ಎಲ್ಲವೂ ಮೀರಿ ಹೋಗಿದೆ: ಸಚಿವ ಜಿಟಿಡಿ
ಮಂಡ್ಯ

ಎಲ್ಲವೂ ಮೀರಿ ಹೋಗಿದೆ: ಸಚಿವ ಜಿಟಿಡಿ

April 3, 2019

ನಿಖಿಲ್ ಪರ ಪ್ರಚಾರಕ್ಕೆ ಸೋತ ಕಾಂಗ್ರೆಸ್ ಶಾಸಕರು ಬರೋದಿಲ್ಲಾ ಎಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

ಮಂಡ್ಯ: ಎಲ್ಲವೂ ಕೈ ಮೀರಿ ಹೋಗಿದೆ. ನಿಖಿಲ್ ಪರ ಪ್ರಚಾರಕ್ಕೆ ಸೋತ ಕಾಂಗ್ರೆಸ್‍ನ ಶಾಸಕರ್ಯಾರೂ ಬರೋದಿಲ್ಲಾ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರಕ್ಕೆ ಇಂದು ಮಳವಳ್ಳಿ ಕ್ಷೇತ್ರಕ್ಕೆ ಆಗಮಿಸಿದ್ದ ಸಚಿವರು ಚಿಕ್ಕಮುಲಗೂಡು ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿನ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ತಮ್ಮದೇ ಆದ ಧಾಟಿಯಲ್ಲಿ ತೆರೆದಿಟ್ಟರು. ಮೈತ್ರಿ ಪಕ್ಷಗಳ ನಾಯಕರ ನಡುವೆ `ಸಮನ್ವಯ’ ಇಲ್ಲ ಎಂಬುದನ್ನು ಸ್ಪಷ್ಟ ಮಾತುಗಳಲ್ಲೇ ಹೊರಹಾಕಿದರು.

ನಿಖಿಲ್ ಪರ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ, ಈಗ ಕಾಂಗ್ರೆಸ್‍ನಲ್ಲಿರುವ ಚಲುವರಾಯ ಸ್ವಾಮಿ ಅವರೇ ಹೇಳಿದ್ದಾರೆ. ರಮೇಶ್ ಬಾಬು ಬಂಡಿಸಿದ್ದೇ ಗೌಡ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಮುಖಂಡರು ಯಾರೂ ನಮ್ಮ ಪರ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

ಬೆಂಬಲ ಅನುಮಾನ; ನನ್ನ ಮಾತು ನೂರಕ್ಕೆ ನೂರು ಸತ್ಯ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಎಂಟಕ್ಕೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಳೆದ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಮುಖಂಡರು ಈಗಿನ ಚುನಾವಣೆಯಲ್ಲಿ ಸುಮಲತಾ ಪರ ಕೆಲಸ ಮಾಡು ತ್ತ್ತಿದ್ದಾರೆ. ಅವರೆಲ್ಲಾ ನಮಗೆ ಸಪೋರ್ಟ್ ಮಾಡುವುದು ಅನುಮಾನ ಎಂದು ನೇರವಾಗಿಯೇ ಹೇಳಿದರು.

ಕಾಂಗ್ರೆಸ್‍ನವರು ಸ್ಪರ್ಧೆ ಮಾಡಿರುವ ಕಡೆ ಜೆಡಿಎಸ್ ನವರ ಅಸಮಾಧಾನ ಇಲ್ಲ. ಆದರೆ ಜೆಡಿಎಸ್‍ನವರು ಕಣದಲ್ಲಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನವರ ಅಸಮಾಧಾನ ಇದೆ. ಅದನ್ನು ವರಿಷ್ಠರ ಗಮನಕ್ಕೂ ತಂದಿದ್ದೇವೆ. ಮಂಡ್ಯದಲ್ಲಿ ನಾನು ಸೇರಿದಂತೆ ಎಲ್ಲರೂ ಕಾಂಗ್ರೆಸ್‍ನವರ ಜೊತೆ ಒಟ್ಟಿಗೆ ಹೋಗುವ ಪ್ರಯತ್ನ ಮಾಡಿದ್ದೇವೆ. ಚಲುವರಾಯಸ್ವಾಮಿ ಜೊತೆಯೂ ಮಾತನಾಡಿದ್ದೇನೆ. ಅದಕ್ಕೆ ಅವರು, `ಕುಮಾರಣ್ಣ ನಮ್ಮ ವಿರುದ್ಧವೇ ಮಾತನಾಡುತ್ತಾರೆ. ಎಲ್ಲವೂ ಮೀರಿ ಹೋಗಿದೆ. ನಾವು ಯಾರು ನಿಮ್ಮ ಪರ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ ಎಂದು ಜಿಟಿಡಿ ವಿವರಿಸಿದರು.

Translate »