ತಹಶೀಲ್ದಾರ್ ಮಹೇಶ್ ಅಮಾನತ್ತಿಗೆ ರೈತ ಸಂಘ ಆಗ್ರಹ
ಕೊಡಗು

ತಹಶೀಲ್ದಾರ್ ಮಹೇಶ್ ಅಮಾನತ್ತಿಗೆ ರೈತ ಸಂಘ ಆಗ್ರಹ

September 21, 2018

ಕುಶಾಲನಗರ:  ಸಮೀಪದ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರ ಮೇಲೆ ತಹಶೀಲ್ದಾರ್ ಮಹೇಶ್ ದೌರ್ಜನ್ಯ ನಡೆಸಿದ್ದು, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ರಾತ್ರಿ 11 ಗಂಟೆ ವೇಳೆಗೆ ಪರಿಹಾರ ಕೇಂದ್ರಕ್ಕೆ ಆಗಮಿಸಿದ ತಹಶೀಲ್ದಾರ್ ಮಹೇಶ್ ಅವರು ಮಲಗಿರುವ ಮಹಿಳೆಯನ್ನು ಎಬ್ಬಿಸಿ ಮೈಮುಟ್ಟಿ ಅವಾಚ್ಯಕ ಶಬ್ದಗಳಿಂದ ನಿಂದಿಸ ಹಲ್ಲೆ ನಡೆಸಿದ್ದಾರೆ. ಅದಕ್ಕೆ ಇತರೆ ನಿರಾಶ್ರಿತರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಪರಸ್ಪರ ಮಾತು ಬೆಳೆದಿದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ವೇಳೆ ಅಲ್ಲಿಂದ ಓಡಿ ಹೋಗುತ್ತಿದ್ದ ಮಹೇಶ್ ಅವರು ರಸ್ತೆಗೆ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ. ಆದರೆ ಸಂತ್ರಸ್ತರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂತ್ರಸ್ತರ ಮೇಲೆ ಮೊಕದ್ದಮೆ ದಾಖಲು ಮಾಡಿದರೆ ಸಂಘಟನೆಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮನೆಮಠ ಕಳೆದುಕೊಂಡು ಬೀದಿಪಾಲಾಗಿರುವ ನಿರಾಶ್ರಿತರ ಮೇಲೆ ದೌರ್ಜನ್ಯ ಎಸಗಿರುವ ತಹಶೀಲ್ದಾರ್ ಮಹೇಶ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ನಿರ್ವಾಣಪ್ಪ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಎಸ್ಟೇಟ್ ಲೈನ್ ಮನೆ ಹಾಗೂ ಬಾಡಿಗೆ ಮನೆಗಳಲ್ಲಿ ವಾಸವಿದ್ದವರಿಗೆ ಯಾವುದೇ ಸೌಲಭ್ಯ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತ ಅಧಿಕಾರಿಗಳು ಸಂತ್ರಸ್ತರನ್ನು ಸಾಗಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅರೋಪಿಸಿದರು. ರಾಜ್ಯ ವಿವಿಧೆಡೆ ಗಳಿಂದ ದಾನಿಗಳು ಸಂತ್ರಸ್ತರಿಗೆ ಹಣ ನೀಡಲು ಬಂದರೆ ನೋಡೆಲ್ ಅಧಿಕಾರಿಗಳು ಅವಕಾಶ ನೀಡದೆ ವಾಪಸ್ಸು ಕಳುಹಿಸಿದರು. ಈ ಬಗ್ಗೆ ಸಂತ್ರಸ್ತರು ಆಕ್ಷೇಪ ವ್ಯಕ್ತಪಡಿಸಿದಕ್ಕೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಸಂತ್ರಸ್ತ ಮಹಿಳೆ ಸುಚಿತ್ರಾ ಮಾತನಾಡಿ, ತಹಶೀಲ್ದಾರ್ ಅವರು ನನ್ನ ಕೆನ್ನೆಗೆ ಹೊಡೆದರು.ಇದರಿಂದ ಕಿವಿ ಕೇಳಿಸುತ್ತಿಲ್ಲ.ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ವೈದ್ಯರು ಶಿಫಾರಸು ಮಾಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್.ಮಂಜುನಾಥ್, ಕಾರ್ಯದರ್ಶಿ ಸಣ್ಣಪ್ಪ, ಸಂತ್ರಸ್ತ ಸಂಜೀವಾ, ಸುರೇಶ್ ಇದ್ದರು.

Translate »