- ಸಮನ್ವಯ ಸಮಿತಿ ಸಭೆ ನಂತರ ಸಿದ್ದರಾಮಯ್ಯ ವಿವರಣೆ
- ಅನ್ನಭಾಗ್ಯ ಅಕ್ಕಿ ಪ್ರಮಾಣ ಕಡಿತಕ್ಕೆ ಸಿದ್ದು ತೀವ್ರ ಅಸಮಾಧಾನ
- ಏಕಕಾಲದಲ್ಲಿ 30 ನಿಗಮ ಮಂಡಳಿಗೆ ನೇಮಕ
ಬೆಂಗಳೂರು: ಸೆಪ್ಟೆಂಬರ್ 3ನೇ ವಾರದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ನೂರು ದಿನಗಳನ್ನು ಪೂರೈಸಿದ ಬೆನ್ನಲ್ಲೇ ಇಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸೆಪ್ಟೆಂಬರ್ ಮೂರನೇ ವಾರದಲ್ಲಿ ರಾಜ್ಯ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ. ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸಲಿದೆ ಎಂದು ಹೇಳಿದ ಸಿದ್ದರಾಮಯ್ಯ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮುಂದುವರಿಕೆಗೂ ನಿರ್ಧರಿಸಲಾಗಿದೆ ಎಂದು ತಿಳಿಸಿದರು. ನಾವೆಲ್ಲರೂ ಒಂದೇ ಎಂದು ಹೇಳಿದ ಸಿದ್ದರಾಮಯ್ಯ, ಸರ್ಕಾರ ಉತ್ತಮ ದಿಕ್ಕಿನಲ್ಲಿ ಸಾಗಿದೆ. ಈ ಬಗ್ಗೆ ಬಿಜೆಪಿ ಚಿಂತಿಸುವ ಅಗತ್ಯವಿಲ್ಲ. ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳ ಈಡೇರಿಕೆ ಕುರಿತು ಬಿಜೆಪಿ ಚಿಂತಿಸಲಿ ಎಂದು ಹೇಳಿದರು.
ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಮತ್ತು ಏಕಕಾಲದಲ್ಲಿ 30 ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೇಮಕಕ್ಕೆ ಸಮನ್ವಯ ಸಮಿತಿ ಅಸ್ತು ಎಂದಿದ್ದು, ಕೆಲ ಸಚಿವರ ಖಾತೆಗಳ ಮರು ಹಂಚಿಕೆಗೂ ನಿರ್ಧರಿಸಲಾಗಿದೆ. ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್ ಆದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ. ಅನ್ನಭಾಗ್ಯ ಯೊಜನೆಯ ಅಕ್ಕಿ ಪ್ರಮಾಣ ಕಡಿತ ಮಾಡಿದ್ದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಇದಕ್ಕೆ ಸಿಎಂ ಕುಮಾರಸ್ವಾಮಿ, ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಕಡಿತ ಮಾಡಿದರೆ ಬೊಕ್ಕಸಕ್ಕೆ 2 ಸಾವಿರ ಕೋಟಿ ಹಣ ಉಳಿತಾಯವಾಗುತ್ತದೆ ಎಂದು ಹೇಳಿದರಂತೆ. ಇದಕ್ಕೆ ಒಪ್ಪದ ಸಿದ್ದರಾಮಯ್ಯ, ರೈತರ 40 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸಾಧ್ಯವಾದರೆ, 7 ಕೆ.ಜಿ. ಅಕ್ಕಿ ಯೂನಿಟ್‍ಗೆ ಹೆಚ್ಚುವರಿ 2 ಸಾವಿರ ಕೋಟಿ ನೀಡಲಾಗದೇ ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಇದರ ಬಗ್ಗೆಯೂ ಸೂಕ್ತ ತೀರ್ಮಾನಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ.
ಜೊತೆಗೆ ಏಕ ಕಾಲದಲ್ಲೇ 30 ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರ ಕುರಿತು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಏಕಾಏಕಿ ಅಧಿಕಾರಿಗಳ ವರ್ಗಾವಣೆ ನಿರ್ಧಾರ ಸರಿಯಲ್ಲ. ಸಂಬಂಧ ಪಟ್ಟ ಇಲಾಖಾ ಸಚಿವರ ಗಮನಕ್ಕೆ ತರುವುದು ಒಳ್ಳೆಯದು. ಇಲ್ಲದಿದ್ದರೆ ಗೊಂದಲಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದ ಅವರು, ಈಗಾ ಗಲೇ ಈ ವಿಚಾರವಾಗಿ ಕೆಲ ಸಚಿವರಲ್ಲಿ ಬೇಸರ ಮೂಡಿದೆ. ಹಾಗಾಗಿ ಚರ್ಚಿಸಿ ವರ್ಗಾವಣೆ ಮಾಡಿ ಎಂದು ತಿಳಿಸಿದ್ದಾರೆನ್ನಲಾಗಿದೆ.
ಸ್ಪಷ್ಟನೆ: ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ಉಂಟಾಗಿದ್ದ ಗೊಂದಲ ಹಾಗೂ ಇರಿಸು ಮುರಿಸು ಪ್ರಸ್ತಾಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯರಿಂದ ಸ್ಪಷ್ಟನೆ ಬಯಸಿದರೆನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ನಾನು ಹೇಳಿದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ವರದಿ ಮಾಡಿವೆ. ತಾವು ಯಾವುದೇ ಗೊಂದಲದ ಹೇಳಿಕೆ ನೀಡಿಲ್ಲ. ನಾನು ಹಾಗೂ ನನ್ನ ಮಗ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಕೆಲ ಶಾಸಕರು ನಮ್ಮೊಂದಿಗೆ ಬರಲು ನಿರ್ಧರಿಸಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಸೆ.5ರಂದು ನ್ಯಾಯಾಲಯದ ಆದೇಶ ಹೊರಬೀಳಲಿದ್ದು, ಅಲ್ಲಿವರೆಗೆ ಯಾವುದೇ ನಿರ್ಧಾರ ಕೈಗೊಳ್ಳದೇ ಇರಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಆದರೆ ಅದಕ್ಕೆ ಒಪ್ಪದ ಸಿದ್ದರಾಮಯ್ಯ ತಕ್ಷಣ ಬಡ್ತಿ ಮೀಸಲಾತಿ ಜಾರಿಗೊಳಿಸುವಂತೆ ಪಟ್ಟು ಹಿಡಿದಾಗ ಬಿರುಸಿನ ಮಾತುಕತೆ ನಡೆ ದಿದೆ. ಕೊನೆಗೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೋರ್ಟ್ ಆದೇಶ ನೋಡಿಕೊಂಡು ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಹೇಳಿ ವಿಷಯಕ್ಕೆ ತೆರೆ ಎಳೆದಿದ್ದಾರೆ.
ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಅಡ ಗೂರು ಹೆಚ್.ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿಗೆ ಸೇರ್ಪಡೆ ಮಾಡಿಕೊಳ್ಳುವ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಇದು ಸಾಧ್ಯವೇ ಇಲ್ಲ ಎಂದು ಕಡ್ಡಿ ತುಂಡರಿಸಿದಂತೆ ಹೇಳಿದ್ದಾರೆ. ಹಾಗಾಗಿ ಸಮನ್ವಯ ಸಮಿತಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ರನ್ನಾಗಿ ಸೇರಿಸಿಕೊಳ್ಳುವ ವಿಚಾರವನ್ನು ಕೈಬಿಡಲಾಗಿದೆ.