ಸರ್ಕಾರ ಬಿದ್ದರೂ ಜೆಡಿಎಸ್ ಬಲಿ ಕೊಡಲ್ಲ
ಮೈಸೂರು

ಸರ್ಕಾರ ಬಿದ್ದರೂ ಜೆಡಿಎಸ್ ಬಲಿ ಕೊಡಲ್ಲ

January 12, 2019

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರ ವರ್ತನೆಯಿಂದ ತೀವ್ರ ಬೇಸರಗೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈತ್ರಿ ಸರ್ಕಾರ ಬಿದ್ದರೂ ಜೆಡಿಎಸ್ ಬಲಿ ಕೊಡಲು ಸಿದ್ಧ ವಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿಗಳ ನೇಮಕಾತಿ ನಂತರ ಕಾಂಗ್ರೆಸ್ ಶಾಸಕರು ನಡೆದುಕೊಳ್ಳುತ್ತಿರುವ ರೀತಿ, ಬಹಿರಂಗ ಹೇಳಿಕೆಗಳು ಮುಖ್ಯಮಂತ್ರಿ ಅವರ ಮನಸ್ಸನ್ನು ಘಾಸಿಗೊಳಿಸಿವೆ. ಜೊತೆಗೆ ಆಡಳಿತದ ಎಲ್ಲಾ ವಿಚಾರಗಳಲ್ಲೂ ಪರೋಕ್ಷ ವಾಗಿ ಸಿದ್ದರಾಮಯ್ಯ ಮೂಗು ತೂರಿಸುತ್ತಿರು ವುದು ಅಸಹನೀಯ ಸ್ಥಿತಿ ನಿರ್ಮಿಸಿದೆ. ಒಂದೆಡೆ ಅವರ ಬೆಂಬಲಿಗ ಶಾಸಕರು ಬಹಿರಂಗ ಹೇಳಿಕೆಯಿಂದ ಮುಜುಗರ ಉಂಟು ಮಾಡುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಆಪರೇಷನ್ ಕಮಲ ಎಂಬ ಅಪ ಪ್ರಚಾರದಿಂದ ನಮ್ಮ ಅಭಿವೃದ್ಧಿ ಕಾರ್ಯ ಗಳು ಜನರ ಮನಸ್ಸನ್ನು ಮುಟ್ಟದಂತಾಗಿದೆ.

ಕಳೆದ ಏಳು ತಿಂಗಳಲ್ಲಿ ಬಡವರು ಮತ್ತು ರೈತ ಸಮುದಾಯಕ್ಕೆ ಹಲವು ಕಾರ್ಯ ಕ್ರಮ ಅನುಷ್ಠಾನಗೊಳಿಸಲಾಗಿದೆ, ಅಲ್ಲದೆ ಬೆಂಗಳೂರು ಅಭಿವೃದ್ಧಿಗೂ ಹೆಚ್ಚು ಒತ್ತು ಕೊಟ್ಟಿದ್ದೇವೆ. ದಿನ ನಿತ್ಯ ಇವರ ಜಂಜಾಟ ದಿಂದ ಕೃಷಿ ಸಾಲ ಮನ್ನಾ, ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿಕೆ, ವೃದ್ಧರು ಮತ್ತು ಇತರರಿಗೆ ಪಿಂಚಣಿ ಹಾಗೂ ವೇತನ ಹೆಚ್ಚಳ ಕಾರ್ಯಕ್ರಮಗಳ ಸಾಧನೆ ಜನರ ಮನಸ್ಸಿಗೆ ತಲುಪದಂತಾಗಿದೆ. ಕೃಷಿ ಮತ್ತು ನೀರಾವರಿ ಯೋಜನೆಗಳ ವಿಚಾರದಲ್ಲಿ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳಲ್ಲಿ ಹಲವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದನ್ನು ಕಾಂಗ್ರೆಸ್‍ನ ಕೆಲವರು ಸಹಿಸಿಕೊಳ್ಳುತ್ತಿಲ್ಲ, ನಾವು ಎಷ್ಟೇ ಅಭಿವೃದ್ಧಿ ಕಾರ್ಯ ಮಾಡಿದರೂ ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಬದಲು ಜಗಳವೇ ಸುದ್ದಿಯಾಗುತ್ತಿದೆ. ನಮ್ಮ ಪಕ್ಷದ ಶಾಸಕರಿಗಿಂತ ಕಾಂಗ್ರೆಸ್ ಶಾಸಕರನ್ನು ತೃಪ್ತಿ ಪಡಿಸುವ ಕೆಲಸವೇ ಆಗಿದೆ. ಅವರೇ ಏನಾದರೂ ಮಾಡಿಕೊಳ್ಳಲಿ.

ಸಾರ್ವಜನಿಕವಾಗಿ ಸಿದ್ದರಾಮಯ್ಯ ಬೆಂಬಲಿಗರು ಮುಜುಗರ ಉಂಟು ಮಾಡುವ ಹೇಳಿಕೆಗಳನ್ನು ನಿಲ್ಲಿಸದಿದ್ದರೆ ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸರ್ಕಾರದ ಪ್ರಮುಖ ಹುದ್ದೆಗಳಿಗೆ ಒಳ್ಳೆ ವ್ಯಕ್ತಿಗಳನ್ನು ತರಬೇಕೆಂದು ಮುಂದಾದಾಗ, ಈ ನಾಯಕರು ಅಡ್ಡಿ ಪಡಿಸುತ್ತಿದ್ದಾರೆ.

ಸಾಕಪ್ಪಾ ಸಾಕು, ಇನ್ನು ಇವರ ಕಾಟ ಸಹಿಸಲು ಸಾಧ್ಯವಿಲ್ಲ. ದಿನ ನಿತ್ಯ ದೆಹಲಿಗೆ ಚಾಡಿ ಹೇಳಿಕೊಂಡು ಕೂರುವುದೂ ಬೇಡ ಎಂದಿದ್ದಾರೆ. ಇದೇ ಕಾರಣದಿಂದ ಮುಖ್ಯಮಂತ್ರಿ ಅವರು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುವ ಸಂದರ್ಭ ಗಳನ್ನೂ ಬೇಕೆಂದೇ ದೂರ ಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

Translate »