ಮೈಸೂರಲ್ಲಿ ಮೋದಿ ಪ್ರಮಾಣ ವಚನವನ್ನು ಬೃಹತ್ ಎಲ್‍ಇಡಿ ಪರದೆಯಲ್ಲಿ ವೀಕ್ಷಿಸಿ ಹರ್ಷಚಿತ್ತರಾದ ಜನತೆ
ಮೈಸೂರು

ಮೈಸೂರಲ್ಲಿ ಮೋದಿ ಪ್ರಮಾಣ ವಚನವನ್ನು ಬೃಹತ್ ಎಲ್‍ಇಡಿ ಪರದೆಯಲ್ಲಿ ವೀಕ್ಷಿಸಿ ಹರ್ಷಚಿತ್ತರಾದ ಜನತೆ

May 31, 2019

ಮೈಸೂರು: ದೇಶದ ಪ್ರಧಾನಿ ಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಗಳಿಗೆಯನ್ನು ಬೃಹತ್ ಎಲ್‍ಇಡಿ ಪರದೆ ಮೂಲಕ ಮೈಸೂರಿನ ವಿವಿಧೆಡೆ ಬಿಜೆಪಿ ಕಾರ್ಯ ಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಕಣ್ತುಂಬಿ ಕೊಂಡರು. ಮೈಸೂರಿನ ಗಾಂಧಿ ವೃತ್ತ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ನೇರ ಪ್ರಸಾರ ಕಾರ್ಯಕ್ರಮ ದಲ್ಲಿ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು ಮೋದಿಯವರ ಪ್ರಮಾಣ ವಚನಕ್ಕೆ ಸಾಕ್ಷಿಯಾದರು.

ಶಾಸಕ ಎಸ್.ಎ.ರಾಮದಾಸ್ ಕಚೇರಿ ಆವರಣ: ವಿದ್ಯಾರಣ್ಯಪುರಂನಲ್ಲಿರುವ ಶಾಸಕ ಎಸ್.ಎ.ರಾಮ ದಾಸ್ ಅವರ ಕಚೇರಿ ಆವರಣದಲ್ಲಿ ಆಯೋಜಿಸ ಲಾಗಿದ್ದ ಮೋದಿ ಪ್ರಮಾಣ ವಚನ ಸ್ವೀಕಾರ ನೇರ ಪ್ರಸಾರಕ್ಕೆ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದೇಶದಲ್ಲಿ ಎಲ್ಲರೂ ಜಾತಿ ಧರ್ಮವನ್ನು ಮರೆತು ಅಭಿವೃದ್ಧಿಗಾಗಿ ಹಾಗೂ ದೇಶದ ಭವಿಷ್ಯಕ್ಕಾಗಿ ಮೋದಿಯವರನ್ನು ಬೆಂಬಲಿಸಿ ದ್ದಾರೆ. ಪ್ರಧಾನಿ ಮೋದಿಯವರ ಸಚಿವ ಸಂಪುಟ ಹೇಗಿ ರುತ್ತದೆ ಎಂಬುದರಲ್ಲಿ ಎಲ್ಲರಿಗೂ ಕುತೂಹಲವಿದೆ ಎಂದರು.

ಮೋದಿಯವರಿಗೆ ಯುವ ಮತದಾರರು ಹೆಚ್ಚಿನ ಬೆಂಬಲವನ್ನು ನೀಡಿದ್ದು, ಹೊಸ ನಿರೀಕ್ಷೆಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ನಾಗರಿಕರಿಗೆ ಹರ್ಷ ತಂದಿದೆ ಎಂದರು.

ಜಿಎಸ್‍ಎಸ್ ಸಂಸ್ಥಾಪಕ ಶ್ರೀಹರಿ, ಸೇಫ್ ವೀಲ್ಸ್‍ನ ಪ್ರಶಾಂತ್, ಬಿಜೆಪಿ ಮುಖಂಡ ಬಿ.ವಿ.ಮಂಜುನಾಥ್, ನಗರಪಾಲಿಕೆ ಸದಸ್ಯರಾದ ಚಂಪಕ, ಗೀತಶ್ರೀ, ಶಾಂತಮ್ಮ, ಶಾರದಮ್ಮ, ಛಾಯಾದೇವಿ, ಸೌಮ್ಯ, ಎಂ.ಸಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಗಾಂಧಿ ವೃತ್ತ: ನಗರದ ಗಾಂಧಿ ವೃತ್ತದಲ್ಲಿ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ನೇರ ಪ್ರಸಾರವನ್ನು ಸಾವಿರಾರು ಬಿಜೆಪಿ ಕಾರ್ಯಕರ್ತರು ವೀಕ್ಷಣೆ ಮಾಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಎಲ್.ನಾಗೇಂದ್ರ, ನರೇಂದ್ರ ಮೋದಿಯವರು 2ನೇ ಬಾರಿಗೆ ದೇಶದ ಪ್ರಧಾನಿ ಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ಮೈಸೂರಿನ ಜನತೆ, ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿಯವರ ಹಿತೈಷಿಗಳು ಕಣ್ತುಂಬಿಕೊಂಡಿದ್ದಾರೆ.

ದೇಶದ ಜನತೆ ಮತ್ತೊಮ್ಮೆ ನರೇಂದ್ರ ಮೋದಿ ಯವ ರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಇಂದು ದೇಶವೇ ಸಂತಸದಲ್ಲಿದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಅವರು ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗೆಯೇ ಸಂಸದ ಪ್ರತಾಪ್ ಸಿಂಹ ಅವರಿಗೂ ಸಚಿವ ಸ್ಥಾನ ದೊರೆತಿದ್ದರೆ ಸಂತೋಷ ಇಮ್ಮಡಿಯಾಗುತ್ತಿತ್ತು ಎಂದರು. ಮುಖಂಡರಾದ ಸೋಮಶೇಖರ ರಾಜು, ಶಿವಕುಮಾರ್, ತೋಂಟದಾರ್ಯ, ಬದರೀಶ್, ವಾಣೀಶ್, ಚಿಕ್ಕವೆಂಕಟ, ಸುಬ್ಬಯ್ಯ, ರಾಮಸ್ವಾಮಿ, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಕಿರಣ್ ಗೌಡ ಮತ್ತಿತರರು ಭಾಗವಹಿಸಿದ್ದರು.

ವಿಜಯೋತ್ಸವ ಆಚರಣೆ: ಮೋದಿಯವರು ಪ್ರಧಾನಿ ಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮೈಸೂ ರಿನ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸ ಲಾಯಿತು. ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಮುಖಂ ಡರು ಹಾಗೂ ಕಾರ್ಯಕರ್ತರು ಕಮಲ ಆಕಾರದ ಚಿತ್ರದ ಮೇಲೆ ದೀಪಗಳನ್ನು ಇಟ್ಟು ಬೆಳಗಿಸಿ, ಭಾರ ತಾಂಬೆಯ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು. ಈ ವೇಳೆ ಮಾಧ್ಯಮ ಗಳೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಹೆಚ್.ವಿ.ರಾಜೀವ್, ಮೋದಿಯವರು ಪ್ರಮಾಣ ವಚನ ಸ್ವೀಕರಿಸಿರುವುದು ಎಲ್ಲರಿಗೂ ಸಂತೋಷ ನೀಡಿದೆ. ಸಚಿವ ಸಂಪುಟಕ್ಕೆ ಆಯ್ಕೆಯಾಗಿ ರುವ ಎಲ್ಲರೂ ದೇಶದ ಜನತೆಯ ನಿರೀಕ್ಷೆ ಈಡೇರಿ ಸುತ್ತಾರೆ. ನೂತನವಾಗಿ ಸಚಿವರಾಗಿ ಆಯ್ಕೆ ಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಮುಖಂಡರಾದ ಬಿ.ಹೆಚ್.ಮಂಜುನಾಥ್, ಜಗದೀಶ್, ಪ್ರೇಮಾ, ಪರಮೇಶ್‍ಗೌಡ, ರಮೇಶ್, ಸುರೇಶ್ ಬಾಬು, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸುತ್ತಿದಂತೆಯೇ ‘ಮೋದಿ.. ಮೋದಿ…’ ಎಂದು ಜೈಕಾರ ಕೂಗಿ, ಜಯ ಘೋಷಣೆಗಳನ್ನು ಮಾಡಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು. ಬಿಜೆಪಿ ಬಾವುಟಗಳನ್ನು ಹಿಡಿದು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಗಳಿಗೆಯನ್ನು ಕಣ್ತುಂಬಿಕೊಳ್ಳುವುದರೊಂದಿಗೆ ಶಿಳ್ಳೆ, ಚಪ್ಪಾಳೆಗಳನ್ನು ಹಾಕುತ್ತಾ ಸಂಭ್ರಮಿಸಿದರು.

Translate »