ರೈತರ ಸಾಲ ಮನ್ನಾ: ರಾಜ್ಯದ ಜನರಿಗೆ ತಕ್ಷಣ ಸ್ಪಷ್ಟನೆ ನೀಡಲು ರೈತಸಂಘ ಒತ್ತಾಯ
ಮೈಸೂರು

ರೈತರ ಸಾಲ ಮನ್ನಾ: ರಾಜ್ಯದ ಜನರಿಗೆ ತಕ್ಷಣ ಸ್ಪಷ್ಟನೆ ನೀಡಲು ರೈತಸಂಘ ಒತ್ತಾಯ

June 2, 2018

ಮೈಸೂರು:  ಸಾಲ ಮನ್ನಾ ಕುರಿತಂತೆ ಸರ್ಕಾರ ತಕ್ಷಣ ರಾಜ್ಯದ ಜನತೆಗೆ ಸ್ಪಷ್ಟನೆ ನೀಡದಿದ್ದರೆ ರೈತರನ್ನು ಬೇವರ್ಸಿಗಳಂತೆ ಸಮಾಜಕ್ಕೆ ಬಿಂಬಿಸಿದಂತಾಗಲಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡುವುದಾಗಿ ಹೇಳಿ, ರೈತರ ಕಿವಿಗೆ ಹೂ ಇಡುವ ಪ್ರಯತ್ನ ಮಾಡಲಾಗುತ್ತಿದೆ. ಯಾವ ಮಾನದಂಡದ ಮೇಲೆ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಮೊದಲು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಟ್ಟು, ಬಳಿಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಾಲ ಮನ್ನಾ ವಿಷಯದಲ್ಲಿ ನೂರೆಂಟು ನಿಬಂಧನೆಗಳನ್ನು ಮಾಡಿದ್ದು, ಇದರಿಂದ ನೂರಕ್ಕೆ ಕೇವಲ ಒಬ್ಬರೋ, ಇಬ್ಬರೋ ಫಲಾನುಭವಿಗಳಾಗುತ್ತಾರೆ. ಆದ್ದರಿಂದ ಸಾಲ ಮನ್ನಾ ವಿಷಯದಲ್ಲಿ ಹೇರಿರುವ ನಿಬಂಧನೆಗಳನ್ನು ಸಡಿಲಗೊಳಿಸಿ, ಬೇಷರತ್ತಾಗಿ ಎಲ್ಲಾ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಸಾಲ ಮನ್ನಾ ನ್ಯಾಯಾಲಯಗಳಲ್ಲಿರುವ ದಾವೆಗಳಿಗೂ ಅನ್ವಯಿಸಬೇಕು. ಆಭರಣಗಳ ಮೇಲೆ ಪಡೆದಿರುವ ಸಾಲವನ್ನೂ ಇದರ ವ್ಯಾಪ್ತಿಗೆ ತರಬೇಕು. ಕೃಷಿ ಅಭಿವೃದ್ಧಿಗೆ ಪಡೆದಿರುವ ಮಧ್ಯಮ ಮತ್ತು ದೀರ್ಘಾವಧಿ ಸಾಲ, ಪಶುಸಂಗೋಪನೆ ಪಡೆದುಕೊಂಡಿರುವ ಮಹಾನಗರ ಪಾಲಿಕೆ, ನಗರಸಭೆ ವ್ಯಾಪ್ತಿಯ ವಾಣ ಜ್ಯ ಬ್ಯಾಂಕ್‍ಗಳ ಸಾಲವನ್ನು ಇದರ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.

ರೈತ ಸಂಘದ ಮುಖಂಡರಾದ ಅಶ್ವತ್ಥನಾರಾಯಣರಾಜ್ ಅರಸ್, ಹೆಚ್.ಸಿ.ಲೋಕೇಶ್‍ರಾಜ್ ಅರಸ್, ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಸುದ್ದಿಗೊಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »