ಪಾರಂಪರಿಕ ದಸರಾ ಆಚರಣೆ
ಮೈಸೂರು

ಪಾರಂಪರಿಕ ದಸರಾ ಆಚರಣೆ

August 15, 2019

ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪರಿಂದ ಉದ್ಘಾಟನೆ

ಬೆಂಗಳೂರು,ಆ.14(ಕೆಎಂಶಿ)-ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸ ವವನ್ನು ಪ್ರತಿ ಬಾರಿಯಂತೆ ಈ ವರ್ಷವೂ ಪಾರಂಪರಿಕ ದಸರವಾಗಿ ಆಚರಿಸಲು ನಿರ್ಧ ರಿಸಿರುವ ಸರ್ಕಾರ, ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಂದ ಈ ಮಹಾನ್ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಲು ತೀರ್ಮಾನಿಸಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿಂದು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆ ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಮುಖ್ಯಮಂತ್ರಿ ಅವರು, ರಾಜ್ಯ ದಲ್ಲಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ಇದ್ದರೂ ನಾಡಹಬ್ಬವನ್ನು ಎಂದಿ ನಂತೆ ಆಚರಿಸಲು ನಿರ್ಣಯ ಕೈಗೊಳ್ಳಲಾ ಗಿದೆ ಎಂದರು. ನಾಡಹಬ್ಬ ವೆಚ್ಚಕ್ಕಾಗಿ ಕಳೆದ ಬಾರಿ ನೀಡಲಾಗಿದ್ದ 18.50 ಕೋಟಿ ರೂ. ಹಣವನ್ನು ಈ ಬಾರಿಯೂ ತಕ್ಷಣವೇ ಬಿಡು ಗಡೆ ಮಾಡುತ್ತೇನೆ.

ಇದಲ್ಲದೆ, ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗೆ ಪ್ರತ್ಯೇಕವಾಗಿ 2 ಕೋಟಿ ರೂ. ಅಂದರೆ, ಒಟ್ಟಾರೆ 20.50 ಕೋಟಿ ರೂ.ಗಳನ್ನು ಉಭಯ ಜಿಲ್ಲಾಡಳಿತಗಳಿಗೆ ಸೇರಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಸ್ಥಳೀಯ ಜನಪ್ರತಿನಿಧಿಗಳ ಅನಿಸಿಕೆಯಂತೆ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರೂ, ದುಂದು ವೆಚ್ಚ ಬೇಡ ಎಂದು ಅಧಿಕಾರಿಗಳಿಗೆ ಕಟ್ಟಾದೇಶ ಮಾಡಿದರು. ಅರ್ಥಪೂರ್ಣವಾಗಿ ಮತ್ತು ವ್ಯವಸ್ಥಿತವಾಗಿ, ಗೊಂದಲಗಳಿಗೆ ಎಡೆ ಮಾಡಿಕೊಡದೆ, ನಾಡಹಬ್ಬವನ್ನು ಹಿಂದಿನ ವರ್ಷಗಳಂತೆಯೇ ಆಚರಿಸಿ. ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ಎಲ್ಲಿಯೂ ಲೋಪ ಆಗಬಾರದು, ಹೆಚ್ಚು ಪ್ರವಾಸಿಗರನ್ನು ಆಕರ್ಷಿ ಸುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಎಂದರು.

ಈ ಬಾರಿ ದಸರೆಯಲ್ಲಿ ಹೊರ ರಾಜ್ಯದ ಕಲಾವಿದರನ್ನು ಕರೆಸುವುದ ಕ್ಕಿಂತ ಮುಖ್ಯವಾಗಿ ನಮ್ಮ ರಾಜ್ಯದಲ್ಲೇ ಇರುವ ಕಲಾವಿದರಿಗೆ ಅವಕಾಶ ಮಾಡಿಕೊಡಲು ಹೇಳಿ ಎಂದಿದ್ದೇನೆ. ಹೊರ ರಾಜ್ಯದ ಕಲಾವಿದರನ್ನು ಕರೆಸಿಕೊಂಡು ದುಬಾರಿ ವೆಚ್ಚ ಮಾಡುವುದಕ್ಕಿಂತ ನಮ್ಮಲ್ಲೇ ಇರುವ ಪ್ರತಿಭೆಗಳನ್ನು ಗುರುತಿಸಬೇಕು. ದಸರಾ ಆರಂಭಕ್ಕೂ ಮುನ್ನ ದಸರಾ ವಸ್ತು ಪ್ರದರ್ಶನ ಮಳಿಗೆಗಳ ಭರ್ತಿಗೆ ಕ್ರಮ ಕೈಗೊಳ್ಳಿ, ಸರ್ಕಾರದ ವಿವಿಧ ಇಲಾಖೆಗಳೂ ಮಳಿಗೆಗಳನ್ನು ಸ್ಥಾಪಿಸಲಿ ಎಂದು ಸಲಹೆ ನೀಡಿದ್ದೇನೆ ಎಂದರು. ಕಳೆದ ಬಾರಿಯಂತೆ ಈ ಬಾರಿಯೂ ಮುಂಬೈ, ದೆಹಲಿ, ಕೊಲ್ಕತಾ, ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಚಾರ ಹಮ್ಮಿಕೊಳ್ಳುತ್ತೇವೆ. ಉಳಿದಂತೆ ದಸರಾ ಉನ್ನತ ಮಟ್ಟದ ಸಮಿತಿ ಯನ್ನು ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸ್ಥಳೀಯ ವಾಗಿ ರಚಿಸಲಿದ್ದಾರೆ. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 40 ದಿನಗಳ ಕಾಲ ಹೊರ ರಾಜ್ಯದಿಂದ ಮೈಸೂರು ನಗರಕ್ಕೆ ಬರುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುವುದು. ತುರ್ತು ಕಾಮಗಾರಿ ಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಹಾಗೂ ನಿಯಮಗಳು 2000 ದಿಂದ ವಿನಾಯಿತಿ ನೀಡುವ ಕುರಿತು ತೀರ್ಮಾನಿಸಲಾಯಿತು.

ಇದಕ್ಕೂ ಮುನ್ನ ಪ್ರಾಸ್ತಾವಿಕ ಭಾಷಣ ಮಾಡಿದ ಮುಖ್ಯಮಂತ್ರಿ ಅವರು, ರಾಜ್ಯದಲ್ಲಿ ನಾಲ್ಕು ಜಿಲ್ಲೆಗಳು ಬರಕ್ಕೆ ತುತ್ತಾಗಿವೆ, ಉಳಿದ ಜಿಲ್ಲೆಗಳಲ್ಲಿ ಮಳೆ ಮತ್ತು ನೆರೆಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂತಹ ಸನ್ನಿವೇಶದಲ್ಲಿ ದುಂದುವೆಚ್ಚ ಮಾಡದೆ ನಾಡಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಸಲಹೆ ನೀಡಿದರು. ಎಂದಿನಂತೆ ದಸರಾ ಕಾರ್ಯಕ್ರಮಗಳು ನಡೆಯಲು ಅಗತ್ಯ ಹಣವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಮುಗಿಸುತ್ತಿದ್ದಂತೆ, ಸಂಸದ ಶ್ರೀನಿವಾಸ ಪ್ರಸಾದ್ ಹೊರತುಪಡಿಸಿ, ಉಳಿದ ಜನಪ್ರತಿನಿಧಿಗಳು ಸರಳ ದಸರಾ ಬೇಡ, ಎಂದಿನಂತೆಯೇ ವಿಜೃಂಭಣೆಯಿಂದ ಆಚರಿಸೋಣ ಎಂದರು.

ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ನದಿಗಳು ಭರ್ತಿಯಾಗಿವೆ. ಇಂತಹ ಸಂದರ್ಭದಲ್ಲಿ ನಾಡ ದೇವತೆಯ ಪೂಜೆ ಮತ್ತು ದಸರಾ ಕಾರ್ಯಕ್ರಮ ಮತ್ತು ಮೆರವಣಿಗೆ ಎಂದಿನ ವೈಭವದಿಂದಲೇ ನಡೆಯಲಿ. ಮೈಸೂರು ನಗರಕ್ಕೆ ಮೂಲಸೌಕರ್ಯ ಕಲ್ಪಿಸಲು ಹೆಚ್ಚುವರಿ ಹಣ ನೀಡು ವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ದಸರಾ ಮಹೋತ್ಸವ ವನ್ನು ಸರಳವಾಗಿ ಆಚರಿಸುತ್ತೇವೆ ಎಂದು ಈ ಹಿಂದೆ ಹೇಳಿದ ಕಾರಣ ದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ, ಪ್ರವಾಸಿಗರು ಬರದೆ ಹೋಗಿದ್ದರಿಂದ ಆರ್ಥಿಕ ಚಟುವಟಿಕೆಗಳು ನೀರಸವಾದವು.

ದಸರಾ ಮಹೋತ್ಸವ ಕೂಡ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿ ಸಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಹೋತ್ಸವ ಆಚರಿಸೋಣ ಎಂದರು. ಅದ್ಧೂರಿ ದಸರಾ ಎಂದು ಘೋಷಿಸುವುದು ಬೇಡ, ಬದಲಿಗೆ ಎಂದಿನಂತೆ ಪಾರಂಪರಿಕ ದಸರಾ ಮಹೋತ್ಸವ ನಡೆಸುತ್ತೇವೆ ಎಂದರೆ ಸಾಕು, ಇದರಿಂದ ದಸರಾ ಮಹೋತ್ಸವಕ್ಕೆ ಮೆರಗು ಬರುತ್ತದೆ, ಹೆಚ್ಚು ದೀಪಾಲಂಕಾರ ಬೇಡ. ಆದರೆ ನಿಗದಿತ ಕಾರ್ಯಕ್ರಮಗಳು ನಡೆಯಲಿ ಎಂದರು. ಇದಕ್ಕೂ ಮುನ್ನ ಸಂಸದ ಶ್ರೀನಿವಾಸ್ ಪ್ರಸಾದ್ ಅದ್ಧೂರಿ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದರಲ್ಲದೆ ನಾಡಿನ ಜನ ಪ್ರವಾಹದಿಂದ ತತ್ತರಿಸುತ್ತಿರುವಾಗ, ಹಲವರು ಮನೆ-ಮಠ ಕಳೆದುಕೊಂಡಿರುವಾಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿ ಸುವುದು ಸರಿಯಲ್ಲ ಎಂದು ಹೇಳಿದರು.

ಕೊನೆಗೂ ಫಲ ನೀಡಿದ ಪ್ರತಾಪ್‍ಸಿಂಹ ಪ್ರಯತ್ನ: ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋ ತ್ಸವ ಉದ್ಘಾಟನೆ ಮಾಡಿಸಬೇಕೆಂಬ ಸ್ಥಳೀಯ ಸಂಸದ ಪ್ರತಾಪ್ ಸಿಂಹ ಅವರು ಕನಸು ಕೊನೆಗೂ ನನಸಾಗಿದೆ. ಇಂದು ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಪ್ರತಾಪ್ ಸಿಂಹ, ಸಾಹಿತಿ ಭೈರಪ್ಪ ಅವರಿಂದಲೇ ದಸರಾ ಮಹೋತ್ಸವ ಉದ್ಘಾಟಿಸಬೇಕೆಂಬ ಮನವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ತಕ್ಷಣವೇ ಸ್ಪಂದಿಸಿದರು. ಭೈರಪ್ಪ ಹೊರತುಪಡಿಸಿ ಯಾರ ಹೆಸರುಗಳೂ ಸಭೆಯ ಮುಂದೆ ಬರಲಿಲ್ಲ, ಸರ್ಕಾರದ ಈ ನಿರ್ಧಾರದಿಂದ ಸಿಂಹ ಅವರ ಕಳೆದ ಆರೇಳು ವರ್ಷಗಳ ನಿರಂತರ ಪ್ರಯತ್ನ ಫಲ ನೀಡಿತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭ ದಲ್ಲೇ ಸಿಂಹ, ತಾವು ಭಾಗವಹಿಸಿದ ಮೊದಲ ದಸರಾ ಉನ್ನತ ಸಭೆಯಲ್ಲೇ ಭೈರಪ್ಪ ಹೆಸರು ಪ್ರಸ್ತಾಪಿಸಿದ್ದರು. ನಂತರ ಅವರು ಭಾಗವ ಹಿಸಿದ ಎಲ್ಲಾ ದಸರಾ ಸಭೆಯಲ್ಲೂ ಭೈರಪ್ಪ ಹೆಸರು ಪ್ರಸ್ತಾಪ ಮಾಡು ತ್ತಲೇ ಇದ್ದರು, ಆದರೆ ಅಂದಿನ ಸರ್ಕಾರ ಇದನ್ನು ಒಪ್ಪಿರಲಿಲ್ಲ. ಈ ಮಧ್ಯೆ ಪ್ರಸಕ್ತ ಸಾಲಿನ ದಸರಾ ಆಚರಣೆ ಸಂಬಂಧ ಮುಖ್ಯಮಂತ್ರಿ ಯಡಿಯೂ ರಪ್ಪ ಅವರಿಗೆ ತಾವು ಸಲ್ಲಿಸಿದ್ದ ಹಲವು ಪ್ರಸ್ತಾಪಗಳಲ್ಲಿ ಶಾಸಕ ರಾಮದಾಸ್ ಸಹ ಭೈರಪ್ಪ ಅವರಿಂದಲೇ ಈ ಬಾರಿ ದಸರಾ ಉತ್ಸವ ಉದ್ಘಾಟನೆ ನೆರವೇರಿಸಲು ತೀರ್ಮಾನ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.

ಸಂತಸವಾಗಿದೆ, ಸರ್ಕಾರಕ್ಕೆ ಧನ್ಯವಾದ…

ಮೈಸೂರು, ಆ.14(ಎಸ್‍ಬಿಡಿ)- ನಾಡಹಬ್ಬ ಮೈಸೂರು ದಸರಾ ಮಹೋ ತ್ಸವ ಉದ್ಘಾಟನೆಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಕಾದಂಬರಿ ಕಾರರಾದ ಎಸ್.ಎಲ್.ಭೈರಪ್ಪನವರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ನೇತೃತ್ವದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಾರಿ ದಸರಾ ಉದ್ಘಾಟಕರಾಗಿ ಎಸ್.ಎಲ್.ಭೈರಪ್ಪ ಅವರನ್ನು ಒಮ್ಮತ ದಿಂದ ಆಯ್ಕೆ ಮಾಡಿರುವ ಹಿನ್ನೆಲೆ ಯಲ್ಲಿ ಮೈಸೂರಿನ

ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭೈರಪ್ಪ ಅವರು, ತಮ್ಮನ್ನು ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು. ನಾನು 1949ರಿಂದಲೂ ದಸರಾ ಮಹೋತ್ಸವ ನೋಡಿದ್ದೇನೆ. ಎರಡು-ಮೂರು ಬಾರಿ ಮಾತ್ರ ಹತ್ತಿರದಿಂದ ಉತ್ಸವವನ್ನು ಕಣ್ತುಂಬಿಕೊಂಡಿದ್ದೇನೆ. ಮಹಾರಾಜರ ಕಾಲದಲ್ಲಿ ದಸರಾ ಅತ್ಯಂತ ವೈಭವವಾಗಿ ನಡೆಯುತ್ತಿತ್ತು. ಅಂಬಾರಿಯಲ್ಲಿ ಕೂರುತ್ತಿದ್ದ ಮಹಾರಾಜರನ್ನು ನೋಡಲು ಜನ ಬರುತ್ತಿದ್ದರು. ಎಲ್ಲರ ಮನೆಗೂ ನೆಂಟರಿಷ್ಟರು ಬರುತ್ತಿದ್ದರು. ಈಗಲೂ ತುಂಬಾ ಜನ ದಸರಾ ನೋಡಲು ಬರುತ್ತಾರೆ. ಜನಾಕರ್ಷಣೆಯ ಪಾರಂಪರಿಕ ದಸರಾ ಉದ್ಘಾಟಿಸಲು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಸಂತಸವಾಗಿದೆ ಎಂದು ತಿಳಿಸಿದರು.

ತಮಿಳ್ನಾಡಿನಿಂದ ಪರಿಹಾರ; ಪುನರುಚ್ಛಾರ: ಕಳೆದ ವರ್ಷ ಕೊಡಗಿನಲ್ಲಿ ಮಳೆಯಿಂದ ಅಪಾರ ಹಾನಿಯಾಗಿತ್ತು. ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನಮ್ಮ ನೀರು ಕೇಳುವ ತಮಿಳುನಾಡಿ ನಿಂದ ನೆರವು ಕೇಳಬೇಕೆಂದು ಒತ್ತಾಯಿಸಿದ್ದೆ. ಆದರೆ ಅಂದಿನ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಪತ್ರಕ್ಕೆ ಪ್ರತಿಕ್ರಿಯೆಯೂ ಬರಲಿಲ್ಲ. ಈಗಲೂ ಮಳೆ ಹಾಗೂ ನೆರೆ ಹಾವಳಿಗೆ ರಾಜ್ಯ ತುತ್ತಾಗಿದೆ. ಈ ಸಂದರ್ಭದಲ್ಲಿ ನಮಗೆ ನೀರಿಲ್ಲದಿದ್ದರೂ ಬೇಡಿಕೆಯಿಡುವ ತಮಿಳು ನಾಡಿನ ನಿಲುವೇನು?, ಪರಿಹಾರವಾಗಿ ಎಷ್ಟು ಹಣ ನೀಡುತ್ತದೆ? ಎಂದು ಕೇಳುವಂತೆ ಈಗಿನ ಸರ್ಕಾರವನ್ನೂ ಒತ್ತಾಯಿಸುತ್ತೇನೆ. ಈ ಆಗ್ರಹದಿಂದ ಮುಂದಾದರೂ ಪ್ರಯೋಜನವಾಗುತ್ತದೆ ಎಂದು ಭೈರಪ್ಪನವರು ಅಭಿಪ್ರಾಯಿಸಿದರು. ಪ್ರಕೃತಿ ವಿಕೋಪದಿಂದ ಅನಾಹುತವಾದಾಗ ಯಾರೂ ಏನೂ ಮಾಡಲಾಗುವುದಿಲ್ಲ. ಸಹಿಸಿಕೊಳ್ಳಬೇಕು. ಹಾಗೆಯೇ ಮತ್ತೆ ಕಟ್ಟಬೇಕು ಅಷ್ಟೇ. ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ. ಪ್ರಮುಖ ಸಚಿವರು ರಾಜ್ಯದ ನೆರೆ ಪೀಡಿತ ಪ್ರದೇಶಗಳ ಪರಿಶೀಲಿಸಿ ಹೋಗಿದ್ದಾರೆ. ರಾಜ್ಯ ಸರ್ಕಾರವೂ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

Translate »