ಚಾಮರಾಜನಗರ ದಸರಾಕ್ಕೆ ಸಂಭ್ರಮದ ತೆರೆ
ಚಾಮರಾಜನಗರ

ಚಾಮರಾಜನಗರ ದಸರಾಕ್ಕೆ ಸಂಭ್ರಮದ ತೆರೆ

October 17, 2018

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ 4 ದಿನಗಳ ಕಾಲ ನಡೆದ ದಸರಾ ಮಹೋತ್ಸವ ಮಂಗಳವಾರ ಮುಕ್ತಾಯಗೊಂಡಿತು.
ಮಹೋತ್ಸವದ ಅಂತಿಮ ದಿನವಾದ ಮಂಗಳವಾರ ಕೂಡ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ಮುಖ್ಯ ವೇದಿಕೆಯಲ್ಲಿ ಸ್ಥಳೀಯ, ರಾಜ್ಯ ಮಟ್ಟದ ಕಲಾವಿದರು ಹಾಗೂ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕದ ಸೊಬಗು ಅನಾವರಣಗೊಂಡಿತು.

ಅಂತಿಮ ದಿನದ ಆಕರ್ಷಣೆಯಾಗಿದ್ದ ಖ್ಯಾತ ಗಾಯಕ ಹೇಮಂತ್ ಅವರ ಕನ್ನಡ ರಸಸಂಜೆ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನಸೆಳೆಯಿತು. ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳ ನೃತ್ಯ ರೂಪಕಕ್ಕೆ ನಗರದ ಜನತೆ ರೋಮಾಂಚನಗೊಂಡರು.
ಪ್ರತಿದಿನ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಲಾವಿದರು ಜನರಿಗೆ ಸಾಂಸ್ಕೃತಿಕ ರಸದೌತಣ ನೀಡಿದರು. ರಾಜ್ಯದ ಪ್ರಖ್ಯಾತ ಗಾಯಕರು ಹಾಗೂ ಸ್ಥಳೀಯ ಕಲಾವಿದರ ಕಾರ್ಯಕ್ರಮ ಸಂಗೀತದ ಹೊನಲು ಹರಿಸಿದರು.

ಹೇಮಂತ್ ಮೋಡಿ: ಅಂತಿಮ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಹೇಮಂತ್ ಅವರ ಕನ್ನಡ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು. ಹೇಮಂತ್ ಸಂಗೀತ ಹಾಗೂ ಜತೆಗಾರರ ಮೋಹಕ ನೃತ್ಯ ಕಂಡ ಯುವ ಪ್ರೇಕ್ಷಕರು ಮಳೆಯ ನಡುವೆಯೇ ಕುಣಿದಾಡಿದರು.

ಕಾರ್ಯಕ್ರಮ ಗಣಪತಿ ಸ್ತುತಿಯೊಂದಿಗೆ ಆರಂಭವಾಯಿತು. ತುಂತುರು ಮಳೆಯ ನಡುವೆ ಗಾಯಕ ರವಿರಾಜ್ ಗಣಪತಿ ಸ್ತುತಿಗೆ ದನಿಯಾದರು. ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

ನಂತರ ಕುಮಾರಗಂಗೋತ್ರಿ ಅವರು ಹಾಡಿದ ಹೊಸಬೆಳಕು ಸಿನಿಮಾದ ‘ಹೊಸ ಬೆಳಕು ಮೂಡುತಿದೆ…’ ಎಂಬ ಹಾಡು ಸೊಗಸಾಗಿ ಮೂಡಿಬಂತು. ಗಾಯಕಿ ಸುಹಾನ ಅವರು ‘ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲ…’ ಹಾಡು ಚಪ್ಪಾಳೆ ಗಿಟ್ಟಿಸಿ ಕೊಂಡಿತು. ರವಿರಾಜ್, ಸಂತೋಷ್, ಮಸಾಲೆ ಮಂಜು ಅವರು ಆಪ್ತಮಿತ್ರ ಚಿತ್ರದ ಕಾಲವನ್ನು ‘ತಡೆಯೋರು ಯಾರೂ ಇಲ್ಲ….’ ಎಂಬ ಹಾಡಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ರಾತ್ರಿ 9ಗಂಟೆಗೆ ವೇದಿಕೆಯ ಮೇಲೆ ಕಪ್ಪು ಬಣ್ಣದ ಶರ್ಟ್, ಚಿನ್ನದ ಬಣ್ಣದ ಕೋಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿ ಆಗಮಿಸಿದ ಹೇಮಂತ್ ಅವರು ಸೋಲಿಲ್ಲದ ಸರದಾರ ಚಿತ್ರದ ‘ಕನ್ನಡ ರೋಮಾಂಚನಾವೀ ಕನ್ನಡ…’ ಗೀತೆಯನ್ನು ಹಾಡುತ್ತಾ ವೇದಿಕೆಗೆ ಆಗಮಿ ಸಿದರು. ಅವರ ದನಿ ಕೇಳುತ್ತಿದಂತೆ ನೆರೆ ದಿದ್ದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಯನ್ನು ಹೊಡೆ ಯುವ ಮೂಲಕ ಸಂಭ್ರಮಿಸಿದರು.

ಶಂಕರ್‍ನಾಗ್ ಅಭಿನಯದ ಆಟೋರಾಜ ಚಿತ್ರದ ‘ಸಂತೋಷಕ್ಕೆ ಹಾಡು, ಸಂತೋ ಷಕ್ಕೆ…’ ಹಾಡಿಗೆ ಪ್ರೇಕ್ಷಕರು ದನಿಗೂಡಿ ಸಿದರು. ಗೀತಾ ಚಿತ್ರದ ‘ಜೊತೆಯಲಿ, ಜೊತೆ ಜೊತೆಯಲಿ…’ ಪ್ರೇಮ ಗೀತೆಗಳು ನಗರದ ಜನತೆಗೆ ಭರ್ತಿ ಮನರಂಜನೆ ನೀಡಿತು. ಇತ್ತೀಚೆಗೆ ತೆರೆಕಂಡ ಚಿತ್ರಗಳ ಗೀತೆಗಳು ಭರ್ಜರಿ ಚಪ್ಪಾಳೆ ಶಿಳ್ಳೆ ಗಿಟ್ಟಿಸಿ ಕೊಂಡಿತು. ಅಂತಿಮ ದಿನ ಗಾಯಕ ಹೇಮಂತ್ ಹಾಗೂ ತಂಡದವರ ಗಾಯನ ಸಂಗೀತ ರಸಧಾರೆಯೇ ಹರಿಸಿತು. ಇದಕ್ಕೂ ಮೊದಲು ನಡೆದ ಕಾಲೇಜು ವಿದ್ಯಾ ರ್ಥಿಗಳ ಸಾಂಸ್ಕೃತಿಕ ನೃತ್ಯ ಹಾಗೂ ಸ್ಥಳೀಯ ಕಲಾವಿದರ ಕಾರ್ಯಕ್ರಮ ಜನರಿಗೆ ರಸ ದೌತಣ ಉಣಬಡಿಸಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ರಾಮಸಮು ದ್ರದ ಆರ್.ಸಿ.ಸಿದ್ದರಾಜು ಮತ್ತು ತಂಡದವರಿಂದ ಡೋಲು ಕುಣಿತ, ಗುಂಡ್ಲುಪೇಟೆಯ ಪೃಥ್ವಿ ಬುದ್ಧಿಮಾಂದ್ಯ ಶಾಲೆ ವಿದ್ಯಾರ್ಥಿ ಗಳಿಂದ ಜಾನಪದ ನೃತ್ಯ, ಮಲೆಯೂರು ಡಾ.ಪ್ರೀತಮ್ ಅವರಿಂದ ಸುಗಮ ಸಂಗೀತ ಮತ್ತು ದೇವರ ನಾಮ ಕಾರ್ಯಕ್ರಮ ಜನರನ್ನು ರಂಜಿಸಿತು.

ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರದ ಎಂ.ಕೈಲಾಸಮೂರ್ತಿ ಮತ್ತು ತಂಡದಿಂದ ಜಾನಪದ ಗಾಯನ, ಯಳಂದೂರು ತಾಲೂ ಕಿನ ಅಂಬಳೆ ಗ್ರಾಮದ ಎಸ್.ಜೈಗುರು ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಜಾನಪದ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರ ಮೈನವಿರೇಳಿಸಿತು.

ನಗರದ ಚಾಮರಾಜೇಶ್ವರ ಸ್ವಾಮಿ ದೇವ ಸ್ಥಾನದ ಆವರಣದ ಬೃಹತ್ ವೇದಿಕೆಯಲ್ಲಿ ಬರೋಬ್ಬರಿ 4 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿ ನಡೆಯಿತು. ಮೊದಲ ದಿನ ಸಂಗೀತ ನಿರ್ದೇಶಕ ಅರ್ಜುನ್‍ಜನ್ಯ ಅವರ ಸಂಗೀತ ರಸಸಂಜೆಯಲ್ಲಿ ಜನರು ಮಿಂದೆದ್ದರು. ಎರಡನೇ ದಿನ ಖ್ಯಾತ ಗಾಯಕಿ ಸಂಗೀತಕಟ್ಟಿ ಅವರ ನವರಸ ಗಾಯನ ಮೋಡಿ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾ ಯಿತು. ಮೂರನೇ ದಿನ ನಿಕೋಬಾರ್ ನೃತ್ಯ, ಚೋರ ಚರಣದಾಸ ನಾಟಕ ಪ್ರೇಕ್ಷಕರಿಗೆ ಭರ್ತಿ ಮನರಂಜನೆ ನೀಡಿತು. 4 ದಿನಗಳ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯ ಸಂಜೆಗೆ ಜನರು ಮನಸೋತರು. ಸಂಜೆಯಾ ಯಿತೆಂದರೆ ದೇವಾಲಯ ಪ್ರದೇಶವೂ ಜನಜಾತ್ರೆ ಎಂಬಂತೆ ಭಾಸವಾಗುತ್ತಿತ್ತು. ಒಟ್ಟಾರೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿಯಿಂದ ಆಯೋಜಿಸಿದ್ದ ಚಾಮರಾಜ ನಗರ ದಸರಾ ಮಹೋತ್ಸಕ್ಕೆ ವರ್ಣರಂಜಿತ ತೆರೆ ಬಿದ್ದಿತು. ದೇವಾಲಯ, ಉದ್ಯಾನ ಪ್ರದೇಶ, ವೃತ್ತಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಗಳಿಂದ ನಗರದಲ್ಲಿ ಜಾತ್ರೆಯ ವಾತಾವರಣ ಕಂಡು ಬರುತ್ತಿತ್ತು.

ದಸರಾ ನಡಿಗೆಗೆ ಅತ್ಯುತ್ಸಾಹದ ಬೆಂಬಲ

ಚಾಮರಾಜನಗರ: ಚಾಮರಾಜನಗರ ದಸರಾ ಮಹೋ ತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪರಿಸರ ಇಲಾಖೆ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಂಗಳವಾರ ನಡೆದ ದಸರಾ ನಡಿಗೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆಯಿತು.

ಚಾಮರಾಜೇಶ್ವರ ದೇವಾಲಯದ ಬಳಿ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಸಮಾವೇಶಗೊಂಡರು. ಬಿಳಿ ಬಣ್ಣದ ಟಿ ಶರ್ಟ್, ಕೆಂಪು ಹಸಿರು ಕ್ಯಾಪ್ ಧರಿಸಿ ಎಲ್ಲರೂ ಉತ್ಸಾಹದಿಂದಲೇ ದಸರಾ ನಡಿಗೆಗೆ ಸಜ್ಜಾದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ, ಜಿಪಂ ಅಧ್ಯಕ್ಷೆ ಶಿವಮ್ಮ ಅವರೊಂದಿಗೆ ದಸರಾ ನಡಿಗೆಗೆ ಹಸಿರು ನಿಶಾನೆ ತೋರಿದರು. ಬಳಿಕ ಉಸ್ತುವಾರಿ ಸಚಿವರೂ ಸಹ ಟಿ ಶರ್ಟ್ ಧರಿಸಿ ದಸರಾ ನಡಿಗೆಯಲ್ಲಿ ಪಾಲ್ಗೊಂಡರು.
ಚಾಮರಾಜೇಶ್ವರ ದೇವಾಲಯದಿಂದ ಆರಂಭಗೊಂಡ ದಸರಾ ನಡಿಗೆ ಜೈ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ಡಿವೈಎಸ್‍ಪಿ ಕಚೇರಿ ಮುಂಭಾಗದಿಂದ ಜಿಲ್ಲಾ ನ್ಯಾಯಾಲಯ ರಸ್ತೆಯಲ್ಲಿ ಮುಂದುವರಿಯಿತು. ತದನಂತರ ಕರಿನಂಜನಪುರ ರಸ್ತೆ, ಪ್ರವಾಸಿ ಮಂದಿರ ವೃತ್ತ (ಸುಲ್ತಾನ್ ಷರೀಫ್ ವೃತ್ತ), ದೊಡ್ಡ ಅಂಗಡಿ ಬೀದಿ, ನಗರಸಭೆ ಕಾರ್ಯಾಲಯ ರಸ್ತೆ ಮುಖಾಂತರ ಸಾಗಿ ವಾಪಸ್ಸು ಚಾಮ ರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯವಾಯಿತು.

ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಾಕಥಾನ್ ದಸರಾ ನಡಿಗೆಯೂ ಸಹ ಒಂದಾಗಿದೆ. ಈಗಾಗಲೇ ರೈತ ದಸರಾ, ರಂಗೋಲಿ ಸ್ಪರ್ಧೆಗಳನ್ನು ನಡೆಸಲಾಗಿದೆ. ಪ್ರತಿನಿತ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ಸಹ ಗಮನ ಸೆಳೆಯುತ್ತಿವೆ. ಮುಂಬರುವ ವರ್ಷದಲ್ಲಿ 8 ರಿಂದ 9 ದಿನಗಳ ಕಾಲ ದಸರಾ ಮಹೋತ್ಸವ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ದಸರಾ ಅವಧಿಯನ್ನು ಹೆಚ್ಚಿಸÀುವುದರಿಂದ ಹೆಚ್ಚು ಸಂಖ್ಯೆ ಕಲಾವಿದರಿಗೆ ಅವರ ಕಲಾ ಪ್ರದರ್ಶನ ನೀಡಲು ಹೆಚ್ಚು ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಸಿಇಓ ಡಾ.ಕೆ. ಹರೀಶ್‍ಕುಮಾರ್, ಎಡಿಸಿ ಕೆ.ಎಂ.ಗಾಯತ್ರಿ, ನಗರಸಭಾ ಸದಸ್ಯ ರಾಜಪ್ಪ, ಕನಿಷ್ಠ ವೇತನ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಉಮೇಶ್, ಡಿವೈಎಸ್‍ಪಿ ಜಯಕುಮಾರ್, ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶ್ಯಾಮಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚೆಲುವಯ್ಯ, ತಹಸೀಲ್ದಾರ್ ಕೆ.ಪುರಂಧರ್, ಪೌರಾ ಯುಕ್ತ ರಾಜಣ್ಣ ಇದ್ದರು.

ಆಗಸದಲ್ಲಿ ಬೆಳಕಿನ ಚಿತ್ತಾರ

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಚಾಮರಾಜನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಮಂಗಳವಾರ ಸಂಜೆ ಜಿಲ್ಲಾಡ ಳಿತದಿಂದ ಬಾಣ- ಬಿರುಸಿನ ಪ್ರದ ರ್ಶನ ನಡೆಯಿತು. ರಾತ್ರಿ 7 ಗಂಟೆಗೆ ಆಯೋಜಿಸಿದ್ದ ಕಾರ್ಯಕ್ರಮವು ಮಳೆಯ ಕಾರಣದಿಂದ 30 ನಿಮಿಷ ತಡವಾಗಿ ಆರಂಭವಾಯಿತು. ಮೇಘರಾಜನ ಆಗಮನದಿಂದ ತಂಪಾಗಿದ್ದ ಇಳೆ. ಕೂಡಲೇ ಗಗನಕ್ಕೆ ಚಿಮ್ಮಿದ ವಿವಿಧ ಬಗೆಯ ಬಾಣಬಿರುಸಿನಿಂದ ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಮೂಲಕ ನೋಡುಗರನ್ನು ಮಂತ್ರಮುಗ್ದಗೊಳಿಸಿತು.

Translate »