ಮೈತ್ರಿ ಸರ್ಕಾರಕ್ಕೆ ಧಕ್ಕೆ ಉಂಟು ಮಾಡಬೇಡಿ
ಮೈಸೂರು

ಮೈತ್ರಿ ಸರ್ಕಾರಕ್ಕೆ ಧಕ್ಕೆ ಉಂಟು ಮಾಡಬೇಡಿ

October 14, 2018

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬಿರುಕು ಉಂಟು ಮಾಡುವ ಕೆಲಸ ಬೇಡ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ಜೆಡಿಎಸ್‍ನೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರೆ. ಬಿಜೆಪಿಯೇತರ ಪಕ್ಷಗಳು ಒಂದಾಗುವ ಕಾಲ ಬಂದಿದೆ. ಇಂತಹ ಸ್ಥಿತಿಯಲ್ಲಿ ನಮ್ಮನ್ನು ನಂಬಿ ಬಂದ ಪಕ್ಷಗಳ ಕೈಹಿಡಿಯಬೇಕು ಎಂದರು.

ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ. ನಮ್ಮದು ಒಂದೇ ಸರ್ಕಾರ ಎನ್ನುವ ಭಾವನೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿ ಎಂದು ಸಚಿವರಿಗೆ ಕಿವಿಮಾತು ಹೇಳಿದರು. ಇಲ್ಲಿಯ ಆಡಳಿತದ ಆಗು-ಹೋಗುಗಳು ಎಲ್ಲವೂ ತಿಳಿದಿದೆ. ನಿಮ್ಮ ಅಭಿಪ್ರಾಯಗಳನ್ನು ಹೇಳಿ. ಅದು ಸರಿ ಎನ್ನಿಸಿದರೆ ಕುಮಾರಸ್ವಾಮಿ ಬಳಿ ಹೇಳುತ್ತೇನೆ. ಅವರು ನನ್ನ ಜೊತೆ ನಿರಂತರ ಸಂಪರ್ಕ ದಲ್ಲಿದ್ದಾರೆ. ಕೃಷಿ ಸಾಲ ಮನ್ನಾ ಸೇರಿದಂತೆ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ನಮ್ಮ ಒಪ್ಪಿಗೆಯನ್ನೂ ಪಡೆಯುತ್ತಾರೆ. ಸರ್ಕಾರ ಸುಗಮವಾಗಿ ಸಾಗಬೇಕು, ಜೊತೆಗೆ ರಾಷ್ಟ್ರಮಟ್ಟದಲ್ಲಿ ನಮ್ಮನ್ನು ನಂಬಿದ ಪಕ್ಷಗಳ ಕೈಬಿಡುವುದಿಲ್ಲ
ಎಂಬುದನ್ನು ತಿಳಿಸಬೇಕಿದೆ.

ಚುನಾವಣೆಗೆ ಇನ್ನು ಕೆಲವು ಸಮಯ ಮಾತ್ರ ಉಳಿದಿದೆ, ಈ ಅವಧಿಯಲ್ಲೇ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ. ಈ ಕಾರ್ಯಕ್ರಮಗಳು ನಮ್ಮವು ಎಂಬುದನ್ನು ಬಿಂಬಿಸುವ ಕೆಲಸ ನಡೆಸಿ, ಅದು ಬಿಟ್ಟು, ತಮಗೆ ಅದು ದಕ್ಕಿಲ್ಲ, ಇದು ದಕ್ಕಿಲ್ಲ ಎಂದು ಅಪಸ್ವರ ಎತ್ತುವುದು ಬೇಡ. ನಿಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚೂತಪ್ಪದೆ ಮಾಡುವುದಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟ ಹೆಚ್ಚು ಸ್ಥಾನ ಗೆಲ್ಲಲು ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಿ. ನಿಮ್ಮಲ್ಲಿರುವ ವರ್ಚಸ್ಸು ಮತ್ತು ಪ್ರಭಾವ ಬಿಂಬಿಸಿ ಮತ ತರುವ ಕಾರ್ಯವಾಗಲಿ. ಈಗಿನಿಂದಲೇ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯ ಘಟಕದೊಂದಿಗೆ ಸಹಕರಿಸಿ ಎಂದಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಬಿಂಬಿಸುವಲ್ಲಿ ಗಮನಹರಿಸಿ. ಸಾರ್ವತ್ರಿಕ ಚುನಾವಣೆಗೂ ಮುನ್ನ ಇಲ್ಲಿ ಉಪಚುನಾವಣೆ ಎದುರಾಗಿದೆ, ಅದರಲ್ಲಿ ಒಟ್ಟಾಗಿ ಕೆಲಸ ಮಾಡಿ, ಗೆಲುವು ಸಾಧಿಸಿ. ಇದು ರಾಷ್ಟ್ರಮಟ್ಟದಲ್ಲಿ ಮಹಾಮೈತ್ರಿ ಗಟ್ಟಿಗೊಳ್ಳಲು ಸಹಕಾರಿಯಾಗುತ್ತದೆ ಎಂದರು.

Translate »