ಕೂಲಿಕಾರರಿಂದ ತಾಪಂ ಕಚೇರಿ ಮುತ್ತಿಗೆ, ಬೇಡಿಕೆ ಈಡೇರಿಸಲು ನ.11ರಂದು ಸಭೆ
ಮದ್ದೂರು: ನರೇಗಾ ಯೋಜನೆ ಯಡಿ ಕೆಲಸ ಸಮರ್ಪಕವಾಗಿ ಜಾರಿ ಮಾಡಬೇಕು. ಮಂಜೂರಾಗಿರುವ ನಿರುದ್ಯೋಗ ಭತ್ಯೆ ನೀಡಬೇಕು ಎಂಬುದು ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ ನಡೆಯಿತು.
ತಾಲೂಕು ಪಂಚಾಯಿತಿ ಕಚೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗುತ್ತ ಕಚೇರಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಪ್ಪಮಾದು ಮಾತನಾಡಿ, ಮರಳಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀಳಘಟ್ಟ ಗ್ರಾಮದ ಕೂಲಿಕಾರರಿಗೆ ನರೇಗಾ ಕೆಲಸದಲ್ಲಿ ಕೊಳಚೆ ಕಾಮಗಾರಿ ನೀಡಿರುವ ಪಿಡಿಒ ಮೇಲೆ ಕಾನೂನು ಕ್ರಮ ಜರುಗಿಸ ಬೇಕು. ತಾಲೂಕಿನಾದ್ಯಂತ ಉದ್ಯೋಗ ಖಾತ್ರಿ ಕೆಲಸದಲ್ಲಿ ಗುತ್ತಿಗೆದಾರರು ಯಂತ್ರ ಬಳಸುವುದನ್ನು ತಡೆಗಟ್ಟಿ, ನಡೆದಿರುವ ಎಲ್ಲಾ ಕಾಮಗಾರಿಗಳನ್ನು ಸಂಘದ ಮುಖಂಡತ್ವ ದಲ್ಲಿ ಜಂಟಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಹಿಂದಿನ ಸಿಇಒ ಅವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯ ತೀರ್ಮಾನದಂತೆ 60ಮಂದಿ ಕಾಯಕ ಬಂಧುಗಳಿಗೆ ತರಬೇತಿ ಗುರುತಿನ ಚೀಟಿ ನೀಡಬೇಕು. 2015-17ನೇ ಸಾಲಿನ 3.60 ಲಕ್ಷ ಪೆÇ್ರೀತ್ಸಾಹ ಧನ ತಕ್ಷಣ ಬಿಡುಗಡೆಯಾಗಬೇಕು ಎಂದು ಆಗ್ರಹಿಸಿದರು. ಬೆಸಗರಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕೂಲಿಕಾರರಿಗೆ ಆದೇಶವಾ ಗಿರುವ ನಿರುದ್ಯೋಗ ಭತ್ಯೆಯನ್ನು ಸ್ಥಳದಲ್ಲೇ ನೀಡಬೇಕು. ಅರ್ಜಿ ಸಲ್ಲಿಸಿರುವ ಎಲ್ಲ ಕೂಲಿಕಾರರಿಗೆ ತಕ್ಷಣ ಕೆಲಸ ನೀಡಬೇಕು. ಅರ್ಜಿ ಸಲ್ಲಿಸಿ 15 ದಿನ ಕಳೆದಿದ್ದರೆ ಅವರಿಗೆ ನಿರುದ್ಯೋಗ ಭತ್ಯೆ ಮಂಜೂರು ಮಾಡಲು ಕ್ರಮವಹಿಸಬೇಕು. ಈಗಾಗಲೇ ಅರ್ಜಿ ಸಲ್ಲಿಸಿರುವ ಕೆ.ಶೆಟ್ಟಿಹಳ್ಳಿ, ಮರಳಿಗ ಗ್ರಾಮ ಪಂಚಾಯಿತಿ ಕೂಲಿಕಾರರಿಗೆ ನಿರು ದ್ಯೋಗ ಭತ್ಯೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರು, ನೆರಳು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಒದಗಿಸಬೇಕು. ಕರಡಗೆರೆ ಗ್ರಾಮದ ನಿರಾಶ್ರಿತರಿಗೆ ಮೂಲ ಸೌಲಭ್ಯ ಒದಗಿಸಿ ಪುನರ್ವಸತಿ ಕಲ್ಪಿಸಬೇಕು. ಪಣ್ಣೇದೊಡ್ಡಿ ಗ್ರಾಮದಲ್ಲಿ ತಾಪಂ ಸದಸ್ಯ ವೆಂಕಟೇಶ್ ಗುತ್ತಿಗೆ ಮೂಲಕ ನರೇಗಾ ಕೆಲಸ ಮಾಡಿಸುವಾಗ ಕೂಲಿಕಾರರೊಬ್ಬರ ಮನೆಯ ಗೋಡೆ ಕುಸಿದು ಬಿದ್ದಿದೆ. ಅವರಿಗೆ ಪರಿಹಾರ ನೀಡಬೇಕು. ಅಧಿಕಾರ ದುರ್ಬಳಕೆ ಮಾಡಿಕೊಂಡು ಗುತ್ತಿಗೆ ಮೂಲಕ ನರೇಗಾ ಕೆಲಸ ಮಾಡಿ ನಿಜವಾದ ಕೂಲಿಕಾರರಿಗೆ ವಂಚಿಸುತ್ತಿರುವ ತಾಪಂ ಸದಸ್ಯ ವೆಂಕಟೇಶ್ ಅವರ ಸದಸ್ಯತ್ವ ರದ್ದುಗೊಳಿಸಬೇಕು. ಕರ್ತವ್ಯ ಲೋಪ ಮಾಡಿರುವ ಪಿಡಿಓ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಓ ಮಣಿಕಂಠ ಮಾತನಾಡಿ, ನಾಳೆಯಿಂದಲೇ ನರೇಗಾದಡಿ ಕೆಲಸ ನೀಡಲಾಗುವುದು. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ನ. 11ರಂದು ಸಭೆ ಕರೆದು ಚರ್ಚಿಸಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿ ಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ತಾಲೂಕು ಅಧ್ಯಕ್ಷ ಚಂದ್ರು, ಉಪಾಧ್ಯಕ್ಷರಾದ ವಿಷಕಂಠೇಗೌಡ, ಜಯಮ್ಮ, ಮುಖಂಡರಾದ ಶಾಂತಮ್ಮ, ಮಂಜುಳಾ, ಚಿಕ್ಕತಾಯಮ್ಮ, ನಾಗರಾಜು, ಶಿವಮಲ್ಲು, ನಾಗಮ್ಮ, ಗೌರಮ್ಮ ಪಾಲ್ಗೊಂಡಿದ್ದರು .