ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ
ಹಾಸನ

ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ

November 10, 2018

ಅರಸೀಕೆರೆ:  ಇತಿಹಾಸ ಪ್ರಸಿದ್ದವಾದ ನಗರದ ಶ್ರೀ ಪ್ರಸನ್ನ ಗಣಪತಿ 77 ನೇ ವರ್ಷದ ವಿಸರ್ಜನಾ ಮಹೋ ತ್ಸವ ಮೆರವಣಿಗೆಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಇವರು ಈಡುಗಾಯಿ ಸೇವೆ ಸಲ್ಲಿಸುವುದರ ಮೂಲಕ ಇವರು ಶುಕ್ರವಾರ ಸಂಜೆ ಚಾಲನೆ ನೀಡಿದರು.

ನಗರದ ಗಾಂಧಿ ಮೈದಾನದಲ್ಲಿರುವ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ದಿನವಾದ ಶುಕ್ರವಾರದಂದು ಮಹಾ ಮಂಗಳಾರತಿ ನಂತರ ಆಸ್ಥಾನ ಮಂಟಪದಿಂದ ವಾಚನಾಲಯ ರಸ್ತೆಗೆ ಬರಮಾಡಿಕೊಳ್ಳಲಾಯಿತು.ಈ ಸಂದರ್ಭ ದಲ್ಲಿ ಪುಷ್ಪಲಂಕೃತವಾದ ವಾಹನದಲ್ಲಿ ಶೃಂಗರಿಸಿದ ಗಣಪತಿ ಮೆರವಣಿಗೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಸಿರು ನಿಶಾನೆ ತೋರಿಸಿದರು.

ಮೆರವಣಿಗೆಯಲ್ಲಿ ಡಂಕಣಕೋಟೆ ಶಿವಶಕ್ತಿ ಕೀಲು ಕುದುರೆ,ಮಡಿಕೇರಿಯ ಗಣಪತಿ-ಪರುಶುರಾಮ ಕಾಳಗದ ಟ್ಯಾಬ್ಲೋ ಪ್ರದರ್ಶನ,ಡೊಳ್ಳು ಕುಣಿತ, ವೀರಭದ್ರ ಮತ್ತು ಭದ್ರಕಾಳಿ ಕುಣಿತ,ರಾಷ್ಟ್ರ ಪ್ರಶಸ್ತಿ ವಿಜೇತ ಟಿ.ಹೆಚ್.ರವಿಕುಮಾರ್ ತಂಡದ ತಮಟೆ ಚಮತ್ಕಾರ್ಯ, ಚಂಡೇ ವಾದ್ಯ,ಬೊಂಬೆ ಪ್ರದರ್ಶನ, ಕರಡೆ ವಾದ್ಯ, ಮಂಗಳೂರಿನ ಚಿಲಿಪಿಲಿ ವೀರಗಾಸೆ ಸೇರಿದಂತೆ ಜಾನಪದ ಕಲಾ ತಂಡಗಳು ಮರೆವಣಿಗೆಗೆ ಮೆರಗನ್ನು ನೀಡಿದವು.

ಮೆರವಣಿಗೆಯು ವಾಚನಾಲಯ ರಸ್ತೆ ಯಿಂದ ಸಂತೇಪೇಟೆ ಮೂಲಕ ಸಾಗಿ ಪುರಾತನ ಹೋಯ್ಸಳರ ಕಾಲದ ಶ್ರೀ ಚಂದ್ರ ಮೌಳೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ದಂತೆ ಸಾಂಪ್ರದಾಯಕವಾಗಿ ಪೂಜೆಯನ್ನು ಸಲ್ಲಿಸಿ, ನಗರದ ಪೇಟೆ ಬೀದಿ, ತರಕಾರಿ ಮಾರ್ಕೆಟ್ ವೃತ್ತ, ಪಿ.ಪಿ.ಸರ್ಕಲ್, ರೈಲ್ವೇ ಸ್ಟೇಷನ್ ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯು ಸಂಚರಿಸಿತು. ರಾತ್ರೀಯಿಡಿ ಸಂಚರಿಸಿದ ಮೆರವಣಿಗೆಯನ್ನು ನಾಗರೀಕರು ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿ ಮತ್ತು ತಳಿರು ತೋರಣಗಳ ಮೂಲಕ ಶೃಂಗರಿಸಿ ಬರಮಾಡಿ ಕೊಂಡರು. ವಿವಿಧ ವೃತ್ತಗಳಲ್ಲಿ ಸಂಘ-ಸಂಸ್ಥೆಗಳು ಗಣಪತಿಗೆ ಅರ್ಪಿಸಲು ಸಿದ್ದವಾಗಿ ರಿಸಿದ್ದ ವಿವಿಧ ಹಣ್ಣುಗಳು ಮತ್ತು ಹೂವುಗಳನ್ನು ಒಳಗೊಂಡ ಹಾರಗಳು ಸಾರ್ವಜನಿಕರ ಮನ ಸೂರೆಗೊಂಡವು.
ಈ ಸಂದರ್ಭದಲ್ಲಿ ಉದ್ಯಮಿ ಅರುಣ್ ಕುಮಾರ್, ಟಿ.ಆರ್.ನಾಗರಾಜ್,ನಗರಸಭೆ ಮಾಜಿ ಅಧ್ಯಕ್ಷ ಶಮೀವುಲ್ಲಾ, ಗಣಪತಿ ಪೆಂಡಾಲ್ ಸಮಿತಿ ಕಾರ್ಯದರ್ಶಿ ಶಾಂತ ವೀರಯ್ಯ, ನಿರ್ದೇಶಕ ನಾಗಭೂಷಣ್, ರವೀಂದ್ರ, ಪದ್ಮನಾಭ, ಮುಖಂಡರಾದ ಜ್ಯೋತಿ ಗಂಗಾಧರ್, ಧರ್ಮೇಶ್,ನಗರಸಭೆ ಮಾಜಿ ಸದಸ್ಯ ಮನುಕುಮಾರ್,ಗೀಜಿಹಳ್ಳಿ ಧರ್ಮಪ್ಪ, ಬಾಲಾಜಿ, ಪ್ರಭುಕುಮಾರ್ ಇನ್ನಿತರರು ಇದ್ದರು.

Translate »