ಮೈಸೂರು

ಮೈತ್ರಿ ಸರ್ಕಾರದ ಅಸ್ತಿತ್ವ, ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

April 29, 2019

ಬೆಂಗಳೂರು:  ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಚಿಂತೆ ಬೇಡ. ಹಾಗೆಯೇ ಲೋಕಸಭಾ ಚುನಾವಣೆ ಫಲಿ ತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅದನ್ನೆಲ್ಲಾ ನಾವು ನೋಡಿಕೊಳ್ಳುತ್ತೇವೆ ಎಂದು ಜೆಡಿಎಸ್ ಶಾಸಕರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.

ಆಪರೇಷನ್ ಕಮಲ ಮತ್ತೆ ಆರಂಭವಾಗಬಹುದು ಎಂಬ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್‍ನಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸುಭದ್ರವಾಗಿದೆ. ಹಾಗೆಯೇ ಲೋಕಸಭಾ ಚುನಾವಣಾ ಫಲಿತಾಂಶ ಏನು ಎಂಬುದು ಮೇ 23ರಂದು ತಿಳಿಯಲಿದೆ. ಅದರ ಬಗ್ಗೆ ಚಿಂತೆ ಬೇಡ. ನೀವು ಒಗ್ಗಟ್ಟು ಕಾಯ್ದುಕೊಂಡು ಪಕ್ಷ ಸಂಘ ಟನೆ ಮಾಡಿ. ಮುಂಬರುವ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸದೃಢ ರೀತಿ ಕಟ್ಟಲು ಸಮರ್ಥ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ವಿರೋಧ ಪಕ್ಷಗಳು ಸರ್ಕಾರದ ಸಾಲ ಮನ್ನಾದ ಬಗ್ಗೆ ನಿರಂತರವಾಗಿ ಅಪಪ್ರಚಾರ ನಡೆಸುತ್ತಿವೆ. ಇಂತಹ ಅಪ ಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಮುಂದಿನ 5-6 ತಿಂಗಳಲ್ಲಿ ರೈತರ ಸಾಲ ಮನ್ನಾ ಪ್ರಕ್ರಿಯೆ ಸಂಪೂರ್ಣ ಗೊಳ್ಳಲಿದೆ. ರೈತರ ಮನೆ ಬಾಗಿಲಿಗೆ ಋಣ ಪತ್ರಗಳು ತಲು ಪಲಿವೆ ಎಂದು ಭರವಸೆ ನೀಡಿದರು. ಮುಖ್ಯಮಂತ್ರಿ ಕುಮಾರ ಸ್ವಾಮಿ ಕೂಡ ಚುನಾವಣೆಯ ನಂತರವೂ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಆಪರೇಷನ್ ಕಮಲಕ್ಕೆ ತಲೆಕೆಡಿಸಿಕೊಳ್ಳ ಬೇಡಿ. ಕಾಂಗ್ರೆಸ್ ಭಿನ್ನಮತವನ್ನು ಆ ಪಕ್ಷದ ವರಿಷ್ಠರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಅಭಯ ನೀಡಿದ್ದಾರೆ. ಆಪರೇಷನ್ ಕಮಲ ಮೂಲಕ ಮೈತ್ರಿ ಸರ್ಕಾರವನ್ನು ಪತನಗೊಳಿ ಸಲು ಬಿಜೆಪಿ ಪ್ರಯತ್ನ ಆರಂಭಿಸಿದೆ ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಇಂದು ಶಾಸಕಾಂಗ ಪಕ್ಷ ಸಭೆ ಕರೆದಿದ್ದರು. ಬಿಜೆಪಿಯ ಆಪರೇಷನ್ ಕಮಲಕ್ಕೆ ಜೆಡಿಎಸ್ ಶಾಸಕರು ಒಳಗಾಗಲಿದ್ದಾರೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಸಚಿವ ಸ್ಥಾನ ಹೋಗಲಿ, ಕನಿಷ್ಠ ನಿಗಮ-ಮಂಡಳಿ ಸ್ಥಾನವೂ ದಕ್ಕದಿದ್ದವರು ಹಾಗೂ ಸೂಕ್ತ ಖಾತೆ ದೊರೆಯದೆ ಅತೃಪ್ತ ಸಚಿವರೂ ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಕುಮಾರಸ್ವಾಮಿ, ಮೊದಲು ತಮ್ಮದೇ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವಾಗಿ ಇಂದು ಸಭೆ ಕರೆದಿದ್ದರು. ಈ ಸಭೆಯಲ್ಲಿ ಬಹುತೇಕ ಶಾಸಕರು ಪಾಲ್ಗೊಂಡಿದ್ದರು.

ಮೈತ್ರಿಗೆ 15-16 ಸ್ಥಾನ ಲಭ್ಯವಾಗುವ ಮಾಹಿತಿ: ರಾಜ್ಯದಲ್ಲಿ 2 ಹಂತದ ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನ ಹಿಂದೆಯೇ ಕಾಂಗ್ರೆಸ್‍ನಲ್ಲಿ ರಾಜಕೀಯ ಚಟುವಟಿಕೆ ಗಳು ಬಿರುಸುಗೊಂಡಿವೆ. ಇಂದು ಬೆಂಗಳೂರಿಗೆ ಭೇಟಿ ನೀಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕುಮಾರಕೃಪಾ ಅತಿಥಿಗೃಹದಲ್ಲಿ ದಿನವಿಡೀ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಇಂದು ಬೆಳಿಗ್ಗೆಯೇ ವೇಣುಗೋಪಾಲ್ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕ ಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ನಾಯಕರ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ನಂತರ ಕಾಂಗ್ರೆಸ್‍ನಲ್ಲಿ ಮತ್ತೆ ಭಿನ್ನಮತ ತಲೆದೋರಿದ್ದು, ಅದನ್ನು ಬಗೆಹರಿಸುವಂತೆ ಹೇಳಿದ್ದಾರೆನ್ನಲಾಗಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರನ್ನು ನೀವೂ ನಿರ್ಲಕ್ಷಿಸಬೇಡಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಿರಿ. ಮಿಕ್ಕ ವಿಚಾರವನ್ನು ನಾವು ನೋಡಿ ಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಅವರಿಗೆ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಇದಾದ ನಂತರ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ನಾಯಕರೊಂ ದಿಗೆ ಮಾತುಕತೆ ನಡೆಸಿದರು. ಚುನಾವಣೆಯಲ್ಲಿ ಮೈತ್ರಿಗೆ ಆಗಿರುವ ಲಾಭದ ಬಗ್ಗೆ ಮಾಹಿತಿ ಕಲೆ ಹಾಕಿದರು. ಈ ವೇಳೆ 15-16 ಸ್ಥಾನಗಳು ಮೈತ್ರಿಗೆ ಲಭ್ಯವಾಗಬಹುದು. ಅದರಲ್ಲಿ 12 ಕಾಂಗ್ರೆಸ್ ಗೆದ್ದರೆ, ಜೆಡಿಎಸ್ 3 ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಕೆಲ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ. ಆದರೆ, ಮೋದಿ ಹವಾ ಹಿನ್ನೆಲೆಯಲ್ಲಿ ಈ ಬಾರಿಯೂ ವೀರಶೈವ ಲಿಂಗಾಯಿತರು ನಮ್ಮ ಕೈ ಹಿಡಿದಿಲ್ಲ ಎಂಬ ವಿಚಾರವನ್ನು ವೇಣುಗೋಪಾಲ್ ಗಮನಕ್ಕೆ ಕೆಲ ನಾಯಕರು ತಂದಿದ್ದಾರೆ.

Translate »