ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಪ್ರತಿ ಯೂನಿಟ್‍ಗೆ 33 ಪೈಸೆ ಹೆಚ್ಚಳ
ಮೈಸೂರು

ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಪ್ರತಿ ಯೂನಿಟ್‍ಗೆ 33 ಪೈಸೆ ಹೆಚ್ಚಳ

May 31, 2019

ಬೆಂಗಳೂರು: ಸಾರ್ವತ್ರಿಕ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರ ಪ್ರತಿ ಯೂನಿಟ್‍ಗೆ 33 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಿಸಿ ಆದೇಶ ಮಾಡಿದೆ. ಕಳೆದ ಏಪ್ರಿಲ್ 1ರಿಂದಲೇ ಪೂರ್ವಾನ್ವಯ ವಾಗುವಂತೆ ದರ ಹೆಚ್ಚಳ ಮಾಡಿದ್ದು, ಗ್ರಾಹಕರು ತಮ್ಮ ಮುಂದಿನ ಬಿಲ್ ಸಂದರ್ಭದಲ್ಲಿ 2ತಿಂಗಳ ಹೆಚ್ಚಿನ ದರವನ್ನು ತೆರಬೇಕಾಗಿದೆ.

ಸರ್ಕಾರ ಮತ್ತು ವಿದ್ಯುತ್ ಪ್ರಸರಣ ಇಲಾಖೆಗಳು ಮಾಡಿರುವ ತಪ್ಪಿಗೆ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಬೆಲೆ ತೆರಬೇಕಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋ ಗದ ಅಧ್ಯಕ್ಷ ಶಂಭು ದಯಾಳ್ ಮೀನಾ, ದರ ಹೆಚ್ಚಳದ ಮಾಹಿತಿ ನೀಡಿದ್ದಲ್ಲದೆ, ಸಂಸ್ಥೆಗೆ ಆಗುತ್ತಿರುವ ನಷ್ಟ ಸರಿ ದೂಗಿಸಲು ಗ್ರಾಹಕರ ಮೇಲೆ ಅಲ್ಪ ಹೊರೆ ಹೇರಲಾ ಗಿದೆ ಎಂದರು. ವಿವಿಧ ಹಂತಗಳಲ್ಲಿ ವಿದ್ಯುತ್ ದರಗಳ ಏರಿಕೆ ಪ್ರತಿ ಯೂನಿಟ್‍ಗೆ 15 ಪೈಸೆಯಿಂದ 30 ಪೈಸೆ ವರೆಗೂ ಇರುತ್ತದೆ. ನಿಗದಿತ ಶುಲ್ಕ ಸೇರಿದಂತೆ ವಿದ್ಯು ಚ್ಛಕ್ತಿ ದರದಿಂದ ವಸೂಲಿಯಾಗುವ ಮೊತ್ತದಲ್ಲಿ ಎಲ್ಲಾ ವಿತರಣಾ ಸಂಸ್ಥೆಗಳ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ ಸರಾಸರಿ 33 ಪೈಸೆ ಮತ್ತು ಶೇ.4.80 ಏರಿಕೆ ಇರುತ್ತದೆ.

ನಗರ ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸ್ತುತ 30 ಯೂನಿಟ್‍ವರೆಗೆ 3.50 ರೂ. ಇದ್ದು, ಅದನ್ನು 3.75 ಕ್ಕೆ, 31 ರಿಂದ 100 ಯೂನಿಟ್ ಬಳಕೆಗೆ 4.95 ರಿಂದ 5.20ಕ್ಕೂ, 101 ರಿಂದ 200 ಯೂನಿಟ್‍ಗೆ 6.50 ರಿಂದ 6.75ಕ್ಕೂ, 201 ರಿಂದ 300 ಯೂನಿಟ್‍ಗೆ 7.55 ರೂ. 300 ರಿಂದ 400 ಯೂನಿಟ್‍ಗೆ 7.60 ರೂ. 400 ಯೂನಿಟ್‍ಗಿಂತ ಮೇಲ್ಪಟ್ಟರೆ 7.65 ರೂ.ನಿಂದ ಅನುಕ್ರಮವಾಗಿ ಪ್ರತಿ ಯೂನಿಟ್‍ಗೆ 25, 20 ಹಾಗೂ 15 ಪೈಸೆಗಳಂತೆ ಏರಿಕೆ ಮಾಡಲಾಗಿದೆ. ಪಂಚಾಯತ್ ಮಟ್ಟದಲ್ಲೂ ಪ್ರತಿ ಸ್ಲ್ಯಾಬ್‍ಗೆ ದರ ಹೆಚ್ಚಳ ಮಾಡಲಾಗಿದೆ ಎಂದರು. ಸಣ್ಣ ಕೈಗಾರಿಕೆ ಬಳಕೆಗೆ ಪ್ರತಿ ಯೂನಿಟ್‍ಗೆ 15 ರಿಂದ 20 ಪೈಸೆ, ಬೃಹತ್ ಕೈಗಾರಿಕೆಗೆ ಪ್ರತಿ ಯೂನಿಟ್‍ಗೆ 20 ಪೈಸೆ, ವಾಣಿಜ್ಯ ಬಳಕೆಗೆ ಪ್ರತಿ ಯೂನಿಟ್‍ಗೆ 25 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.

ಕುಡಿಯುವ ನೀರು ಸರಬರಾಜು ಮಾಡುವ ಎಲ್‍ಟಿ ಸ್ಥಾವರಗಳಲ್ಲಿ ಬಳಸಲಾಗುವ ಪ್ರತಿ ಯೂನಿಟ್‍ಗೆ 20 ಪೈಸೆ ಹೆಚ್ಚಳ ಮಾಡಲಾಗಿದೆ. ಇದೇ ದರವನ್ನು ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲಿದೆ. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಯಾವುದೇ ದರ ನಿಗದಿ ಮಾಡಿಲ್ಲ. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಆಯಾ ಸಂಸ್ಥೆಗಳಿಗೆ ಭರಿಸಿಕೊಡಲಿದೆ ಎಂದು ತಿಳಿಸಿದರು.

ಪ್ರಸರಣ ನಿಗಮಗಳು ಸಲ್ಲಿಸಿದ್ದ ಕೋರಿಕೆ ಪೂರ್ವಪರ ಪರಿಶೀಲನೆ ಮಾಡುವುದರ ಜೊತೆಗೆ ಗ್ರಾಹಕರ ಅಹವಾಲು ಸ್ವೀಕರಿಸಿ, ಆಯೋಗವು ದರ ನಿಗದಿ ಮಾಡಿದೆ.

ಹೊಸ ಉಷ್ಣ ವಿದ್ಯುತ್ ಕೇಂದ್ರಗಳಿಂದ ಖರೀದಿಸುವ ವಿದ್ಯುತ್ ದರದಲ್ಲಿನ ಏರಿಕೆ ಶೇ.16ರಷ್ಟು ಹೆಚ್ಚಳವಾಗಿದೆ. ಇದರ ಜೊತೆ ಜೊತೆಯಲ್ಲೇ ನೌಕರರ ವೇತನ ಪರಿಷ್ಕರಣೆ ಮತ್ತು ಕಾರ್ಯನಿರ್ವಹಣಾ ವೆಚ್ಚದಲ್ಲಿ ಶೇ.20ರಷ್ಟು ಏರಿಕೆ ಕಂಡಿದೆ.

ಕಳೆದ 2017-18ನೇ ಸಾಲಿನಲ್ಲಿ ಕೊರತೆ ಕಂಡ 2192.33 ಕೋಟಿ ರೂ.ಗಳ ಹೊಂದಾಣಿಕೆ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಆಯೋಗ ದರ ನಿಗದಿಪಡಿ ಸಿದೆ ಎಂದು ಸಮರ್ಥಿಸಿಕೊಂಡರು. ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ವರ್ಷ 2,932.24 ಕೋಟಿ, ಮಂಗಳೂರು ವ್ಯಾಪ್ತಿಯಲ್ಲಿ 706.39, ಚಾಮುಂಡೇಶ್ವರಿ ವ್ಯಾಪ್ತಿಯಲ್ಲಿ 630.75, ಹುಬ್ಬಳ್ಳಿ ವ್ಯಾಪ್ತಿಯಲ್ಲಿ 1,980.09 ಹಾಗೂ ಕಲಬುರ್ಗಿ ವ್ಯಾಪ್ತಿಯಲ್ಲಿ 964.41 ಕೋಟಿ ಸೇರಿದಂತೆ ಒಟ್ಟು ವಿದ್ಯುತ್ ಕಂಪೆನಿಗಳಿಗೆ 7,217.88 ಕೋಟಿ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಕಂಪೆನಿಯು ಪ್ರತಿ ಯೂನಿಟ್‍ಗೆ 1.63 ಪೈಸೆ, ಮೆಸ್ಕಾಂ 1.38, ಚೆಸ್ಕಾಂ 1 ರೂ., ಜೆಸ್ಕಾಂ 1.27 ಪೈಸೆ ಏರಿಕೆ ಮಾಡುವಂತೆ ಕೆಇಆರ್‍ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ನಿಯಮದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡುವ ಮುನ್ನ ಕೆಇಆರ್‍ಸಿ ಸಾರ್ವಜನಿಕರಿಂದ ದೂರುಗಳನ್ನು ಆಲಿಸುತ್ತದೆ. ಅಲ್ಲಿ ವ್ಯಕ್ತವಾಗುವ ಸಾಧಕ-ಬಾಧಕಗಳನ್ನು ಪರಿಗಣಿಸಿ ಅಂತಿಮವಾಗಿ ವಿದ್ಯುತ್ ಕಂಪೆನಿ ಮತ್ತು ಸಾರ್ವಜನಿಕರಿಗೆ ಹೊರೆಯಾಗದಂತೆ ಸಮತೋಲನ ದರವನ್ನು ಏರಿಕೆ ಮಾಡುವುದು ವಾಡಿಕೆಯಾಗಿದೆ.

Translate »