ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಸಕ್ತಿ ಕೊರತೆ: ಈ ಬಾರಿಯೂ ನಡೆಯದ  ಶ್ರೀ ಚಾಮರಾಜೇಶ್ವರ ರಥೋತ್ಸವ
ಚಾಮರಾಜನಗರ

ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಸಕ್ತಿ ಕೊರತೆ: ಈ ಬಾರಿಯೂ ನಡೆಯದ  ಶ್ರೀ ಚಾಮರಾಜೇಶ್ವರ ರಥೋತ್ಸವ

July 25, 2018

ಚಾಮರಾಜನಗರ:  ಜಿಲ್ಲೆಯ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದಾಗಿ ಚಾಮರಾಜನಗರದ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ರಥೋತ್ಸವ ಈ ಬಾರಿಯೂ ನಡೆಯುತ್ತಿಲ್ಲ. ಇದು ವಿಶೇಷವಾಗಿ ನವ ದಂಪತಿಗಳಲ್ಲಿ ಹಾಗೂ ನಗರದ ನಾಗರಿಕರಲ್ಲಿ ಬೇಸರ ಮೂಡಿಸಿದೆ.

ನಗರದ ಮಧ್ಯಭಾಗದಲ್ಲಿ ಇರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದ ರಥೋತ್ಸವ ಕಳೆದ 180 ವರ್ಷಗಳಿಂದಲೂ ನಡೆಯುತ್ತಿತ್ತು. ರಥೋತ್ಸವ ಪ್ರತಿ ವರ್ಷ ಆಷಾಢ ಮಾಸದಲ್ಲಿ ನಡೆಯುತ್ತಿತ್ತು. ಇದರಿಂದ ಈ ರಥೋತ್ಸವಕ್ಕೆ ಎಲ್ಲಿಲ್ಲದ ಮಹತ್ವ. ಆದರೆ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ದೊಡ್ಡ ರಥಕ್ಕೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿದ್ದ. ಇದರಿಂದಾಗಿ ರಥದ ಸ್ವಲ್ಪ ಭಾಗ ಸುಟ್ಟು ಹೋಯಿತು.

ಸುಟ್ಟು ಹೋಗಿರುವ ರಥದ ಮೇಲೆ ದೇವರನ್ನು ಕೂರಿಸಿ ರಥೋತ್ಸವ ನಡೆಸಬಾರದು. ನಡೆಸಿದರೆ ಯಾವುದಾದರೊಂದು ಅನಾಹುತ ಸಂಭವಿಸುತ್ತದೆ ಎಂದು ಜೋತಿಷಿಗಳು ಹೇಳಿದ್ದರಿಂದ ಕಳೆದ ಬಾರಿ ರಥೋತ್ಸವ ನಡೆದಿರಲಿಲ್ಲ. ನೂತನ ರಥ
ನಿರ್ಮಾಣ ಆಗಿ ಮುಂದಿನ ಬಾರಿಯಾದರೂ ರಥೋತ್ಸವ ನಡೆಯಲಿದೆ ಎಂದು ಜಿಲ್ಲೆಯ ಜನತೆ ಭಾವಿಸಿದ್ದರು. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೂತನ ರಥ ನಿರ್ಮಾಣಕ್ಕೆ ಟೆಂಡರ್ ಸಹಕರೆದಿಲ್ಲ. ಹೀಗಾಗಿ ಇದೇ ತಿಂಗಳು 26ರಂದು ನಡೆಯಬೇಕಾಗಿದ್ದ ಶ್ರೀ ಚಾಮರಾಜೇಶ್ವರ ರಥೋತ್ಸವ ಈ ಬಾರಿಯೂ ನಡೆಯುತ್ತಿಲ್ಲ.

ಪ್ರತಿವರ್ಷ ಆಷಾಢ ಮಾಸದಲ್ಲಿ ನಡೆಯುತ್ತಿದ್ದ ಈ ರಥೋತ್ಸವದಲ್ಲಿ ನವದಂಪತಿಗಳು ಪಾಲ್ಗೊಳ್ಳುತ್ತಿದ್ದರು. ರಥಕ್ಕೆ ಹಣ್ಣು-ಜವನ ಎಸೆದು ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಈ ಜಾತ್ರೆಯನ್ನು ನವ ಜೋಡಿಗಳ ಜಾತ್ರೆ ಎಂದು ಸಹ ಕರೆಯಲಾಗುತ್ತಿತ್ತು. ಆದರೆ ಈ ವರ್ಷವೂ ಸಹ ರಥೋತ್ಸವ ನಡೆಯದ ಕಾರಣ ನವಜೋಡಿ ಗಳಲ್ಲಿ ನಿರಾಶೆ ಮೂಡಿಸಿದೆ. ಹಣ ಇದ್ದರೂ ಪ್ರಯೋಜನ ಇಲ್ಲ. ರಾಜ್ಯ ಸರ್ಕಾರ ಹೊಸ ರಥ ನಿರ್ಮಾಣಕ್ಕೆ 1.20 ಕೋಟಿ ರೂ. ಅನು ದಾನ ನೀಡಿದೆ. ಆದರೆ ಈ ಅನುದಾನ ವನ್ನು ಬಳಸಿಕೊಂಡು ರಥ ನಿರ್ಮಿಸು ವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರ ಹಣವನ್ನು ಮುಜರಾಯಿ ಇಲಾಖೆಗೆ ಬಿಡುಗಡೆ ಮಾಡಿತ್ತು. ರಥ ನಿರ್ಮಿಸುವ ಹೊಣೆಗಾರಿಕೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಕರೆದಿದ್ದ ಟೆಂಡರ್ ಪ್ರಕ್ರಿಯೆ ಸಮರ್ಪಕ ವಾಗಿಲ್ಲ ಎಂಬ ಕಾರಣಕ್ಕೆ ಟೆಂಡರ್ ರದ್ದಾಯಿತು. ಈಗ ಮತ್ತೊಮ್ಮೆ ಟೆಂಡರ್ ಕರೆಯಲು ಎಲ್ಲಾ ರೀತಿಯಲ್ಲಿ ಕ್ರಮಕೈಗೊಳ್ಳ ಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ‘ಮೈಸೂರು ಮಿತ್ರ’ ನಿಗೆ ತಿಳಿಸಿದರು.

ಕೂಡಲೇ ಟೆಂಡರ್ ಕರೆದು ನೂತನ ರಥ ನಿರ್ಮಾಣಕ್ಕೆ ಮುನ್ನುಡಿ ಬರೆಯ ಲಾಗುವುದು. ಮುಂದಿನ ವರ್ಷದೊಳಗೆ ನೂತನ ರಥ ನಿರ್ಮಾಣ ಆಗಲಿದೆ. ರಥೋತ್ಸವ ಎಂದಿನಂತೆ ನಡೆಯಲಿದೆ ಎಂಬ ವಿಶ್ವಾಸವನ್ನು ಜಿಲ್ಲಾಧಿಕಾರಿ ವ್ಯಕ್ತಪಡಿಸಿದರು.

Translate »