ಮೈಸೂರು ಜಿಲ್ಲಾಧಿಕಾರಿ ಕಚೇರಿ ದ್ವಾರದಲ್ಲಿ ತಮ್ಮನ್ನು ತಡೆದ  ಪೊಲೀಸರ ವಿರುದ್ಧ ಸಿಡಿದೆದ್ದ ರೈತರು; ಉರುಳು ಸೇವೆ ಪ್ರತಿಭಟನೆ
ಮೈಸೂರು

ಮೈಸೂರು ಜಿಲ್ಲಾಧಿಕಾರಿ ಕಚೇರಿ ದ್ವಾರದಲ್ಲಿ ತಮ್ಮನ್ನು ತಡೆದ ಪೊಲೀಸರ ವಿರುದ್ಧ ಸಿಡಿದೆದ್ದ ರೈತರು; ಉರುಳು ಸೇವೆ ಪ್ರತಿಭಟನೆ

December 1, 2018

ಮೈಸೂರು: ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಕಬ್ಬು ಕಟಾವು ಕೂಲಿ ಏರಿಕೆ ತಡೆಯಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಉರುಳು ಸೇವೆ ನಡೆಸಿದರು. ಸುಡು ಬಿಸಿಲಲ್ಲೇ ನೆಲದ ಮೇಲೆ ಮಲಗಿ ಪ್ರತಿಭಟಿಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆ ಗಾರರ ಸಂಘದ ಆಶ್ರಯದಲ್ಲಿ ನೂರಕ್ಕೂ ಹೆಚ್ಚು ಕಬ್ಬು ಬೆಳೆ ಗಾರರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಗನ್‍ಹೌಸ್ ವೃತ್ತದಲ್ಲಿರುವ ಕುವೆಂಪು ಉದ್ಯಾನದಿಂದ ಸಯ್ಯಾಜಿ ರಾವ್ ರಸ್ತೆ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿ ಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ತಲುಪಿದ ರೈತರನ್ನು ಜಿಲ್ಲಾಧಿಕಾರಿ ಕಚೇರಿ ದ್ವಾರದ ಬಳಿ ತೆರಳದಂತೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ತಡೆದರು. ಇದನ್ನು ಆಕ್ಷೇಪಿಸಿದ ಪ್ರತಿಭಟನಾ ನಿರತ ರೈತರು, ಕಚೇರಿಯ ಮುಖ್ಯ ದ್ವಾರದ ಬಳಿ ತೆರಳಲು ಅವಕಾಶ ನೀಡಬೇಕು ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಇದಕ್ಕೆ ಅವಕಾಶ ನೀಡಲು ಪೊಲೀಸರು ನಿರಾಕರಿಸಿದಾಗ ರಸ್ತೆಯಲ್ಲೇ ಮಲಗಿದರು. ಉರುಳು ಸೇವೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪೊಲೀಸರು ಪ್ರತಿಭಟನಾನಿರತರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಕಚೇರಿ ಮುಖ್ಯ ದ್ವಾರದ ಬಳಿ ತೆರಳಲು ಅವ ಕಾಶ ನೀಡಿದರು. ಜಿಲ್ಲಾಧಿಕಾರಿಗಳು ತಮ್ಮ ಅಹವಾಲು ಸ್ವೀಕರಿಸ ಬೇಕೆಂದು ಪಟ್ಟು ಹಿಡಿದರು. ಸ್ವಲ್ಪ ಹೊತ್ತಿನ ನಂತರ ಜಿಲ್ಲಾ ಧಿಕಾರಿಗಳ ಪರವಾಗಿ ಜಿಪಂ ಸಿಇಓ ಕೆ.ಜ್ಯೋತಿ ಸ್ಥಳಕ್ಕೆ ಆಗ ಮಿಸಿ ರೈತರ ಮನವಿ ಸ್ವೀಕರಿಸಿ, ಅಹವಾಲು ಆಲಿಸಿದರು.

ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸರ್ಕಾರ ಭತ್ತದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ವಿಳಂಬ ಮಾಡು ತ್ತಿದೆ. ಭತ್ತದ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣವೇ ಎಲ್ಲಾ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕನಿಷ್ಟ ಬೆಂಬಲ ಬೆಲೆ 1750 ರೂ.ಗೆ ರಾಜ್ಯ ಸರ್ಕಾರ 250 ರೂ. ಪ್ರೋತ್ಸಾಹ ಧನ ನೀಡಿ ಪ್ರತಿ ಕ್ವಿಂಟಾಲ್‍ಗೆ ಕನಿಷ್ಟ 2000 ರೂ. ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ಆಗ್ರಹಿಸಿದರು.

ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆ, ಕುಂತೂರು ಮಹ ದೇಶ್ವರ ಸಕ್ಕರೆ ಕಾರ್ಖಾನೆಗಳು ಪಕ್ಕದ ಮಂಡ್ಯ ಜಿಲ್ಲೆಯ ರೈತ ರಿಂದ ಕಬ್ಬು ತಂದು ಅರೆಯುತ್ತಿದ್ದು, ಪ್ರತಿ ಟನ್‍ಗೆ 200 ರೂ. ಎಫ್‍ಆರ್‍ಪಿಗಿಂತ ಕಡಿಮೆ ಬೆಲೆಗೆ ಖರೀದಿಸಿ, ರೈತರನ್ನು ವಂಚಿಸುತ್ತಿದ್ದಾರೆ. ಇದರಿಂದ ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಯ ಸ್ಥಳೀಯ ರೈತರು ಕಬ್ಬು 14-15 ತಿಂಗಳಾ ದರೂ ಕಟಾವು ಆಗುತ್ತಿಲ್ಲ. ಅಲ್ಲದೆ ಕಟಾವು ಕೂಲಿ 700 ರೂ.ಗೆ ಏರಿದೆ. ಸಕ್ಕರೆ ಕಾರ್ಖಾನೆ ಸಿಬ್ಬಂದಿ ರೈತರಿಂದ ಹೆಚ್ಚುವರಿ ಯಾಗಿ 200 ರೂ. ಅನಧಿಕೃತವಾಗಿ ಕಟಾವು ಕೂಲಿ ವಸೂಲಿ ಮಾಡಿ, ತೂಕದ ಚೀಟಿಯಲ್ಲೂ ಮೋಸ ಮಾಡುತ್ತಿದೆ ಎಂದು ದೂರಿದರು. ಈ ಸಾಲಿನ ಕಬ್ಬಿನ ಎಫ್‍ಆರ್‍ಪಿ ದರ ರೈತರಿಗೆ ನ್ಯಾಯಸಮ್ಮತವಾಗಿ ನಿರ್ಧಾರವಾಗಿಲ್ಲ. ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣಿದು ಕೇಂದ್ರ ಸರ್ಕಾರ ಶೇ.9.5 ಸಕ್ಕರೆ ಇಳುವರಿಯನ್ನು ಶೆ.10 ಇಳುವರಿಗೆ ಏರಿಕೆ ಮಾಡಿರು ವುದರಿಂದ ರೈತರಿಗೆ ಪ್ರತಿ ಟನ್‍ಗೆ 200 ರೂ ನಷ್ಟವಾಗುತ್ತಿದೆ. ಆದ್ದರಿಂದ ಎಫ್‍ಆರ್‍ಪಿ ದರಕ್ಕೆ ಹೆಚ್ಚುವರಿಯಾಗಿ 300 ರೂ. ಕೊಡಿಸಬೇಕು. ಬಣ್ಣಾರಿ ಕಾರ್ಖಾನೆ ವಿರುದ್ಧ ಕ್ರಿಮಿ ನಲ್ ಮೊಕದ್ದಮೆ ದಾಖಲಿಸಬೇಕು. ವಾರದೊಳಗೆ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ, ಸದ್ಯದಲ್ಲೇ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಡಿಸೆಂಬರ್ 7ರಂದು ರೈತರ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ದೇವರಾಜ್, ಕಿರಗ ಸೂರು ಶಂಕರ್, ವರಕೋಡು ಕೃಷ್ಣೇಗೌಡ, ಪುಟ್ಟೇಗೌಡ, ಪರಶಿವಮೂರ್ತಿ, ಕುರುಬೂರು ಸಿದ್ದೇಶ್, ಸಿ.ಕೆ.ರವೀಂದ್ರ, ಬರಡನಪುರ ನಾಗರಾಜು, ಪಿ.ಸೋಮಶೇಖರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »