ರಾಜಕೀಯ ಲಾಭಕ್ಕಾಗಿ ಸಮಾಜ ಒಡೆಯುವ ಪ್ರಯತ್ನ ವಿಫಲವಾಗಿದೆ ಬಸವ ಜಯಂತಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ
ಮೈಸೂರು

ರಾಜಕೀಯ ಲಾಭಕ್ಕಾಗಿ ಸಮಾಜ ಒಡೆಯುವ ಪ್ರಯತ್ನ ವಿಫಲವಾಗಿದೆ ಬಸವ ಜಯಂತಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ

August 6, 2018

ಮೈಸೂರು: ರಾಜಕೀಯ ಲಾಭಕ್ಕಾಗಿ ನಮ್ಮ ಸಮಾಜವನ್ನು ವೀರಶೈವ ಮತ್ತು ಲಿಂಗಾಯತ ಎಂದು ಪ್ರತ್ಯೇಕಗೊಳಿಸಿ ಒಡೆಯುವ ಪ್ರಯತ್ನ ಸದ್ಯ ವಿಫಲವಾಗಿದ್ದು, ಇನ್ನಾದರೂ ನಮ್ಮ ಸಮುದಾಯ ಇಂತಹ ರಾಜಕೀಯ ಕುತಂತ್ರಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯದ ವೀರಶೈವ-ಲಿಂಗಾಯತ ಸಮುದಾಯದ ಸಚಿವರು, ಸಂಸದರು ಹಾಗೂ ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಧರ್ಮ ಮತ್ತು ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಇದು ದುದೈರ್ವದ ಸಂಗತಿ. ಅದೇ ರೀತಿ ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಹಾಸಭಾದ ರಾಜ್ಯಾಧ್ಯಕ್ಷ ತಿಪ್ಪಣ್ಣ ಅವರು ದಿಟ್ಟ ನಿಲುವು ತೆಗೆದುಕೊಳ್ಳದಿದ್ದರೆ, ಇಷ್ಟೊತ್ತಿಗೆ ವೀರಶೈವ ಮತ್ತು ಲಿಂಗಾಯತ ಎಂದು ರಾಜಕೀಯ ಲಾಭಕ್ಕಾಗಿ ಪ್ರತ್ಯೇಕಿಸಲು ಪ್ರಯತ್ನಿಸಿದವರ ಕೈ ಮೇಲಾಗುತ್ತಿತ್ತು. ನಮ್ಮ ಎಲ್ಲ ಪೂಜ್ಯ ಸ್ವಾಮೀಜಿಯವರ ಆರ್ಶೀವಾದದ ಫಲವಾಗಿ ನಾವಿಂದು ಇಬ್ಭಾಗವಾಗುವ ಅನಾಹುತದಿಂದ ಪಾರಾಗಿದ್ದೇವೆ ಎಂದು ನುಡಿದರು.

ಬಸವ ಧರ್ಮದಲ್ಲಿ ನಂಬಿಕೆ ಇಟ್ಟವರು ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂಬ ರಾಜಕೀಯ ಕುತಂತ್ರಕ್ಕೆ ಬಲಿಯಾಗಬಾದರು. ಸಮಾಜ ಒಡೆಯಲು ಅವಕಾಶ ನೀಡದೇ ಒಂದಾಗಿ ಬದುಕಲು ಕಲಿಯದಿದ್ದರೆ ನಮ್ಮ ಮುಂದಿನ ಪೀಳಿಗೆ ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಭಿನ್ನಾಭಿಪ್ರಾಯ ಇಟ್ಟುಕೊಳ್ಳದೇ ಬಸವಾದಿ ಶರಣ ಚಿಂತನೆಗಳನ್ನು ಒಟ್ಟಾಗಿ ತೆಗೆದುಕೊಂಡು ಮುಂದೆ ಸಾಗಬೇಕಿದೆ ಎಂದು ತಿಳಿಸಿದರು.

ಬಸವಣ್ಣನವರ ಉದಾತ್ತ ಚಿಂತನೆ ಮಾನವ ಕುಲದ ಉದ್ಧಾರ ಹಾಗೂ ಸರ್ವರು ಸಮಾನರು ಎಂಬುದಾಗಿದೆ. ನಮ್ಮ ವೀರಶೈವ ಲಿಂಗಾಯತ ಧರ್ಮದ ಶ್ರೇಷ್ಠತೆಯೆಂದರೆ ಅದು ನಮ್ಮ ಬಸವಾದಿ ಶರಣರು ನುಡಿದಂತೆ ನಡೆದು ತೋರಿಸಿದ್ದಾಗಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಯಾವ ಕಾಲಘಟ್ಟದಲ್ಲೂ ಇಂತಹ ಆದರ್ಶ ಪರಂಪರೆ ಸ್ಥಾಪಿಸಿದ ಸಂಗತಿಯನ್ನು ಕಾಣಲಾಗದು ಎಂದರು.

ಷಡ್ಯಂತ್ರ ಬಗ್ಗೆ ಎಚ್ಚರ ಇಲ್ಲವಾದರೆ ಅನಾಹುತ: ನಮ್ಮ ಸಮಾಜ ಒಡೆಯುವ ಹುನ್ನಾರ ಮಾತ್ರವಲ್ಲ, ನಮ್ಮ ಸಮಾಜ ಇತರ ಸಮುದಾಯದೊಂದಿಗೆ ಸಾಮರಸ್ಯದಿಂದ ಇರುವುದನ್ನು ಕೆಡಿಸುವ ಷಡ್ಯಂತ್ರವೂ ನಡೆಯುತ್ತಿದೆ ಎಂದು ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದರು. ಒಂದೆಡೆ ನಮ್ಮ ಸಮಾಜವನ್ನೇ ಇಬ್ಭಾಗ ಮಾಡುತ್ತಿದ್ದರೆ, ಮತ್ತೊಂದೆಡೆ ನಮ್ಮ ಸಮುದಾಯ ಹಾಗೂ ಇನ್ನಿತರ ಸಮುದಾಯದ ನಡೆವಿನ ಸಾಮರಸ್ಯ ಹಾಳು ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಹೀಗಾಗಿ ಇಂತಹ ಷಡ್ಯಂತ್ರದ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಲ್ಪಸಂಖ್ಯಾತ ಸ್ಥಾನಮಾನ ಪರ ಖೇಣಿ ಬ್ಯಾಟಿಂಗ್: ಸಮುದಾಯದ ರಾಜಕೀಯ ಶಕ್ತಿ ಕಡಿಮೆಯಾಗುತ್ತಿದ್ದು, ಜೊತೆಗೆ ಸಮುದಾಯದಲ್ಲಿ ಅನೇಕ ಸಾಮಾಜಿಕ ಬದಲಾವಣೆ ಆಗುತ್ತಿದೆ. ಇದರಿಂದ ಆರ್ಥಿಕ ಶಕ್ತಿಯೂ ಇಳಿಕೆಯಾಗುತ್ತಿದೆ. ಹೀಗಾಗಿ ಸಮುದಾಯ ಪ್ರತ್ಯೇಕ ಧರ್ಮ ಎಂದು ಪರಿಗಣಿತವಾದರೆ ಅಲ್ಪಸಂಖ್ಯಾತ ಸ್ಥಾನಮಾನ ದೊರೆತು ಉಚಿತ ಶಿಕ್ಷಣದ ಸೌಲಭ್ಯ ಸೇರಿದಂತೆ ಅನೇಕ ಸವಲತ್ತು ಲಭ್ಯವಾಗಲಿದೆ. ವೀರಶೈವ ಲಿಂಗಾಯತ ಎಂಬ ಶೀರ್ಷಿಕೆಯಡಿ ಈ ಸ್ಥಾನಮಾನ ಲಭ್ಯವಾಗಲು ಅನೇಕ ಕಾನೂನಾತ್ಮ ತೊಡುಕುಗಳಿದ್ದು, ಈ ಹಿನ್ನೆಲೆಯಲ್ಲಿ ಲಿಂಗಾಯತ ವೀರಶೈವ ಶೀರ್ಷಿಕೆ ಸೂಕ್ತವಾಗುತ್ತದೆ. ಅಲ್ಪಸಂಖ್ಯಾತ ಸ್ಥಾನಮಾನ ಪಡೆದುಕೊಳ್ಳದಿದ್ದರೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮುದಾಯ ಹಿಂದುಳಿಯಲಿದೆ ಎಂದು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನೈಸ್ ಸಂಸ್ಥೆ ವ್ಯವಸ್ಥಾಪಕ ಅಶೋಕ ಖೇಣಿ ಪ್ರತಿಪಾದಿಸಿದರು.

200 ರೂ.ಗೆ ಓಟ ಮಾಡಿದರು: ಕಳೆದ ಬಾರಿ ಶಾಸಕನಾಗಿ ಆಯ್ಕೆಯಾಗಿ ಸಮಪರ್ಕ ಕುಡಿಯುವ ನೀರು ಸೇರಿದಂತೆ ಎಲ್ಲಾ ಅಭಿವೃದ್ಧಿ ಕೆಲಸ ಮಾಡಿದರೂ ಈ ಬಾರಿ ಸೋಲು ಕಾಣಬೇಕಾಯಿತು. ದುರಂತವೆಂದರೆ ನಮ್ಮ ಲಿಂಗಾಯತರು ಕೇವಲ 200 ರೂ. ಹಣ ತೆಗೆದುಕೊಂಡು ಎದುರಾಳಿಗಳಿಗೆ ಓಟು ಮಾಡಿದರು ಎಂದು ಖೇಣಿ ಬೇಸರ ವ್ಯಕ್ತಪಡಿಸಿದರು.

ಸನ್ಮಾನಿತ ಜನಪ್ರತಿನಿಧಿಗಳು: ಬಿ.ಎಸ್.ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ಸೇರಿದಂತೆ ಸಮುದಾಯದ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯರಾದ ಮಹಂತೇಶ್ ಮಲ್ಲಿಕಾರ್ಜುನ್ ಕವಟಗಿಮಠ, ಅಲ್ಲಂ ವೀರಭದ್ರಪ್ಪ, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಶಾಸಕರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ, ವೀರಣ್ಣ ಸಿ.ಚರಂತಿಮಠ, ಸಿ.ಎಂ.ನಂಬಣ್ಣನವರ, ಪರಣ್ಣ ಈಶ್ವರಪ್ಪ ಮುನವಳ್ಳಿ, ಬಿ.ಸಿ.ಪಾಟೀಲ್, ಡಿ.ಎಸ್.ಸುರೇಶ್, ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ, ಸಿ.ಎಸ್.ನಿರಂಜನಕುಮಾರ್, ಬೆಳ್ಳಿ ಪ್ರಕಾಶ್, ಕೆ.ಎಸ್.ಲಿಂಗೇಶ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸದ ಪ್ರತಾಪ್ ಸಿಂಹ, ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ತಿಪ್ಪಣ್ಣ ಮತ್ತಿತರರು ಹಾಜರಿದ್ದರು.

ವೀರಶೈವ, ಲಿಂಗಾಯತ ಸಮುದಾಯ ಒಟ್ಟಾಗಿ ಸಾಗಬೇಕು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ

ಮೈಸೂರು: ವೀರಶೈವ ಮತ್ತು ಲಿಂಗಾಯತ ಎಂದು ಪ್ರತ್ಯೇಕಿಸುವ ಹುನ್ನಾರಕ್ಕೆ ಆಸ್ಪದ ನೀಡದೇ ಇಲ್ಲಿಯವರೆಗೂ ನಡೆದಂತೆ ಸಮುದಾಯ ಒಟ್ಟಾಗಿ ಮುಂದೆ ಸಾಗಬೇಕು ಎಂದು ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದ ಆವರಣದಲ್ಲಿ ನಡೆದ ಜನಪ್ರತಿನಿಧಿಗಳ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತ ಎಂದು ಪ್ರತ್ಯೇಕಿಸುವುದಕ್ಕೆ ಅವಕಾಶ ಮಾಡಿಕೊಡದೇ ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನಲ್ಲಿ ಸಮುದಾಯ ಮುನ್ನಡೆಯಬೇಕಿದೆ.

ವೀರಶೈವ ಮಹಾಸಭಾ ಒಂದು ರಾಜಕೀಯೇತರ ಸಂಘಟನೆಯಾಗಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನ ನೀಡುವ ಸಮಾರಂಭವನ್ನು ಆಯೋಜನೆ ಮಾಡಲು ಮಹಾಸಭಾ ತೀರ್ಮಾನಿಸಿತ್ತು. ಆದರೆ ಈ ವೇಳೆಗೆ ವೀರಶೈವ ಮತ್ತು ಲಿಂಗಾಯತ ಎಂದು ವಿಭಜಿಸುವ ಹುನ್ನಾರ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಸನ್ಮಾನಿಸುವ ನಿರ್ಧಾರದಿಂದ ಹಿಂದೆ ಸರಿಯಲಾಯಿತು. ವಿಧಾನಸಭೆ ಚುನಾವಣೆ ಬಳಿಕ ವಿಭಜಿಸುವ ಚಟುವಟಿಕೆಗಳು ತಣ್ಣಾಗಾದವು. ಈಗಲಾದರೂ ನಾವೆಲ್ಲರೂ ಒಂದು ಎಂಬುದನ್ನು ಅರಿವು ಸಾಗಬೇಕು ಎಂದು ನುಡಿದರು.

ಮಿತ್ರನ ವರದಿ ಪ್ರಸ್ತಾಪ: ಇಂದಿನ ಮೈಸೂರು ಮಿತ್ರ ಸಂಚಿಕೆಯಲ್ಲಿ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿ ವಿಶೇಷಾಧಿಕಾರಿ ಪ್ರೊ.ರವೀಂದ್ರ ರೇಷ್ಮೆ ಅವರ ವಿಚಾರ ಮಂಡನೆಗೆ ಸಂಬಂಧಿಸಿದ ವರದಿ ಪ್ರಕಟಗೊಂಡಿದೆ. ಪ್ರೊ.ರವೀಂದ್ರ ರೇಷ್ಮೆ ಅವರು ತಮ್ಮ ವಿಚಾರ ಮಂಡನೆಯಲ್ಲಿ ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ ಎಂಬುದುನ್ನು ಪ್ರಾಮಾಣಿಕವಾಗಿ ಪ್ರತಿಪಾದಿಸಿದ್ದಾರೆ. ಆ ಮೂಲಕ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ದೇಶ ಒಡೆದ ಜಿನ್ನಾ ಮತ್ತವನ ಬೆಂಗಲಿಗರಿಗೆ ಹೋಲಿಸಿರುವುದು ಸೂಕ್ತವಾಗಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ಸಮುದಾಯದ ಒಳ ಪಂಗಡಗಳ ನಡುವೆ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಜೊತೆಗೆ ವೀರಶೈವ ಮತ್ತು ಲಿಂಗಾಯತ ಎಂದು ವಿಭಜಿಸುವುದು ಸರಿಯಲ್ಲ. ಇಂದಿನ ಕಾರ್ಯಕ್ರಮದಲ್ಲಿ ಸಮಾಜ ಬಹುತೇಕ ಮಂದಿ ಜನಪ್ರತಿನಿಧಿಗಳು ಗೈರು ಹಾರಿರುವುದು ಬೇಸರದ ಸಂಗತಿ. – ಬಿ.ಸಿ.ಪಾಟೀಲ್, ಶಾಸಕರು.

 

ಸ್ಪಷ್ಟವಾದ ವೈಚಾರಿಕ ಚಿಂತನೆಯನ್ನು ನಮ್ಮ ಬಸವಾದಿ ಶರಣರು ನೀಡಿದ್ದಾರೆ. ಅವರ ಚಿಂತನೆಯನ್ನು ಅನುಸರಿಸಿದರೆ ನಮ್ಮ ಎಲ್ಲಾ ಗೊಂದಲಗಳಿಗೂ ಉತ್ತರ ಸಿಗಲಿದೆ. – ಬಸವರಾಜ ಬೊಮ್ಮಾಯಿ, ಶಾಸಕರು.

 

ವೀರಶೈವ ಮತ್ತು ಲಿಂಗಾಯತ ಎಂದು ವಿಭಜಿಸುವ ಶಕ್ತಿಗಳಿಗೆ ಉತ್ತೇಜನ ನೀಡದೇ ಸಮಾಜದಲ್ಲಿನ ಬಡವರಿಗೆ ಸರ್ಕಾರದ ಸೌಲಭ್ಯ ದೊರೆಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. – ಅಲ್ಲಂ ವೀರಭದ್ರಪ್ಪ, ಶಾಸಕರು.

 

ಇಲ್ಲಿ ಯಾವುದೇ ಪಕ್ಷವಿಲ್ಲ. ನಮ್ಮದು ಭಕ್ತಿ ಪಕ್ಷವಾಗಿದ್ದು, ಬಸವಣ್ಣನವರ ತತ್ವಾದರ್ಶಗಳು ಸ್ವಾಮೀಜಿಗಳಿಗೂ ಬೇಕು. ಜನಸಾಮಾನ್ಯರಿಗೂ ಬೇಕು. ಸನ್ಯಾಸಿಗೂ ಬೇಕು, ಸಂಸಾರಿಗೂ ಬೇಕು. ಪ್ರತಿಯೊಬ್ಬರಿಗೂ ಬಸವ ಎಂಬ ಬೆಳಕು ಬೇಕಾಗಿದೆ. ವಿಶ್ವದಲ್ಲೇ ಮೊಟ್ಟ ಮೊದಲು ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಪಾದಿಸಿದವರು ಬಸವಣ್ಣ. ಇದಕ್ಕೆ ಅವರ ಅನುಭವ ಮಂಟಪವೇ ಸಾಕ್ಷಿ. – ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠ.

Translate »