ಪ್ರತಿ ರಂಜಾನ್‍ಗೆ 20,000 ಕೆಜಿಯಷ್ಟು ಖರ್ಜೂರ ಮಾರಾಟ!
ಮೈಸೂರು

ಪ್ರತಿ ರಂಜಾನ್‍ಗೆ 20,000 ಕೆಜಿಯಷ್ಟು ಖರ್ಜೂರ ಮಾರಾಟ!

June 4, 2018
  • ಮೈಸೂರಲ್ಲಿ 50ಕ್ಕೂ ಹೆಚ್ಚು ವಿವಿಧ ಜಾತಿಯ ಸ್ವಾಧಿಷ್ಟಭರಿತ ಖರ್ಜೂರ ಲಭ್ಯ

ಮೈಸೂರು: ಮೈಸೂರಿನಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಎಲ್ಲಾ ಜಾತಿ ಹಾಗೂ ಪ್ರಭೇದದ ಒಟ್ಟಾರೆ 20,000 ಕೆಜಿಗೂ ಹೆಚ್ಚಿನ ಖರ್ಜೂರ ಮಾರಾಟವಾಗಲಿದೆಯಂತೆ. ಅಂದರೆ ಪ್ರತಿ ಕೆಜಿಗೆ ಸರಾಸರಿ 500 ರೂ. ಇಟ್ಟುಕೊಂಡರೂ ಹಲವು ಕೋಟಿಗಳಷ್ಟು ವಹಿವಾಟು ನಡೆಯುತ್ತದೆ. ಮುಸ್ಲೀಮರ ಪವಿತ್ರ ರಂಜಾನ್ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ರಾಶಿ ರಾಶಿ ಖರ್ಜೂರ ಕಾಣ ಸಿಗುತ್ತದೆ. ಹಬ್ಬದ ಮುನ್ನ ಒಂದು ತಿಂಗಳ ಉಪವಾಸ ವ್ರತ ಕೈಗೊಳ್ಳುವ ಮುಸ್ಲೀಮರು ಪ್ರತಿದಿನ ಸಂಜೆ ಸೂರ್ಯಾಸ್ತದ ಬಳಿಕ ಆ ದಿನದ ಉಪವಾಸ ವ್ರತ ಕೈಬಿಡುವಾಗ ಮೊದಲಿಗೆ ಖರ್ಜೂರ ತಿಂದು ಬಳಿಕ ಊಟ ಸೇವಿಸುವುದು ಧಾರ್ಮಿಕವಾಗಿ ನಡೆದು ಬಂದಿರುವ ಸಂಪ್ರದಾಯ.

ಈ ಹಿನ್ನೆಲೆಯಲ್ಲಿ ರಂಜಾನ್ ಉಪವಾಸ ವ್ರತದ ತಿಂಗಳಲ್ಲಿ ಖರ್ಜೂರಕ್ಕೆ ಎಲ್ಲಿಲ್ಲದ ಬೇಡಿಕೆ. ಖರ್ಜೂರಕ್ಕೆ ಧಾರ್ಮಿಕವಾಗಿಯೂ ಮೌಲ್ಯ ನೀಡಲಾಗಿದೆ. ಮದೀನಾದಲ್ಲಿ ಮುಸ್ಲಿಂ ಧರ್ಮಗುರುಗಳು ಖರ್ಜೂರದ ಗಿಡವನ್ನು ನೆಟ್ಟು ಬೆಳೆಸಿದರೆಂಬ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಖರ್ಜೂರದ ಹಣ್ಣು ಉಪವಾಸ ವ್ರತ ಸಂದರ್ಭದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ.

ಸೌದಿ ಅರಬ್, ಇರಾನ್, ಇರಾಕ್ ಇನ್ನಿತರ ಮುಸ್ಲಿಂ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬೆಳೆಯುವ ಖರ್ಜೂರವನ್ನು ಇತರೆ ದೇಶಗಳು ಆಮದು ಮಾಡಿಕೊಳ್ಳುತ್ತವೆ. ಅದೇ ರೀತಿ ಭಾರತದ ಮುಂಬೈ, ತಮಿಳುನಾಡು ಇನ್ನಿತರ ಕಡೆಗಳಗೂ ರವಾನೆಯಾಗಿ ಅಲ್ಲಿಂದ ಇತರೆ ಪ್ರದೇಶಗಳಿಗೆ ಸಗಟು ವ್ಯಾಪಾರಿಗಳು ಮಾರಾಟಕ್ಕೆ ತರುತ್ತಾರೆ. ಅಂತೆಯೇ ಇದೀಗ ಮೈಸೂರಿನಲ್ಲಿಯೂ ಯಥೇಚ್ಛವಾಗಿ ಖರ್ಜೂರದ ಹಣ್ಣುಗಳು ಮೈಸೂರಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಗ್ರಾಹಕರನ್ನು ಸೆಳೆಯುತ್ತಿರುವ ವಿವಿಧ ಜಾತಿಯ ಖರ್ಜೂರದ ಹಣ್ಣು.

ಮೈಸೂರಿನ ಸಂತೇಪೇಟೆ, ದೇವರಾಜ ಅರಸು ರಸ್ತೆ, ಮಂಡಿ ಮೊಹಲ್ಲಾ, ದೇವರಾಜ ಮಾರುಕಟ್ಟೆ, ಚಿಕ್ಕ ಮಾರುಕಟ್ಟೆ ಸೇರಿದಂತೆ ನಾನಾ ಕಡೆಗಳಲ್ಲಿ ನಾನಾ ಜಾತಿಯ ಖರ್ಜೂರದ ಹಣ್ಣುಗಳು ಮಾರಾಟವಾಗುತ್ತಿವೆ. ಪವಿತ್ರ ರಂಜಾನ್ ಹಬ್ಬದ ಎರಡು ದಿನ ಮೊದಲು ಕೂಡ ಖರ್ಜೂರದ ವ್ಯಾಪಾರ ಬಲು ಜೋರಿರುತ್ತದೆ. ಖರ್ಜೂರದ ಅಂಗಡಿಗಳು ಜನಜಂಗುಳಿಯಿಂದ ತುಂಬಿರುತ್ತವೆ.

ಮೈಸೂರಿನ ಸಂತೆಪೇಟೆ ಬಳಿಯ ಖರ್ಜೂರದ ಹಣ್ಣುಗಳ ಸಗಟು ವ್ಯಾಪಾರಿ ಪದ್ಮಾವತಿ ಟ್ರೇಡಿಂಗ್ ಕಂಪನಿಯ ಶ್ರೀಪಾಲ್ ಛೋಪ್ರಾ ಮತ್ತು ಶ್ರೀಕಾಂತ್ ಛೋಪ್ರಾ ಅವರ ಪ್ರಕಾರ, ನಮ್ಮಲ್ಲಿ ಈ ಬಾರಿ ಸಾಕಷ್ಟು ಖರ್ಜೂರದ ದಾಸ್ತಾನಿದೆ. ರಂಜಾನ್ ಮಾಸವಾಗಿರುವುದರಿಂದ ಹೆಚ್ಚು ವ್ಯಾಪಾರದ ನಿರೀಕ್ಷೆಯಲ್ಲಿ ದಾಸ್ತಾನು ಮಾಡಿದ್ದು, ಹಂತ ಹಂತವಾಗಿ ವ್ಯಾಪಾರದಲ್ಲಿ ಏರಿಕೆ ಕಾಣುತ್ತಿದ್ದೇವೆ. ಮಾಮೂಲಿ ದಿನಗಳಿಗಿಂತ ರಂಜಾನ್ ಮಾಸದಲ್ಲಿ ಖರ್ಜೂರದ ಹಣ್ಣುಗಳ ವ್ಯಾಪಾರ ಶೇ.40ರಿಂದ 50ರಷ್ಟು ಹೆಚ್ಚಾಗಿರುತ್ತದೆ ಎನ್ನುತ್ತಾರೆ.

kimia, azuva, armony, rehana-zobiel, honey, almond dates ಸೇರಿದಂತೆ 50ರಿಂದ 60 ವಿವಿಧ ಜಾತಿಯ, ಪ್ರಭೇದದ ಖರ್ಜೂರಗಳು ಮೈಸೂರಿಗೆ ಲಗ್ಗೆ ಇಟ್ಟಿವೆ. ಅದರಲ್ಲೂ kimia, azuva ಜಾತಿಯ ಖರ್ಜೂರಕ್ಕೆ ಬೇಡಿಕೆ ಜಾಸ್ತಿ. ಏಕೆಂದರೆ ಇದು ರುಚಿಯಲ್ಲೂ ಅಷ್ಟೇ ಹೆಸರುವಾಸಿ ಎನ್ನುತ್ತಾರೆ ಖರ್ಜೂರದ ವ್ಯಾಪಾರಿ ಮಹಮದ್ ಜಫ್ರುಲ್ಲಾ.

ಬಹುತೇಕ ಖರ್ಜೂರಗಳು ಹೊರ ದೇಶಗಳಿಂದಲೇ ಭಾರತಕ್ಕೆ ಆಮದಾಗುತ್ತವೆ. ಅದರಲ್ಲೂ ಅಝುವಾ ಖರ್ಜೂರಕ್ಕೆ ಭಾರಿ ಬೇಡಿಕೆ. ಮುಸ್ಲಿಂ ಧರ್ಮಗುರು ಅಝುವಾ ಖರ್ಜೂರವನ್ನು ನೆಟ್ಟು ಬೆಳೆಸಿದ ಖರ್ಜೂರ. ಹೀಗಾಗಿ ಇದಕ್ಕೆ ಹೆಚ್ಚು ಬೇಡಿಕೆ. ಈ ಖರ್ಜೂರದ ಬೀಜವೂ ಹೃದಯ ಸಂಬಂಧಿ ಕಾಯಿಲೆಗಳಿಗೂ ಔಷಧಿಯಾಗಿ ಬಳಸಲ್ಪಡುತ್ತದೆ. – ಸಲ್ಮಾನ್ ಖಾನ್, ಖರ್ಜೂರದ ಸಗಟು ವ್ಯಾಪಾರಿ.

ಖರ್ಜೂರದ ದರ ಆಯಾ ಜಾತಿ, ಪ್ರಭೇದಕ್ಕೆ ತಕ್ಕಂತೆ ಪ್ರತಿ ಕೆಜಿಗೆ ಕನಿಷ್ಟ ರೂ.180ರಿಂದ ಗರಿಷ್ಟ ರೂ.1800 ವರೆಗೂ , ಇನ್ನೂ ಅತ್ಯುತ್ತಮ ಜಾತಿಯ ಖರ್ಜೂರವು ಇದೆ. ಇನ್ನೂ ಕನಿಷ್ಟ ಎಂದರೆ ಕೆಜಿಗೆ ರೂ.100ರ ಖರ್ಜೂರವು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ ಸಗಟು ವ್ಯಾಪಾರಿ ಶ್ರೀಪಾಲ್ ಛೋಪ್ರಾ ಅವರ ಪ್ರಕಾರ, ನಾವು ಗ್ರಾಹಕರಿಗೆ ಉತ್ತಮ ಗುಣಮಟ್ಟದ ರುಚಿಯಾದ ಖರ್ಜೂರದ ಹಣ್ಣುಗಳನ್ನೇ ಮಾರಾಟಕ್ಕಿಟ್ಟಿದ್ದೇವೆ. ಈ ಕಾರಣಕ್ಕಾಗಿ ಗ್ರಾಹಕರು ನಮ್ಮ ಬಳಿಯೆ ಹೆಚ್ಚಾಗಿ ಬರುತ್ತಾರೆ.
ರಂಜಾನ್ ಹಬ್ಬದ ಸಂದರ್ಭದಲ್ಲಿ ಸಿಹಿ ತಯಾರಿಸಲು ಅಥವಾ ಅಡುಗೆಗೆ ಖರ್ಜೂರವನ್ನು ಬಳಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಖರ್ಜೂರದ ಹಣ ್ಣಗೆ ಭಾರಿ ಬೇಡಿಕೆ ಬರುವುದರಿಂದ ಬೆಲೆಯಲ್ಲಿಯೂ ಸ್ವಲ್ಪ ಹೆಚ್ಚಾಗಲಿದೆ. ಮೈಸೂರಿನ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳಲ್ಲಿಯೂ ಖರ್ಜೂರದ ಖರೀದಿ ಜೋರಾಗಿಯೆ ನಡೆಯುತ್ತದೆ. ಈ ಕಾರಣಕ್ಕಾಗಿ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳಲ್ಲಿ ತಿಂಗಳ ಮೊದಲೇ ನಾನಾ ಜಾತಿಯ ಖರ್ಜೂರದ ಹಣ್ಣುಗಳ ದಾಸ್ತಾನು ಮಾಡಿಕೊಂಡಿರುತ್ತೇವೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಪ್ರತಿಷ್ಠಿತ ಮಾಲ್‍ನ ಮುಖ್ಯಸ್ಥ.

ಮೈಸೂರಿನ ಮಂಡಿಮೊಹಲ್ಲಾದ ಮುಗಲಿಯಾ ಜ್ಯೂಸ್ ಸೆಂಟರ್‍ನಲ್ಲಿ ಖರ್ಜೂರದ ಹಣ್ಣುಗಳ ಮಾರಾಟ.

ಪವಿತ್ರ ರಂಜಾನ್ ಉಪವಾಸ ಆರಂಭಗೊಳ್ಳುತ್ತಿದ್ದಂತೆ ಉದಯಗಿರಿ, ರಾಜೀವ್‍ನಗರ, ಶಾಂತಿನಗರ, ಮಂಡಿ ಮೊಹಲ್ಲಾ, ಅಕ್ಬರ್ ರಸ್ತೆ ಇನ್ನಿತರೆ ಕಡೆಗಳಲ್ಲಿ ಬೀದಿ ಬದಿಗಳಲ್ಲಿಯೂ ತಳ್ಳು ಗಾಡಿಗಳಲ್ಲಿ ಖರ್ಜೂರದ ಹಣ್ಣುಗಳು ಮಾರಾಟ ನಡೆಯುತ್ತಿದೆ.

ಹೆಚ್ಚು ಪ್ರೋಟೀನ್ ಹೊಂದಿರುವ ಖರ್ಜೂರ ಮನುಷ್ಯನಿಗೆ ದೈಹಿಕ ಶಕ್ತಿ ನೀಡುತ್ತದೆ. ಒಂದರಿಂದ ನಾಲ್ಕು ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪದೊಂದಿಗೆ ಸೇವಿಸಿದರೆ ಯಾವುದೆ ರೋಗ ಹತ್ತಿರವೂ ಸುಳಿಯುವುದಿಲ್ಲ ಎಂಬುದಾಗಿ ಆಯುರ್ವೇದದಲ್ಲಿಯೂ ತಿಳಿಸಲಾಗಿದೆ.

ಉಪವಾಸದ ಸಂದರ್ಭದಲ್ಲಿ ನಾವು ಪೌಷ್ಟಿಕಾಂಶಯುಕ್ತ ಆಹಾರಕ್ಕಾಗಿ ಖರ್ಜೂರವನ್ನು ಬಳಸುತ್ತೇವೆ. ಬಿ1, ಬಿ3, ಬಿ4 ನಂತಹ ಜೀವಸತ್ವಗಳ ಜೊತೆಗೆ ಕಬ್ಬಿಣ, ಫೈಬರ್ ಸಮೃದ್ಧವಾಗಿವೆ ಇದರ ನಿರಂತರ ಸೇವನೆಯಿಂದ ಕೊಲೆಸ್ಟ್ರಾಲ್ ತಗ್ಗಿಸಬಹುದು. ಅಲ್ಲದೆ ಸ್ಟ್ರೋಕ್(ಪಾಶ್ರ್ವವಾಯು)ವನ್ನು ತಡೆಗಟ್ಟುವ ಶಕ್ತಿ ಈ ಹಣ್ಣಿಗಿದೆ. – ಶಬ್ಬೀರ್ ಪಾಷಾ, ಗ್ರಾಹಕ, ಅಕ್ಬರ್ ರಸ್ತೆ.

Translate »