ಡಾ.ಬಿ.ರಮಣರಾವ್ ಅವರಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ ಪ್ರದಾನ
ಮೈಸೂರು

ಡಾ.ಬಿ.ರಮಣರಾವ್ ಅವರಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ ಪ್ರದಾನ

January 29, 2019

ಮೈಸೂರು: ಬೆಂಗಳೂರಿನ ಟಿ.ಬೇಗೂರು ಗ್ರಾಮೀಣ ಔಷಧಾಲಯದ ಡಾ.ಬಿ.ರಮಣರಾವ್ ಅವರಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ನೀಡಿ, ಗೌರವಿಸಿದರು.

ಜೆಎಸ್‍ಎಸ್ ಆಸ್ಪತ್ರೆ ಆವರಣದ ಶ್ರೀ ರಾಜೇಂದ್ರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕ, ಮೈಸೂರು ಕದಳಿ ಮಹಿಳಾ ವೇದಿಕೆ ಸಹಯೋಗದೊಂದಿಗೆ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ `ಡಾ.ಸಿ.ಎನ್. ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ’ಯನ್ನು ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ರಮಣರಾವ್, ಯುವ ವೈದ್ಯರು ಸಮಾಜ ದಲ್ಲಿ ಉತ್ತಮ ಹೆಸರು ಗಳಿಸಬೇಕಾದರೆ, ಮೊದಲು ಗ್ರಾಮೀಣ ಪ್ರದೇಶದಲ್ಲಿ ವೈದ್ಯ ವೃತ್ತಿ ಆರಂಭಿಸಬೇಕು. ಈ ಮೂಲಕ ತಮ್ಮ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳ ಬೇಕು. ಶ್ರೀಮಂತರಿಗೆ ಕಾಯಿಲೆ ಬಂದರೆ ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿಕೊಳ್ಳು ತ್ತಾರೆ. ಅವರು ಎಂದಿಗೂ ಯುವ ವೈದ್ಯರ ಕಲಿಕೆಗೆ ಅವಕಾಶ ನೀಡುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶದ ಬಡವರು ಮಾತ್ರ ಯುವ ವೈದ್ಯರ ಕಲಿಕೆ ಸಹಕರಿಸುತ್ತಾರೆ. ಆದ್ದರಿಂದ ಯುವ ವೈದ್ಯರು ಸಾಧ್ಯವಾದಷ್ಟು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು.

ಕಳೆದ 44 ವರ್ಷಗಳಿಂದ ಬೆಂಗಳೂ ರಿನ ಟಿ.ಬೇಗೂರಿನಲ್ಲಿ ಗ್ರಾಮೀಣ ಔಷಧಾಲಯವನ್ನು ತೆರೆದು ಅಲ್ಲಿನ ಬಡವರಿಗೆ ಉಚಿತ ವೈದ್ಯ ಚಿಕಿತ್ಸೆಯನ್ನು ಸಣ್ಣ ಪ್ರಮಾಣದಲ್ಲಿ ನೀಡುತ್ತಿದ್ದೇನೆ. ಇದನ್ನು ಸಂಘ-ಸಂಸ್ಥೆಗಳು ಗುರುತಿಸಿ, ಸನ್ಮಾನಿಸು ವುದರಿಂದ ನನಗೆ ಮತ್ತಷ್ಟು ಬಡವರಿಗೆ ವೈದ್ಯಕೀಯ ಸೇವೆ ಸಲ್ಲಿಸಬೇಕೆಂಬ ಹಂಬಲ ಹೆಚ್ಚಾಗುತ್ತಿದೆ. ಇದಕ್ಕೆ ನನ್ನ ಪತ್ನಿ, ಮಕ್ಕಳಾದ ಡಾ.ಚರಿತ್, ಡಾ.ಅಭಿಜಿತ್ ಸೇರಿದಂತೆ ಇತರೆ ಸ್ಥಳೀಯ ಸಾರ್ವಜ ನಿಕರು ಸಹ ಕೈ ಜೋಡಿಸಿದ್ದಾರೆ ಎಂದರು.

ನಾನು ಕೇವಲ ಬಡವರಿಗೆ ಮಾತ್ರ ವೈದ್ಯಕೀಯ ಚಿಕಿತ್ಸೆ ನೀಡುತ್ತಿಲ್ಲ. ಶ್ರೀಮಂ ತರಿಗೂ ಚಿಕಿತ್ಸೆ ನೀಡುತ್ತಿದ್ದೇನೆ. ಈ ವೇಳೆÀ ಕೆಲ ಘಟನೆಗಳು ನನ್ನ ಗಮನಕ್ಕೆ ಬಂದಿವೆ. ಕೆಲ ಶ್ರೀಮಂತರು ಚಿಕಿತ್ಸೆ ಪಡೆಯಲು ನನ್ನ ಬಳಿ ಬಂದಾಗ ತಮ್ಮ ಅನಿಸಿಕೆ ಗಳನ್ನು ಹಂಚಿಕೊಳ್ಳುತ್ತಾರೆ. ಕೆಲವರು ನನ್ನ ಮಗನೂ ವೃತ್ತಿಯಲ್ಲಿ ವೈದ್ಯ. ಆತ ವಿದೇಶ ದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ನನ್ನನ್ನು ಕಾಡುವ ಪ್ರಶ್ನೆ ಎಂದರೆ, ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು, ಬೇರೆ ದೇಶದಲ್ಲಿ ಕರ್ತವ್ಯ ನಿರ್ವ ಹಿಸುವುದರ ಬಗ್ಗೆ ಪ್ರಶ್ನಾರ್ಥಕ ಚಿಂತನೆ ಬರುತ್ತದೆ. ಆದರೆ, ಅವೆಲ್ಲಾ ಅವರವರಿಗೆ ಬಿಟ್ಟ ವಿಚಾರ ಎಂದು ಮಾತು ತೇಲಿಸಿದರು.

ನಮ್ಮ ದೇಶದ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಡವರಿಗೆ ಉತ್ತಮ ವೈದ್ಯ ಕೀಯ ಸೌಲಭ್ಯ ಸಿಗುತ್ತಿಲ್ಲ. ಇದನ್ನು ಯುವ ವೈದ್ಯರು ಅರ್ಥ ಮಾಡಿಕೊಂಡು ಗ್ರಾಮೀಣ ಪ್ರದೇಶದಲ್ಲಿ ವೈದ್ಯ ವೃತ್ತಿ ಆರಂಭಿ ಸುವುದರ ಬಗ್ಗೆ ಗಂಭೀರ ಚಿಂತನೆ ಮಾಡ ಬೇಕು ಎಂದು ಸಲಹೆ ನೀಡಿದರಲ್ಲದೆ, ಬಹುಮುಖಿ ವ್ಯಕ್ತಿತ್ವವನ್ನು ರೂಢಿಸಿ ಕೊಂಡಿದ್ದ ಡಾ.ಸಿ.ಎನ್.ಮೃತ್ಯುಂಜಯಪ್ಪ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ನನಗೆ ಇಲ್ಲಿಯವರೆಗೆ ಅವರ ಸಾಧನೆಗಳ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಇಲ್ಲಿಗೆ ಬಂದ ಮೇಲೆ ಅವರ ಬಗ್ಗೆ ಸಂಪೂರ್ಣ ಮಾಹಿತಿ ಲಭಿಸಿತು. ಈ ಕಾಲ ದಲ್ಲೂ ಇಂಥ ಸೇವಾ ಮನೋಭಾವ ರೂಢಿಸಿಕೊಂಡ ವೈದ್ಯರು ಇದ್ದರಾ ಎಂಬ ಭಾವನೆ ನನ್ನಲ್ಲಿ ಮೂಡಿತು ಎಂದರು.

ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ಡಾ.ಸಿ.ಎನ್.ಮೃತ್ಯುಂಜಯಪ್ಪ ಹೆಸರಿನಲ್ಲಿ ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ರುವವರಿಗೆ ಮಾತ್ರ ಪ್ರಶಸ್ತಿ ನೀಡಬಾರದು. ಬೇರೆಬೇರೆ ಕ್ಷೇತ್ರದಲ್ಲಿರುವವರನ್ನು ಗುರುತಿಸಿ, ಪ್ರಶಸ್ತಿ ನೀಡಬೇಕು. ಡಾ.ಮೃತ್ಯುಂಜಯಪ್ಪ ಅವರದು ಬಹುಮುಖ ವ್ಯಕ್ತಿತ್ವ. ಅವರ ಜೀವಿತಾವಧಿಯಲ್ಲಿ ಬಡವರ ಆರೋಗ್ಯ, ಶಿಕ್ಷಣ, ಪರಿಸರ ಉಳಿವಿಗಾಗಿ ಚಿಂತಿಸು ತ್ತಿದ್ದರು. 2004 ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ವರ್ಧಿಸಿದ್ದಾಗ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನನ್ನ ಪರವಾಗಿ ಮೃತ್ಯುಂಜಯಪ್ಪ ದಂಪತಿ ಜನರ ಬಳಿ ಮತ ಕೇಳಿದ್ದರು. ಇಂಥ ನಿಸ್ವಾರ್ಥ ಸೇವೆಗೆ ನಾನು ಚಿರಋಣಿ ಎಂದರು.

ವೇದಿಕೆಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುಧಾ ಮೃತ್ಯುಂಜಯಪ್ಪ, ನಗರ ಘಟಕದ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಜಯಗೌಡ ಉಪಸ್ಥಿತರಿದ್ದರು.

ಹವಾಮಾನ ಬದಲಾವಣೆ ಬಗ್ಗೆ ಬ್ಯಾಂಕಾಕ್‍ನಲ್ಲಿ ಉಪನ್ಯಾಸ
ಮೈಸೂರು: ಜೆಎಸ್‍ಎಸ್ ನಿರ್ವಹಣಾ ಅಧ್ಯಯನ ಕೇಂದ್ರ ದಿಂದ ಎಂಬಿಎ ಪಡೆದ ಮೈಸೂರಿನ ಎಂ.ಆರ್.ನಿರಂತ್ ಅವರು ಜ.30ರಂದು ಥೈಲ್ಯಾಂಡ್‍ನ ಬ್ಯಾಂಕಾಕ್‍ನಲ್ಲಿ ಆರಂಭವಾಗಲಿರುವ ಏಷ್ಯ ವಿಶ್ವ ಮಾದರಿ `ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಕಡಿಮೆ ಆದಾಯವಿರುವ ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆ-ಮಾಲ್ಡೀವ್ಸ್ ಗಣರಾಜ್ಯ’ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. ನಿರಂತ್, ರಾಜ್ಯ ಜವಳಿ ಆಯುಕ್ತ ಹಾಗೂ ನಿರ್ದೇಶಕರೂ ಅಲ್ಲದೇ, `ಮೈಸೂರುಮಿತ್ರ’ ಅಂಕಣಕಾರರೂ ಆದ ಎಂ.ಆರ್.ರವಿ ಅವರ ಪುತ್ರ.

Translate »