ಎಕರೆಗೆ 2 ಕೋಟಿ ನೀಡುವಂತೆ ರೈತರ ಒತ್ತಾಯ
ಹಾಸನ

ಎಕರೆಗೆ 2 ಕೋಟಿ ನೀಡುವಂತೆ ರೈತರ ಒತ್ತಾಯ

July 17, 2018

ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿಂದು ವಿಮಾನ ನಿಲ್ದಾಣ ನಿರ್ಮಾಣದ ಭೂಸ್ವಾಧೀನ ಪರಿಹಾರ ಕುರಿತು ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಕರೆಗೆ 2 ಕೋಟಿ ರೂ. ಪರಿಹಾರ ನೀಡುವಂತೆ ರೈತರು ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳು ಒಪ್ಪದೆ ಮಂಗಳವಾರಕ್ಕೆ ಸಭೆ ಮುಂದೂಡಲಾಯಿತು.

ತಾಲೂಕಿನ ಬೂವನಹಳ್ಳಿ, ಸಂಕೇನಹಳ್ಳಿ, ದ್ಯಾವಲಾಪುರ, ಲಕ್ಷ್ಮೀಸಾಗರ, ತೆಂಡೆಹಳ್ಳಿ, ಮೈಲನಹಳ್ಳಿ ಸೇರಿದಂತೆ ಇತರೆ ಹಳ್ಳಿಗಳ ಭೂ-ಸ್ವಾಧೀನದ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಎಕರೆ ಭೂಮಿಗೆ 2 ಕೋಟಿ ರೂ. ಪರಿಹಾರ. ಭೂಮಿ ಕಳೆದುಕೊಂಡ ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ವಿಮಾನಯಾನ ಇಲಾಖೆಯಲ್ಲಿ ಅರ್ಹತೆಗೆ ತಕ್ಕ ಉದ್ಯೋಗ ಹಾಗೂ ಆ ಭಾಗದಲ್ಲಿ 30 ಅಡಿ ರಸ್ತೆ ನಿರ್ಮಿಸುವಂತ ಹಕ್ಕೋತ್ತಾಯ ಸಭೆಯಲ್ಲಿದ್ದ ರೈತ ರಿಂದ ಕೇಳಿ ಬಂತು. ಸಭೆಯಲ್ಲಿ ಪಾಲ್ಗೊಂಡಿದ್ದ ಕೆಐಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಅರುಣ್‍ಕುಮಾರ್, ಜಂಟಿನಿರ್ದೇಶಕ ಉದ್ಯಮಿ ಕಂಪನಿಯ ಸಿದ್ಧಾರ್ಥ, ಚಂದ್ರ ಕಾಂತ್ ಸೇರಿದಂತೆ ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿಗಳು ಸಾಕಷ್ಟು ಸಮಯ ರೈತ ರೊಂದಿಗೆ ಚರ್ಚಿಸಿ ಮನವೊಲಿಸಲು ಯತ್ನಿಸಿದರು. ಇದಕ್ಕೆ ರೈತರು ಒಪ್ಪದ ಕಾರಣ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಭೆ ಮುಂದೂಡಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅಧಿಕಾರಿಗಳು, 1991ರಲ್ಲಿ 466 ಎಕರೆ ಭೂಮಿಯನ್ನು ಎಕರೆಗೆ ಲಕ್ಷ ರೂ.ಗಳಂತೆ ರೈತರಿಂದ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ನಂತರ 2007ರಲ್ಲಿ ಐಐಟಿ ಹೆಸರಿನಲ್ಲಿ 1,057 ಎಕರೆ ಭೂಮಿಯನ್ನು ಪ್ರತಿ ಎಕರೆಗೆ 5 ಲಕ್ಷ ರೂ.ಗಳಂತೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ನಂತರದಲ್ಲಿ ಇಂದು ಭೂ-ಸ್ವಾಧೀನ ಕಾಯ್ದೆ ಪ್ರಕಾರ ಹೆಚ್ಚಿನ ಬೆಲೆ ನೀಡಿ, ಭೂಮಿ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದೇವೆ ಎಂದರು. ಬೂವನಹಳ್ಳಿಗೆ ಮಾತ್ರ ಪ್ರತಿ ಎಕರೆಗೆ 28 ಲಕ್ಷ ರೂ., ಉಳಿದಂತೆ ಇತರೆ ಹಳ್ಳಿಗಳಿಗೆ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ವಿವರ ನೀಡಿದರು.

ರೈತರು ಪ್ರತಿಕ್ರಿಯಿಸಿ, ನಾವುಗಳು ಹಳೆಯ ಕಾಯ್ದೆಯಂತೆ ನಮ್ಮ ಭೂಮಿಯನ್ನು ನೀಡುವುದಿಲ್ಲ. ರೈತರ ಭೂಮಿ ವಶಪಡಿಸಿ ಕೊಂಡು ನಗರದ ಎಸ್.ಎಂ.ಕೃಷ್ಣ ನಗರ ಮತ್ತು ಕೋರವಂಗಲ ಕಾವಲಿನಲ್ಲಿ ರೈಲ್ವೆ ಇಲಾಖೆಯವರು ಹೆಚ್ಚಿನ ಪರಿಹಾರವನ್ನು ರೈತರಿಗೆ ನೀಡಿದಂತೆ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಭೂಮಿ ಒದಗಿ ಸುವ ರೈತರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದರು. 2014ರ ನಂತರದ ಕಾಯ್ದೆ ನಿಯಮದಂತೆ ಪರಿಹಾರವಾಗಿ ಪ್ರತಿ ಎಕರೆಗೆ 2 ಕೋಟಿ ರೂ.ಗಳನ್ನು ನೀಡಿದರೇ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.

Translate »