ವಿಕಲಚೇತನರು ಸಂಘಟಿತರಾದಾಗ ಸಮಾನತೆ ಸಾಧ್ಯ
ಮಂಡ್ಯ

ವಿಕಲಚೇತನರು ಸಂಘಟಿತರಾದಾಗ ಸಮಾನತೆ ಸಾಧ್ಯ

October 24, 2018

ಭಾರತೀನಗರ:  ‘ವಿಕಲಚೇತನರು ಸಂಘಟಿತರಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸುವುದರ ಜೊತೆಗೆ ಗೌರವ ಯುತ ಜೀವನ ನಡೆಸಲು ಸಾಧ್ಯ’ ಎಂದು ವಿಕಲಚೇತನರ ಪುನರ್ವಸತಿ ಯೋಜನೆಯ ಸಂಯೋಜಕಿ ಕೆ.ಬಿ. ಜಯಂತಿ ಹೇಳಿದರು.
ಇಲ್ಲಿಗೆ ಸಮೀಪದ ಬೊಪ್ಪಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೀರೇಶ್ವರ ವಿಕಲಚೇತನರ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಸಮಾರಂಭ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಕಲಚೇತನರು ಸ್ವಸಹಾಯ ಸಂಘದ ಮುಖಾಂತರ ಆರೋಗ್ಯ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಕಷ್ಟಗಳಿಂದ ಹೊರಬಂದು ಉತ್ತಮ ಜೀವನ ನಿರ್ವ ಹಣೆ ಮತ್ತು ಸಮಾನತೆಯನ್ನು ಸಾಧಿಸುವಲ್ಲಿ ಸ್ವಸಹಾಯ ಸಂಘಗಳ ಪಾತ್ರ ಬಹಳ ಪ್ರಮುಖ ಎಂದರು. ಗ್ರಾಮದ ಮುಖಂಡ ಸಂತೋಷ್ ಮಾತನಾಡಿ, ವಿಕಲಚೇತನರು ಸ್ವಸಹಾಯ ಸಂಘದ ವಾರ್ಷಿಕೋತ್ಸವ ಆಚರಿಸುತ್ತಿರುವ ಮೂಲಕ ಇತರೆ ಸ್ವಸಹಾಯ ಸಂಘಗಳಿಗೆ ಮಾದರಿಯಾಗಿದೆ. ಸ್ವಸಹಾಯ ಸಂಘ ಗಳಿಂದ ವಿಕಲಚೇತನರು ಆರ್ಥಿಕ ಸ್ವಾವ ಲಂಬನೆ ಸಾಧಿಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಇತರರಂತೆ ಜೀವಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮೆಣಸಗೆರೆ ಗ್ರಾಮ ಪಂಚಾಯಿತಿ ಉಪಾ ಧ್ಯಕ್ಷೆ ಸುಶೀಲಾ ಮಾತನಾಡಿ, ವಿಕಲಚೇತನ ರಿಗೆ ಅನುಕಂಪ ತೋರದೆ ಪ್ರೋತ್ಸಾಹ ನೀಡಬೇಕು. ವಿಕಲಚೇತನರು ಸಹ ತಮ್ಮ ಕೈಯಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಕೂರದೆ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ರಮಣ ಮಹರ್ಷಿ ಅಂಧರ ಪರಿಷತ್ತಿನ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಕಾರ್ಯಕರ್ತೆ ಸೌಭಾಗ್ಯಮ್ಮ ಸ್ವಸಹಾಯ ಸಂಘದ ವರದಿ ಓದಿದರು. ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತರು, ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

Translate »