ಮೈಸೂರು-ಬೆಂಗಳೂರು ನಡುವೆ ರೈಲಿನ ವೇಗ ಹೆಚ್ಚಳ
ಮೈಸೂರು

ಮೈಸೂರು-ಬೆಂಗಳೂರು ನಡುವೆ ರೈಲಿನ ವೇಗ ಹೆಚ್ಚಳ

August 6, 2018

ಮೈಸೂರು: ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರೈಲುಗಳು ಇನ್ನು ಮುಂದೆ ವೇಗ ಹೆಚ್ಚಿಸಿಕೊಳ್ಳುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ವೇಗ ಹೆಚ್ಚಿಸುವುದಕ್ಕೆ ಮುಂದಾಗಿರುವ ನೈರುತ್ಯ ರೈಲ್ವೆ ಇಲಾಖೆ, ಹಳಿಗಳನ್ನು ಬದಲಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುತ್ತಿದ್ದು, ಶೀಘ್ರವೇ ಪ್ರಯಾಣದ ಅವಧಿಯಲ್ಲಿ 20 ನಿಮಿಷಗಳ ಕಡಿತಗೊಳ್ಳಲಿದೆ.

ಸಾವಿರಾರು ಮಂದಿ ಸರ್ಕಾರಿ ನೌಕರರು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಪ್ರವಾಸಿಗರು ಹಾಗೂ ನಾಗರೀಕರು ಪ್ರತಿದಿನ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರೈಲುಗಳನ್ನೇ ಅವಲಂಭಿಸಿದ್ದಾರೆ. ಬಸ್‍ಗಳಲ್ಲಿ ಪ್ರಯಾಣಿಸಿದರೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿಯೇ ಇಳಿದು ಮತ್ತೊಂದು ಬಸ್ ಅವಲಂಭಿಸಬೇಕಾಗಿರುವುದರಿಂದ ಬಹುತೇಕ ಪ್ರಯಾಣಿಕರು ರೈಲುಗಳನ್ನೇ ಅವಲಂಭಿಸಿರುವುದಲ್ಲದೆ, ಬಸ್‍ಗಿಂತ ರೈಲ್ವೆ ಪ್ರಯಾಣ ದರವೂ ಕಡಿಮೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡುವುದಕ್ಕೆ ನೈರುತ್ಯ ರೈಲ್ವೆ ಇಲಾಖೆ ಮುಂದಾಗಿದ್ದು, ಸದ್ದಿಲ್ಲದೆ ರೈಲುಗಳ ವೇಗ ಹೆಚ್ಚಿಸುವುದಕ್ಕೆ ಅಗತ್ಯವಾದ ಹೊಸ ರೈಲ್ವೆ ಹಳಿ ಜೋಡಣಾ ಕಾಮಗಾರಿ ಬಿರುಸಿನಿಂದ ನಡೆಸುತ್ತಿದೆ.

ಪ್ರಸ್ತುತ ಮೈಸೂರು-ಬೆಂಗಳೂರು ನಡುವೆ ಜೋಡಿ ರೈಲ್ವೆ ಹಳಿ ಇದ್ದರೂ ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಮೂರು ಗಂಟೆಯಾಗಿತ್ತು. ಕೆಲವು ಸಂದರ್ಭಗಳಲ್ಲಿ 3.15 ರಿಂದ 3.30 ಗಂಟೆಯ ಅವಧಿ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ ಹೊಸ ರೈಲ್ವೆ ಹಳಿ ಜೋಡಣೆಯಿಂದಾಗಿ ಪ್ರಯಾಣದ ಅವಧಿ ಎರಡೂವರೆ ಗಂಟೆಯಾಗಲಿದೆ. ಈಗಾಗಲೇ ಹಳಿ ಜೋಡಣಾ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು, ಶೀಘ್ರವೇ ಹಂತ ಹಂತವಾಗಿ ರೈಲುಗಳ ವೇಗವನ್ನು ಹೆಚ್ಚಿಸಲಾಗುತ್ತದೆ ಎಂದು ರೈಲ್ವೆ ಮೂಲಗಳು ಸ್ಪಷ್ಟಪಡಿಸಿವೆ.

ಹಳಿ ಬದಲಾವಣೆ ಯಾಕೆ: ಜೋಡಿ ರೈಲ್ವೆ ಮಾರ್ಗ ನಿರ್ಮಾಣದ ವೇಳೆ ಹೊಸದಾಗಿ ಅಳವಡಿಸಿದ ರೈಲ್ವೆ ಹಳಿಗೆ ಹೆಚ್ಚು ಸಾಮಾಥ್ರ್ಯದ ಕಂಬಿಯನ್ನು ಬಳಸಲಾಗಿತ್ತು. ಆದರೆ ಹಳೆ ಮಾರ್ಗದಲ್ಲಿದ್ದ ರೈಲ್ವೆ ಹಳಿಗೆ ಈ ಹಿಂದೆ ಅಳವಡಿಸಿದ್ದ ಕಂಬಿಗಳು ಕಡಿಮೆ ಸಾಮಾಥ್ರ್ಯದ್ದಾಗಿದ್ದವು. ಈ ಹಿನ್ನೆಲೆಯಲ್ಲಿ ಹೆಚ್ಚು ವೇಗ ಹಾಗೂ ಹೆಚ್ಚಿನ ಭಾರ ಸಾಗಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡುವುದಕ್ಕಾಗಿ ನೈರುತ್ಯ ರೈಲ್ವೆ ಇಲಾಖೆ ಚಿಂತಿಸಿ, ಹೊಸ ಹಳಿಗಳನ್ನು ಜೋಡಿಸುತ್ತಿದೆ. ಈ ಹಿಂದೆಯಿದ್ದ ಹಳೆಯ ರೈಲ್ವೆ ಹಳಿಯೂ ಒಂದು ಮೀಟರ್‍ಗೆ 52 ಕೆಜಿ ತೂಕವಿತ್ತು. ಆದರೆ ಇದೀಗ ಅಳವಡಿಸುತ್ತಿರುವ ಹಳಿ ಒಂದು ಮೀಟರ್‌ಗೆ 60 ಕೆಜಿ ತೂಕವಿರುತ್ತದೆ. ಇದರಿಂದ ಮತ್ತಷ್ಟು ವೇಗದಲ್ಲಿ ರೈಲನ್ನು ಚಾಲನೆ ಮಾಡಬಹುದು. ಇದರೊಂದಿಗೆ ಗೂಡ್ಸ್ ರೈಲುಗಳಲ್ಲಿ ಹೆಚ್ಚಿನ ತೂಕವನ್ನು ಕೊಂಡೊಯ್ಯಬಹುದಾಗಿದೆ. ಅಲ್ಲದೆ ರೈಲು ವೇಗವಾಗಿ ಚಲಿಸುತ್ತಿದ್ದರೂ ಸುರಕ್ಷಿತವಾಗಿರುವುದಕ್ಕೆ ಹೊಸ ಹಳಿ ಸಹಕಾರಿಯಾಗಲಿದೆ. ಇದರಿಂದ ಮೈಸೂರು ಮತ್ತು ಬೆಂಗಳೂರು ಎರಡು ಕಡೆಯಿಂದ ಹೊಸ ಹಳಿ ಅಳವಡಿಸುತ್ತಿರುವುದರಿಂದ 2.30 ಗಂಟೆಯಲ್ಲಿಯೇ ಮೈಸೂರು ಹಾಗೂ ಬೆಂಗಳೂರನ್ನು ತಲುಪಬಹುದಾಗಿದೆ.

ಸಂಪೂರ್ಣ ಹೊಸದು: ಹಳಿ ಜೋಡಣೆಯಲ್ಲಿ ಕಂಬಿ, ಅಡ್ಡಲಾಗಿ ಅಳವಡಿಸುವ ಫಿಲ್ಲರ್ ಸೇರಿದಂತೆ ಎಲ್ಲವೂ ಹೊಸದೆ ಆಗಿದೆ. ಫ್ಲೆಷರ್ ಕ್ವಿಕ್ ರೀಲೇಯಿಂಗ್ ಸಿಸ್ಟಮ್(ಪಿಕ್ಯೂಆರ್‍ಎಸ್) ಯಂತ್ರದ ಮೂಲಕ ಹಳಿ ಜೋಡಣೆ ನಡೆಸಲಾಗುತ್ತಿದೆ. ಒಂದು ಯಂತ್ರವು ಹಳೆಯ ಹಳಿಯನ್ನು ಮೇಲೆತ್ತಿ ಟ್ರಾಲಿಯಲ್ಲಿ ಹಾಕಿ, ಅದೇ ಟ್ರಾಲಿಯಲ್ಲಿ ತಂದಿರುವ ಹೊಸ ಹಳಿಯನ್ನು ತಂದು ಜೋಡಿಸಲಾಗುತ್ತಿದೆ. ಸಿಮೇಂಟ್ ಫಿಲ್ಲರ್‍ನೊಂದಿಗೆ ಅಳವಡಿಸಿರುವ ಹಳಿಯನ್ನು ತಂದು ಜೋಡಿಸಿ ಅದನ್ನು ನೇರಗೊಳಿಸಲಾಗುತ್ತಿದೆ.

ಬುಲೆಟ್ ಟ್ರೈನ್ ನಕಾರಕ್ಕೆ ಕಾರಣ: ಮೈಸೂರು-ಬೆಂಗಳೂರು ನಡುವೆ ಬುಲೆಟ್ ಟ್ರೈನ್ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರ ಇಚ್ಚಿಸಿತ್ತು. ಆದರೆ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ಮೈಸೂರು-ಬೆಂಗಳೂರು ನಡುವೆ ರೈಲಿನಲ್ಲಿ ಪ್ರಯಾಣಿಸಿ ಪರಿಶೀಲನೆ ಮಾಡಿರುವ ತಜ್ಞರು ಈ ಮಾರ್ಗದಲ್ಲಿ ಹೆಚ್ಚಿನ ತಿರುವು ಹಾಗೂ ಸೇತುವೆಗಳಿರುವುದರಿಂದ ಬುಲೆಟ್ ಟ್ರೈನ್ ಸಂಚಾರಕ್ಕೆ ಸೂಕ್ತ ಮಾರ್ಗವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹಾಲಿ ಸಂಚರಿಸುವ ರೈಲುಗಳ ವೇಗವನ್ನು ಹೆಚ್ಚಿಸುವಂತೆ ಪ್ರಯಾಣಿಕರು ಒತ್ತಾಯಿಸುತ್ತಲೇ ಇದ್ದರು.

ಕಾರ್ಯಗತವಾದರೆ ಸಂತೋಷ: ಈ ಕುರಿತಂತೆ ಪ್ರತಿದಿನ ಮೈಸೂರು-ಬೆಂಗಳೂರು ನಡುವೆ ಕೆಲಸದ ನಿಮಿತ್ತ ರೈಲಿನಲ್ಲಿ ಪ್ರಯಾಣಿಸುವ ಹಲವು ಪ್ರಯಾಣಿಕರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಈ ಹಿಂದೆ ಜೋಡಿ ಹಳಿ ನಿರ್ಮಾಣವಾದ ನಂತರ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ಬಾರಿ ದೊಡ್ಡ ಪ್ರಮಾಣದ ಬದಲಾವಣೆ ಕಾಣಿಸುತ್ತಿಲ್ಲ. ಹಳಿ ಬದಲಾವಣೆ ಮಾಡುವುದರಿಂದ ರೈಲಿನ ವೇಗ ಹೆಚ್ಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿರುವುದು ಸಂತೋಷ ತಂದಿದೆ. ಆದರೆ ಹಳಿ ಬದಲಿಸಿದ ನಂತರವೂ ಪ್ರಯಾಣದ ಅವಧಿ ಮೂರು ಗಂಟೆಯಾದರೆ ನಿರಾಸೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಯೊಂದಿಗೆ ವೇಗವನ್ನು ಹೆಚ್ಚಿಸಿ ಪ್ರಯಾಣ ಅವಧಿ ಕಡಿತ ಮಾಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Translate »