ಮಹಾಮಳೆಗೆ ಕೊಚ್ಚಿಹೋದ ಬೆಳೆಗಾರನ ಬದುಕು
ಕೊಡಗು

ಮಹಾಮಳೆಗೆ ಕೊಚ್ಚಿಹೋದ ಬೆಳೆಗಾರನ ಬದುಕು

August 21, 2018

ಮಡಿಕೇರಿ: ಕಳೆದ ನಾಲ್ಕೈದು ದಶಕಗಳಿಂದ ಇರುವ ಎರಡು ಏಕರೆ ಭೂಮಿಯಲ್ಲಿ ಕಾಫಿ, ಕರಿಮೆಣಸು ಕೃಷಿ ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದ ಶಿವರಾಂ ಅವರು ಇಂದು ಮನೆ, ತೋಟಗಳಿಲ್ಲದೆ ಬರಿಗೈಯಲ್ಲಿ ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದ ಪುನರ್ವಸತಿ ಕೇಂದ್ರದಲ್ಲಿದ್ದಾರೆ.

ಬೆವರು ಹರಿಸಿ ನೆಟ್ಟು ಬೆಳೆಸಿದ ಕಾಫಿ ತೋಟದ ಮೇಲೆ ಗುಡ್ಡಕ್ಕೆ ಗುಡ್ಡವೆ ಕುಸಿದು ನಿಂತಿದೆ. ಮನೆ, ತೋಟ ಎಲ್ಲಿ, ಹೋಗುವ ದಾರಿ ಎಲ್ಲಿ ಎನ್ನುವುದೇ ತಿಳಿಯದ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ.

ಪುನರ್ವಸತಿ ಕೇಂದ್ರಕ್ಕೆ ಭೇಟಿಯನ್ನಿತ್ತ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರು, ಮತ್ತೆ ಗ್ರಾಮಕ್ಕೆ ತೆರಳಿ ಕೃಷಿ ನಡೆಸುತ್ತೀರ, ರಸ್ತೆ ಸಂಪರ್ಕ ಮಾಡಿಕೊಡಬೇಕೆ, ಇದಕ್ಕೆ ಎಷ್ಟು ಸಮಯ ತಗುಲಬಹುದೆಂದು ಸಂತ್ರಸ್ತ ಶಿವರಾಂ ಅವರನ್ನು ಕೇಳಿದಾಗ. ಗ್ರಾಮಕ್ಕೆ ಗ್ರಾಮವೇ ನಾಶವಾಗಿ ಹೋಗಿದೆ, ಮತ್ತೆ ಗ್ರಾಮಕ್ಕೆ ತೆರಳುವುದೇ ಅಸಾಧ್ಯ. ಮನೆ ನಿರ್ಮಿಸಿಕೊಡಿ ಎಂದು ತಿಳಿಸಿದರೆ ಹೊರತು, ಮತ್ತೇನನ್ನು ಅವರು ಬಯಸಲಿಲ್ಲ.

ಮಡಿಕೇರಿ ನಗರದಲ್ಲಿ ಬರೆ ಕುಸಿತ, ಮನೆ ಕುಸಿತಗಳಿಂದ ಬಡಾವಣೆಗೆ ಬಡಾವಣೆಯೆ ಖಾಲಿಯಾಗಿರುವ ಇಂದಿರಾ ನಗರದ ನಿವಾಸಿಯಾಗಿದ್ದ ಹೊಯ್ಸಳ ಅವರು, ಇದ್ದ ಮನೆ ಮಣ್ಣು ಪಾಲಾಗಿದೆ. ಮತ್ತೆ ಆಶ್ರಯ ನೀಡಿದ ಮನೆಗೆ ತೆರಳುವುದು ಅಸಾಧ್ಯ. ನನಗೆ ಮತ್ತೇನು ಬೇಡ ನಾನು ಗಾರೆ ಕೆಲಸ ನಿರ್ವಹಿಸುತ್ತೇನೆ ನನಗೊಂದು ‘ಉದ್ಯೋಗ’ ನೀಡಿ ಎಂದು ಕೋರಿ ಕೊಂಡರಾದರೆ, ಸಾಲ ಮಾಡಿ ಕಟ್ಟಿದ ಮನೆಯಲ್ಲಿ ಇರಲಾಗದ ಪರಿಸ್ಥಿತಿಯನ್ನು ಇಂದಿರಾನಗರದ ಮೈನಾವತಿ ಅವರು ತೆರೆದಿಟ್ಟರು.

ದುಃಖಿತ ಮನಸುಗಳ ಅಳಲನ್ನಷ್ಟೆ ಆಲಿಸಿದ ಶ್ರೀನಿವಾಸ ಪೂಜಾರಿ ಅವರು, ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿ ಸಂತ್ರಸ್ತರಾದ ವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸ್ಪಂದಿಸಿ ಅಗತ್ಯ ನೆರವನ್ನು ನೀಡುವ ಅಗತ್ಯವಿರುವುದಾಗಿ ತಿಳಿಸಿದರು. ಇವರೊಂದಿಗೆ ಎಂಎಲ್‍ಸಿ ಸುನಿಲ್ ಸುಬ್ರಮಣಿ ಹಾಜರಿದ್ದರು.

Translate »