೆ. ಸುಮಾರು 40 ವರ್ಷಗಳ ಬಳಿಕ ಕೊಳಕ್ಕೆ ನೀರು ಬಂದಿ ದ್ದರಿಂದ ಹರ್ಷಗೊಂಡ ಜನತೆ ಕೊಳದತ್ತ ಆಗಮಿಸಿ ವೀಕ್ಷಿಸುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆ ತನಕವೂ ಸಹ ಜನರು ತಂಡೋಪ ತಂಡವಾಗಿ ಆಗಮಿಸಿ ಕೊಳದಲ್ಲಿ ನೀರು ತುಂಬಿರುವುದನ್ನು ನೋಡುತ್ತಾ, ಮೊಬೈಲ್ ಮೂಲಕ ಫೋಟೊ ತೆಗೆಯುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ನಗರದ ಕೊಳದ ಬೀದಿಯಲ್ಲಿ ಇರುವ ಅರಸನಕೊಳ ರಾಜರ ಕಾಲದ್ದು. ಈ ಕೊಳಕ್ಕೆ ನೂರಾರು ವರ್ಷಗಳ ಇತಿಹಾಸ ಉಂಟು. ಒಂದಾನೊಂದು ಕಾಲದಲ್ಲಿ ನಗರದಲ್ಲಿ ಸಿಹಿ ನೀರು ದೊರೆಯುತ್ತಿದ್ದದ್ದು ಈ ಕೊಳ ಒಂದರಿಂದ ಮಾತ್ರ. ನಗರದ ಬಹುತೇಕ ಎಲ್ಲಾ ಮನೆಯವರು ಈ ಕೊಳದ ಸಿಹಿ ನೀರಿನಿಂದಲೇ ಸಾಂಬಾರು (ಸಾರು) ತಯಾರಿ ಸುತ್ತಿದ್ದರೆನ್ನಲಾಗಿದೆ. ಈ ದೊಡ್ಡ ಅರಸನ ಕೊಳದ ನೀರಿನಿಂದ ಮಾತ್ರ ಬೇಳೆ ಬೇಯು ತ್ತಿದ್ದ ಕಾರಣ ಎಲ್ಲಾ ಮನೆಯವರು ಕೊಳದ ನೀರಿನಿಂದಲೇ ಅಡುಗೆ ತಯಾರಿಸುತ್ತಿದ್ದರು ಎಂದು ಹಿರಿಯರು ಈಗಲೂ ಸಹ ಹೇಳುತ್ತಾರೆ.

ನಗರದ ಪುರಾತನ ಕಾಲದ ದೊಡ್ಡಅರಸನ ಕೊಳ ಮಳೆ ನೀರಿನಿಂದ ಸುಮಾರು 40 ವರ್ಷದ ಬಳಿಕ ಅರ್ಧ ಭಾಗ ತುಂಬಿದೆ. ಇದರಿಂದ ಸಂತೋಷ ವಾಗಿದ್ದು, ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಹೀಗಾಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ನಗರಸಭೆ ಅಥವಾ ಜಿಲ್ಲಾಡಳಿತ ಕೊಳಕ್ಕೆ ಕಾವಲುಗಾರರನ್ನು ನೇಮಿಸಿ, ಕೆರೆ ನೀರು ಕಲುಷಿತಗೊಳ್ಳದಂತೆ ಕಾಪಾಡಬೇಕು.
-ಪ್ರಶಾಂತಬಾಬು

ಕಾಲಕ್ರಮೇಣ ದೊಡ್ಡ ಅರಸನಕೊಳಕ್ಕೆ ಹರಿದು ಬರುತ್ತಿದ್ದ ನೀರಿನ ಮಾರ್ಗ ಇಲ್ಲ ದಂತಾಯಿತು. ಇದರ ಫಲವಾಗಿ ಕೊಳ ನೀರಿಲ್ಲದೇ ಬರಿದಾಯಿತು. ನಗರದ ಶ್ರೀ ವಿದ್ಯಾಗಣಪತಿ ಮಂಡಳಿಯವರು ಇಲ್ಲಿನ ರಥದ ಬೀದಿಯಲ್ಲಿ ಪ್ರತಿ ವರ್ಷ ಶ್ರೀವಿದ್ಯಾಗಣಪತಿ ಪ್ರತಿಷ್ಠಾಪಿಸುತ್ತಾರೆ. ಈ ಗಣಪತಿಯನ್ನು ಇದೇ ದೊಡ್ಡ ಅರಸನ ಕೊಳ ದಲ್ಲಿ ಇಂದಿಗೂ ವಿಸರ್ಜನೆ ಮಾಡುತ್ತಾ ಬರ ಲಾಗುತ್ತಿದೆ. ಗಣಪತಿ ವಿಸರ್ಜನೆ ವೇಳೆ ಕೊಳದಲ್ಲಿ ನೀರು ಇಲ್ಲದಿದ್ದರೆ, ಬೋರ್‍ವೆಲ್ ಗಳ ಮೂಲಕ ಕೊಳಕ್ಕೆ ತಮಗೆ ಬೇಕಾ ದಷ್ಟು ನೀರನ್ನು ಹರಿಸಿ, ಗಣಪತಿ ವಿಸರ್ಜನೆ ಆದ ಬಳಿಕ ಕೆಲವೇ ದಿನದಲ್ಲಿ ನೀರು ಬತ್ತಿ ಹೋಗಿ, ಇಡೀ ಕೊಳ ನೀರಿಲ್ಲದೇ ಭಣ ಗುಡುತ್ತಿತ್ತು. ಇದರಿಂದ ನಗರದಲ್ಲಿ ಅಂತ ರ್ಜಲ ಮಟ್ಟ ತೀವ್ರ ಕುಸಿತ ಕಂಡು ನೀರಿ ಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣ ಆಯಿತು.

ನೂರಾರು ವರ್ಷಗಳ ಇತಿಹಾಸ ಇರುವ ದೊಡ್ಡ ಅರಸನ ಕೊಳಕ್ಕೆ ನೀರು ತುಂಬಿಸ ಬೇಕು. ಈ ಮೂಲಕ ನಗರದಲ್ಲಿ ಉದ್ಭವ ಆಗಿರುವ ಕುಡಿಯುವ ನೀರಿನ ಸಮಸ್ಯೆ ಯನ್ನು ಹೋಗಲಾಡಿಸಬೇಕು ಎಂದು ತೀರ್ಮಾನಿಸಿದ ನಗರಸಭೆ, ಮಳೆ ಬಂದಾಗ ಪೋಲ್ ಆಗುವ ನೀರು ಕೊಳದಲ್ಲಿ ಸಂಗ್ರ ಹವಾಗಲು ಯೋಜನೆ ರೂಪಿಸಿತು.

ನಗರದ ಮಹದೇಶ್ವರ ಕಾಲೋನಿಯ ಬಳಿ ಇರುವ ಅಡ್ಡಹಳ್ಳದಿಂದ ದೊಡ್ಡ ಅರಸನಕೊಳದವರೆಗೆ ಪೈಪ್‍ಲೈನ್ ಮಾಡಲಾಯಿತು. ಗುರುವಾರ ರಾತ್ರಿ ಸುರಿದ ಯಡಬೆಟ್ಟದ ತಪ್ಪಲಿನ ಮಳೆಯ ನೀರು ಅಡ್ಡಹಳ್ಳದಲ್ಲಿ ಹರಿದು ಹೋಗುವ ಬದಲು ಪೈಪ್‍ಲೈನ್ ಮೂಲಕ ಕೊಳಕ್ಕೆ ಬಂತು. ಹೀಗಾಗಿ ಕೊಳ ಅರ್ಧದಷ್ಟು ಭರ್ತಿ ಆಗಿದೆ. ಮರಿಯಾಲದ ಬಳಿ ಇರುವ ಮಾಲಗೆರೆ ಕೆರೆಯಿಂದ ದೊಡ್ಡಅರಸನ ಕೊಳಕ್ಕೆ ನೀರು ತುಂಬಿಸಲು ಸಹ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಶಾಸಕರಲ್ಲಿ ಮನವಿ ಮಾಡಲಾಗಿದೆ. ಕೊಳದಲ್ಲಿ ನೀರು ಸಂಗ್ರಹ ಇದ್ದರೆ, ಅಂತರ್ಜಲ ಮಟ್ಟ ವೃದ್ಧಿಗೊಂಡು ನೀರಿನ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ನಗರ ಸಭೆ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಎಸ್.ನಂಜುಂಡಸ್ವಾಮಿ.

Translate »