ಮರಗಳ ಹನನದಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ: ಸಿಎಸ್‍ಆರ್‍ಟಿಐ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಎಚ್ಚರಿಕೆ
ಮೈಸೂರು

ಮರಗಳ ಹನನದಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ: ಸಿಎಸ್‍ಆರ್‍ಟಿಐ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಎಚ್ಚರಿಕೆ

June 4, 2018

ಮೈಸೂರು:  ಪ್ರಪಂಚದಲ್ಲಿ ವರ್ಷಕ್ಕೆ 15 ಬಿಲಿಯನ್ ಮರಗಳ ಹನನ ನಡೆಯುತ್ತಿದ್ದು, ಇದರಿಂದ ಪರಿಸರದಲ್ಲಿ ಅಸಮತೋಲನ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರೆದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ ಎಂದು ಕೇಂದ್ರೀಯ ರೇಷ್ಮೆ ಕೃಷಿ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ (ಸಿಎಸ್‍ಆರ್‍ಟಿಐ) ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು.

ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ `ಹಸಿರು-ಉಸಿರು’ ಶೀರ್ಷಿಕೆಯಡಿ ಭಾನುವಾರ ಹಮ್ಮಿಕೊಂಡಿದ್ದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರ ರಚನೆಯ ಪರಿಸರ ಜಾಗೃತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಗರಿಕತೆ ಆರಂಭದಿಂದ ಇದುವರೆಗೆ ಪ್ರಪಂಚದಲ್ಲಿ ಶೇ.45ರಷ್ಟು ಮರಗಳ ಹನನ ಮಾಡಲಾಗಿದೆ. ಇದೀಗ ವರ್ಷಕ್ಕೆ ಇಡೀ ವಿಶ್ವದಲ್ಲಿ 15 ಶತಕೋಟಿ (ಬಿಲಿಯನ್) ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಆದರೆ ವರ್ಷಕ್ಕೆ ಗಿಡಗಳನ್ನು ನೆಡುತ್ತಿರುವುದು ಮಾತ್ರ ಕೇವಲ 5 ಬಿಲಿಯನ್. ಪರಿಣಾಮ ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್ ನಡುವೆ ಅಸಮತೋಲನ ಹೆಚ್ಚುತ್ತಿದ್ದು, ಆ ಮೂಲಕ ಪರಿಸರ ಮಾಲಿನ್ಯಕ್ಕೆ ನಾಂದಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ವಿಶ್ವದ ಜನಸಂಖ್ಯೆ 762 ಕೋಟಿ ಇದ್ದು, ಇದು 2050ರ ವೇಳೆ 960 ಕೋಟಿಗೆ ಹೆಚ್ಚಳವಾಗುವ ಅಂದಾಜಿದೆ. ಆದರೆ ಪರಿಸರ ನಾಶದಿಂದ ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ ಶುದ್ಧ ಗಾಳಿ ದೊರೆಯುವ ಅನುಮಾನ ಕಾಡುತ್ತಿದೆ. ಇಡೀ ಪ್ರಪಂಚದ ಶೇ.95ರಷ್ಟು ಜನರು ಅಶುದ್ಧ ಗಾಳಿ ಸೇವನೆ ಮಾಡುತ್ತಿದ್ದಾರೆಂದು ಸಂಶೋಧನಾ ವರದಿಯೊಂದು ಉಲ್ಲೇಖಿಸಿದೆ. ವಾಯು ಮಾಲಿನ್ಯದ ಕಾರಣಕ್ಕೆ ವಿವಿಧ ಅನಾರೋಗ್ಯ ಸಮಸ್ಯೆಗೆ ತುತ್ತಾಗಿ ಮೃತಪಡುವವರ ಸಂಖ್ಯೆ ಭಾರತದಲ್ಲಿ ಹೆಚ್ಚಿದ್ದು, ವರದಿಯೊಂದರ ಪ್ರಕಾರ, ದೇಶದಲ್ಲಿ ವರ್ಷಕ್ಕೆ 15.6 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಡುಗಡೆಯಾಗಿರುವ ಜಾಗತೀಕ ಮಟ್ಟದ ಶ್ರೇಯಾಂಕದಲ್ಲಿ ಭಾರತ 177ನೇ ಸ್ಥಾನ ಪಡೆದುಕೊಂಡಿದೆ. ದುರಂತವೆಂದರೆ, ಕಳೆದ 2 ವರ್ಷಗಳ ಹಿಂದೆ ಈ ಸಮೀಕ್ಷೆಯಲ್ಲಿ 141ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ಕುಸಿತ ಕಂಡಿದೆ. ಪರಿಸರ ಸಂರಕ್ಷಣೆಯಲ್ಲಿ ಹಿಂದುಳಿದಿರುವ ಕಾರಣಕ್ಕೆ ಈಗಾಗಲೇ ಚೀನಾದಲ್ಲಿ ಆಮ್ಲಜನಕ ಸೇವನೆಗೆ ಕ್ಲಬ್‍ಗಳು ಆರಂಭಗೊಂಡಿದೆ. ಎಚ್ಚುತ್ತುಕೊಂಡು ಪರಿಸರ ಉಳಿಸದಿದ್ದರೆ, ನಮ್ಮ ಅವನತಿಗೇ ನಾವೇ ಭೂನಾದಿ ಹಾಕಿದಂತೆ. -ಡಾ.ಟಿ.ತಿಪ್ಪೇಸ್ವಾಮಿ

ಪರಿಸರದ ಮಹತ್ವ ಸಾರಿದ ಚಿತ್ರಕಲೆ: ನಿಸರ್ಗದ ಸೊಬಗು, ಸುಂದರ ಪರಿಸರದ ಮೇಲೆ ಮಾನವ ನಡೆಸುತ್ತಿರುವ ದಬ್ಬಾಳಿಕೆಯನ್ನು ಪ್ರತಿಬಿಂಬಿಸುವ 40ಕ್ಕೂ ಹೆಚ್ಚು ಚಿತ್ರಕಲೆಗಳು ಇಲ್ಲಿ ಪ್ರದರ್ಶನಗೊಂಡಿದ್ದವು. ಜೀವ ವೈವಿಧ್ಯತೆಯ ಮೇಲೆ ಬೆಳಕು ಚೆಲ್ಲುವ ಚಿತ್ರಕಲೆಗಳು ಹಾಗೂ ಓಝೋನ್ ಪದರಕ್ಕೆ ಆಗುತ್ತಿರುವ ಹಾನಿ ಸೇರಿದಂತೆ ಪರಿಸರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ಆಗುವ ಅನಾಹುತಗಳನ್ನು ಕೇಂದ್ರೀಕರಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಲಾಗಿತ್ತು.

ಮರಗಳ ಪೋಷಣೆಗಾಗಿಯೇ ಜೀವನ ಮುಡುಪಾಗಿಟ್ಟಿರುವ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರವೂ ಹಸಿರಿನ ಹಿನ್ನೆಲೆಯಲ್ಲಿ ಮೂಡಿಬಂದಿತ್ತು. ಆಮ್ಲ ಮಳೆಯ ದುಷ್ಪರಿಣಾಮಗಳು, ಅವನತಿಯ ಹಾದಿ ಹಿಡಿದಿರುವ ಜೀವ ಸಂಕುಲಗಳ ಚಿತ್ರಗಳು ಇಲ್ಲಿನ ಪ್ರದರ್ಶನದಲ್ಲಿ ಅನಾವರಣಗೊಂಡಿದ್ದವು. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಇದ್ದ ಚಿತ್ರಕಲಾ ಪ್ರದರ್ಶನದ ವೀಕ್ಷಣೆಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು.

ಓರಿಗಾಮಿ ಕಲಾವಿದ ಹೆಚ್.ವಿ.ಮುರಳೀಧರ್, ಮೈಸೂರ್ ಸೈನ್ಸ್ ಫೌಂಡೇಷನ್‍ನ ಕಾರ್ಯದರ್ಶಿ ಬಿ.ಸಂತೋಷ್‍ಕುಮಾರ್, ಚಿತ್ರಕಲಾವಿದ ಯು.ಜಿ.ಮೋಹನ್‍ಕುಮಾರ್ ಆರಾಧ್ಯ, ಉಪನ್ಯಾಸಕ ಮಹೇಶಕುಮಾರ್ ಮತ್ತಿತರರು ಹಾಜರಿದ್ದರು.

Translate »