ಸ್ವಚ್ಛ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಸ್ಥಾಪನೆಗೆ ಕ್ರಮ
ಮೈಸೂರು

ಸ್ವಚ್ಛ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಸ್ಥಾಪನೆಗೆ ಕ್ರಮ

June 4, 2018
  • ಕಳೆದ ವರ್ಷ 15 ಇ-ಶೌಚಾಲಯ ನಿರ್ಮಿಸಲಾಗಿತ್ತು
  • ಬಯಲು ಶೌಚಮುಕ್ತಕ್ಕೆ ಕ್ರಮ
  • ಬಹು ಬೇಡಿಕೆಯ ಸ್ಥಳಗಳಲ್ಲಿ ಜೋಡಣೆ

– ಎಂ.ಟಿ.ಯೋಗೇಶ್ ಕುಮಾರ್

ಮೈಸೂರು:  ಮೂರನೇ ಬಾರಿಯೂ ಸ್ವಚ್ಛನಗರಿಯ ಬಿರುದು ಪಡೆದಿರುವ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಅಳವಡಿಸುವುದಕ್ಕೆ ನಗರ ಪಾಲಿಕೆ ಉದ್ದೇಶಿಸಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಸ್ವಚ್ಛ ಸರ್ವೇಕ್ಷಣೆಯ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಸ್ವಚ್ಛ ನಗರಿ ಪಟ್ಟ ದೊರಕಿಸುವುದಕ್ಕಾಗಿ ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯ ನಿಯಮಕ್ಕನುಸಾರವಾಗಿ ಮೈಸೂರಿನ ವಿವಿಧೆಡೆ 15 ಇ-ಟಾಯ್ಲೆಟ್ ನಿರ್ಮಿಸಲಾಗಿತ್ತು. ಕಳೆದು ಒಂದು ವರ್ಷದಿಂದಲೂ ಈ ಹಿಂದೆ ಅಳವಡಿಸಿರುವ ಇ-ಟಾಯ್ಲೆಟ್‍ಗಳನ್ನು ಸಾರ್ವಜನಿಕರು, ಪ್ರವಾಸಿರು ಹಾಗೂ ಸ್ಥಳೀಯರು ಬಳಸಿಕೊಳ್ಳುತ್ತಿದ್ದಾರೆ. ಪ್ರತೀ ಶೌಚಾಲಯವನ್ನು ದಿನವೊಂದಕ್ಕೆ ಸರಾಸರಿ 60ರಿಂದ 70 ಮಂದಿ ಬಳಸುತ್ತಿರುವುದರಿಂದ ನಗರಪಾಲಿಕೆ ಇನ್ನಿತರ ಸ್ಥಳಗಳಲ್ಲಿಯೂ ಇ-ಶೌಚಾಲಯಗಳನ್ನು ಅಳವಡಿಸುವುದಕ್ಕೆ ಕ್ರಮ ಕೈಗೊಂಡಿದೆ.

ಮುಂಬರುವ ಸಾಲಿನಲ್ಲಿ ನಡೆಯಲಿರುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರಿಗೆ ಹೆಚ್ಚು ಅಂಕ ಬರುವ ದೃಷ್ಠಿಯೊಂದಿಗೆ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇ-ಟಾಯ್ಲೆಟ್‍ಗಳ ಮೊರೆ ಹೋಗಲಾಗುತ್ತಿದೆ. ಈಗಾಗಲೇ ದೇವರಾಜ ಅರಸ್ ರಸ್ತೆಯಲ್ಲಿರುವ 3, ಅಪೊಲೋ ಆಸ್ಪತ್ರೆ ಬಳಿ 2, ಶ್ಯಾಮ್ ಸ್ಟುಡಿಯೊ ಬಳಿ 2, ಸಂಗಮ್ ಚಿತ್ರ ಮಂದಿರ, ಮಕ್ಕಾಜಿ ಚೌಕ, ಮೃಗಾಲಯ, ಚಾಮುಂಡಿಪುರಂ ಸೇರಿದಂತೆ ಇನ್ನಿತರೆಡೆಗಳಲ್ಲಿ ತಲಾ ಒಂದೊಂದು ಸೇರಿದಂತೆ ಒಟ್ಟು 15 ಇ-ಟಾಯ್ಲೆಟ್‍ಗಳಿದ್ದು, ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಬಹು ಉಪಯುಕ್ತವಾಗಿದೆ.

ಕಾರ್ಯ ನಿರ್ವಹಣೆ: ಇ-ಟಾಯ್ಲೆಟ್‍ಗಳು ಹೊಸ ಟೆಕ್ನಾಲಜಿಯಿಂದ ಕೂಡಿದ್ದು, ಸ್ವಯಂ ಸ್ವಚ್ಛತೆ ಮಾಡಿಕೊಳ್ಳಲಿದೆ. ಒಂದು ರೂ, ಎರಡು, ಐದು ಅಥವಾ 10 ರೂ ನಾಣ್ಯವನ್ನು ಹಾಕಿ ಈ ಶೌಚಾಲಯವನ್ನು ಬಳಸಬಹುದಾಗಿದೆ. ಚಿಲ್ಲರೆಗಾಗಿ ಅಥವಾ ನಿರ್ಧಿಷ್ಟ ಮೌಲ್ಯದ ನಾಣ್ಯ ದೊರೆಯದೆ ಪರದಾಡುವುದನ್ನು ತಪ್ಪಿಸುವುದಕ್ಕಾಗಿ ಒಂದು, ಎರಡು, ಐದು ಅಥವಾ 10 ರೂ ನಾಣ್ಯಗಳಲ್ಲಿ ಯಾವುದಾದರೂ ಒಂದನ್ನು ಹಾಕಿದರೆ ಶೌಚಾಲಯದ ಬಾಗಿಲು ತೆಗೆಯುತ್ತದೆ. ಶೌಚಾಲಯದ ಒಳಗೆ ಯಾರಾದರು ಇದ್ದ ವೇಳೆ ಮತ್ತೊಬ್ಬರು ಎಷ್ಟೇ ನಾಣ್ಯ ಹಾಕಿದರು ಬಾಗಿಲು ತೆಗೆಯುವುದಿಲ್ಲ. ಸೆನ್ಸಾರ್ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಒಬ್ಬರು ಒಳಗೆ ಇದ್ದಾಗ ಮತ್ತೊಬ್ಬರು ಪ್ರವೇಶಿಸುವುದಕ್ಕೆ ಬಾಗಿಲು ಬಂದ್ ಆಗಿರುತ್ತದೆ. ಇದರೊಂದಿಗೆ ಸಾರ್ವಜನಿಕರು ಶೌಚಾಲಯ ಬಳಸಿದ ನಂತರ ತಾನಾಗಿಯೇ ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಿರುವುದರಿಂದ ಇ-ಟಾಯ್ಲೆಟ್ ಬಳಕೆಗೆ ಯಾವುದೆ ಮುಜುಗರವಿಲ್ಲದೆ ಜನರು ಮುಂದಾಗುತ್ತಿದ್ದಾರೆ.

ಕಳೆದ ವರ್ಷ ಅಳವಡಿಸಿದ್ದ 15 ಇ-ಟಾಯ್ಲೆಟ್‍ಗಳನ್ನು ಪ್ರತಿದಿನ ಸಾರ್ವಜನಿಕರು ಮಾತ್ರವಲ್ಲದೆ ಪ್ರವಾಸಿಗರು ಬಳಸುತ್ತಿದ್ದಾರೆ. ಇದರಿಂದ ಇನ್ನಷ್ಟು ಇ-ಟಾಯ್ಲೆಟ್‍ಗಳ ಬೇಡಿಕೆಯಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧೆಡೆ ಹೊಸದಾಗಿ 12 ಇ-ಟಾಯ್ಲೆಟ್‍ಗಳನ್ನು ಅಳವಡಿಸಲಾಗುತ್ತಿದೆ. ಸ್ಥಳಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಸ್ವಚ್ಛತೆಗೂ ಅಗತ್ಯ ಕ್ರಮ ಕೈಗೊಂಡಿರುವುದರಿಂದ ಇ-ಶೌಚಾಲಯಗಳ ಬಳಕೆಗೆ ಜನರು ಯಾವುದೆ ಮುಜುಗರವಿಲ್ಲದೆ ಬಳಸುತ್ತಿದ್ದಾರೆ. -ಕೆಂಪೇಗೌಡ, ಜೆಇ

ಒಂದು ಇ-ಟಾಯ್ಲೆಟ್‍ಗೆ ಏಳು ಸಾವಿರ ರೂ ವೆಚ್ಚವಾಗಲಿದೆ. 3×6 ಅಳತೆಯಲ್ಲಿ ನಿರ್ಮಿಸಿರುವ ಈ ಶೌಚಾಲಯವನ್ನು ಆಯಕಟ್ಟಿನ ಸ್ಥಳದಲ್ಲಿ ಪಾದಚಾರಿ ಮಾರ್ಗದಲ್ಲಿ ಅಳವಡಿಸಲಾಗುತ್ತಿದೆ. ಈಗಾಗಲೇ ನಗರ ಪಾಲಿಕೆ ಹಾಗೂ ಒಳಚರಂಡಿ ವಿಭಾಗದ ವತಿಯಿಂದ ಸರ್ವೆ ನಡೆಸಲಾಗಿದ್ದು, ಯಾವ ಯಾವ ಸ್ಥಳದಲ್ಲಿ ಅಳವಡಿಸಬೇಕೆಂದು ನಿರ್ಧರಿಸಲಾಗುತ್ತದೆ. ಮುಂದಿನ ಒಂದು ವಾರದಲ್ಲಿ ಹೊಸ ಇ-ಟಾಯ್ಲೆಟ್‍ಗಳ ಸಿದ್ದವಾಗಲಿದೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಎಲ್ಲಾ 12 ಇ-ಟಾಯ್ಲೆಟ್‍ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

 

Translate »