ಅರಸೀಕೆರೆಯಲ್ಲಿ ಅಹವಾಲುಗಳ ಮಹಾಪೂರ
ಹಾಸನ

ಅರಸೀಕೆರೆಯಲ್ಲಿ ಅಹವಾಲುಗಳ ಮಹಾಪೂರ

July 17, 2018

ಅರಸೀಕೆರೆ: ನಗರದಲ್ಲಿಂದು ಸಾರ್ವ ಜನಿಕ ಅಹವಾಲು ಸ್ವೀಕಾರ ಸಭೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಅಹ ವಾಲುಗಳ ಮಹಾಪೂರವೇ ಹರಿದು ಬಂತು. ಸಭೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗವಹಿಸಿ, ಸಾರ್ವಜನಿಕರ ಸಮಸ್ಯೆ ಮನವರಿಕೆ ಮಾಡಿ ಕೊಟ್ಟಿದ್ದು ವಿಶೇಷವಾಗಿತ್ತು.

ನಗರದ ವೆಂಕಟೇಶ್ವರ ಕಲಾಭವನದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ 573 ಅರ್ಜಿಗಳು ಸಲ್ಲಿಕೆಯಾದವು. ಸಭೆ ಅಂತ್ಯದವರೆಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಜರಿದ್ದು, ಜನತೆಯ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಗಮನ ಸೆಳೆದರಲ್ಲದೆ, ಸ್ವತಃ ಕೆಲ ಸಮಸ್ಯೆಗಳ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ದರು. ಅಲ್ಲದೆ ಜಿಲ್ಲಾಡಳಿತದಿಂದ ಆಗಬೇಕಾಗಿ ರುವ ಕಾರ್ಯಗಳ ಕುರಿತು ವಿವರಿಸಿದರು. ಸಭೆಗೆ ಆಗಮಿಸಿ ಶಾಸಕರಿಗೆ ಸಾಥ್ ನೀಡಿದ ಜಿಪಂ ಸದಸ್ಯ ಪಟೇಲ್ ಶಿವಪ್ಪ ಸಾರ್ವಜನಿಕರ ಪ್ರಮುಖ ಸಮಸ್ಯೆಗಳ ಕುರಿತು ಮನವಿಗಳನ್ನು ಸಲ್ಲಿಸಿ ಶೀಘ್ರ ಬಗೆಹರಿಸಿಕೊಡುವಂತೆ ಕೋರಿದರು.

ಜಿಲ್ಲಾಧಿಕಾರಿಯವರ ಜನ ಸಂಪರ್ಕ ಸಭೆಯ ನಿರ್ಧಾರವನ್ನು ಪ್ರಶಂಸಿಸಿದ ಶಾಸಕ ಕೆ.ಎಂ.ಶಿವ ಲಿಂಗೇಗೌಡರು, ಭೂಮಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರೇ ಬಗೆಹರಿಸಬೇಕು. ಹಾಗಾಗಿ ಸರ್ವೇ, ಪೋಡಿ, ತಿದ್ದುಪಡಿ, ಖಾತೆ ವರ್ಗಾವಣೆ ಮತ್ತಿತರ ಕುಂದು ಕೊರತೆಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಿ ಜನರ ಸಂಕಷ್ಟ ಪರಿಹರಿಸಬೇಕು ಎಂದು ಸಲಹೆ ನೀಡಿದರು, ಸಭೆಯಲ್ಲಿ ರಸ್ತೆ ದುರಸ್ತಿ, ಸ್ಮಶಾನ ಒತ್ತುವರಿ, ಜಮೀನು ಮಂಜೂರಾತಿ ಸೇರಿದಂತೆ ಹಲವು ಮನವಿಗಳು ಜಿಲ್ಲಾಧಿಕಾರಿಗೆ ಸಲ್ಲಿಕೆ ಯಾದವು. ನಗರದ ಒಳಚರಂಡಿ ಸಮಸ್ಯೆ ಕಳೆದ ನಾಲ್ಕು ವರ್ಷಗಳಿಂದ ಹಾಗೇ ಉಳಿದಿದೆ. ಭೂ ಸ್ವಾಧೀನ ಪರಿಹಾರ ದೊರೆತಿಲ್ಲ ಎಂದು ನಗರದ ನಿವಾಸಿಗಳು ದೂರಿದರು. ಇದಕ್ಕೆ ಧ್ವನಿ ಗೂಡಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ವಿವಿಧ ಯೋಜನೆ ನೆನೆಗುದಿಗೆ ಬಿದ್ದಿವೆ. ಭೂಸ್ವಾಧೀನಕ್ಕೆ ಅಗತ್ಯವಿರುವ ದರನಿಗದಿ ಪ್ರಕ್ರಿಯೆ ಮುಗಿಸಿದ್ದಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು. ಹಲವು ಸಾರ್ವಜನಿಕ ಸಮಸ್ಯೆಗಳು ನಗರ ಸ್ಥಳೀಯ ಸಂಸ್ಥೆಗಳ ಕೊರತೆಗಳ ಬಗ್ಗೆ ಶಾಸಕ ಕೆ.ಎಂ.ಶಿವಲಿಂಗೇಗೌಡರೇ, ಪೂರಕ ಮಾಹಿತಿ ನೀಡಿ, ಕೆಲವು ಅರ್ಜಿಗಳ ಕುರಿತು ತಾವೇ ಉತ್ತರಿಸಿ ದರು. ನಗರದ ಎಲ್ಲಾ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿಸಲಾಗುವುದು. ವಿಳಂಬವಾಗಿರುವ ಬಾಣವಾರ ರಸ್ತೆ ಕಾಮಗಾರಿ ಮತ್ತೆ ಪ್ರಾರಂಭಿ ಸಲಾಗಿದ್ದು, 148.18 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿ, ಈ ಬಗ್ಗೆ ರಾಜ್ಯ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಲಭ್ಯವಿರುವ ಅನುದಾನದ ಬಗ್ಗೆ ಮಾಹಿತಿ ಪಡೆದು ಶೀಘ್ರವೇ ಭೂಮಿಗೆ ಪರಿಹಾರ ದರ ನಿಗದಿ ಪಡಿಸಲಾಗುವುದು ಎಂದು ಭರವಸೆ ನೀಡಿದರು. ವಿವಾದಗಳಿಲ್ಲದ ಅರ್ಜಿಗಳನ್ನು ಕಾಲ ಮಿತಿಯೊಳಗೆ ಇತ್ಯರ್ಥ ಪಡಿಸಿ, ಉಳಿದವುಗಳನ್ನು ಕಾನೂನಿನ ವ್ಯಾಪ್ತಿಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಅರಸೀಕೆರೆ ತಾಲೂಕು ಅನೇಕ ರೀತಿಯ ಸಮಸ್ಯೆ ಗಳನ್ನು ಎದುರಿಸುತ್ತಿದೆ. ನಿರಂತರ ಬರದಿಂದ ಜನರ ಆರ್ಥಿಕ, ಸಾಮಾಜಿಕ ಸ್ಥಿತಿ ಹದಗೆಟ್ಟಿದ್ದು, ಅದನ್ನು ಸುಧಾರಿಸಲು ಅನೇಕ ಕ್ರಮ ಕೈಗೊಳ್ಳಬೇಕಾಗಿದೆ. ತಾಲೂಕಿನ 30 ಸಾವಿರ ಮಂದಿ ಬೆಂಗಳೂರಿನ ವಸ್ತ್ರೋದ್ಯಮ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದಾರೆ. ಅವರೆಲ್ಲರಿಗೂ ಇಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಸ್ಥಳೀಯವಾಗಿ ಕಾರ್ಖಾನೆಗಳು ಸ್ಥಾಪಿಸಬೇಕು.ಸೀ ನಿಟ್ಟಿನಲ್ಲಿ ಉದ್ಯಮಿಗಳಿಗೆ ಉಚಿತ ಜಾಗ ಒದಗಿಸಬೇಕು. ಹಾಗಾಗಿ ತಾಲೂಕಿನ ರಂಗಾಪುರ ಕಾವಲಿನಲ್ಲಿ ಲಭ್ಯವಿರುವ 500 ಎಕರೆ ಸರ್ಕಾರಿ ಜಮೀನನ್ನು ಕೈಗಾರಿಕಾ ಕೇಂದ್ರ ಸ್ಥಾಪನೆಗೆ ಕಾಯ್ದಿರಿಸಿ, ಆದೇಶ ಹೊರಡಿಸಬೇಕು ಎಂದರಲ್ಲದೆ, ನಗರದಲ್ಲಿ ವ್ಯವಸ್ಥಿತ ಮಾರುಕಟ್ಟೆ ಸ್ಥಾಪನೆಗೆ 4 ಎಕರೆ ಜಾಗದ ಅಗತ್ಯ ವಿದ್ದು, ಮಂಜೂರು ಮಾಡುವಂತೆ ಕೋರಿದರು.

ಎತ್ತಿನ ಹೊಳೆ ಯೋಜನೆ ಜಾರಿಯಿಂದ ಅರಸೀಕೆರೆ ತಾಲೂಕಿನ ಸಣ್ಣ ನೀರಾವರಿ 34 ಕೆರೆಗಳು ಹಾಗೂ ಇತರ ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ತಾಲೂಕಿನ ನೀರಿನ ಸಮಸ್ಯೆ ಬಹುತೇಕ ಬಗೆಹರಿಯಲಿದ್ದು, ಆದಷ್ಟು ಬೇಗ ಇದು ಅನುಷ್ಠಾನ ಗೊಳ್ಳಬೇಕು. ಅದಕ್ಕೂ ಮುನ್ನ ಸರ್ವೆ ನಡೆಸಿ ಭೂ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಅದಕ್ಕೆ ವಿಶೇಷ ಭೂಸ್ವಾಧೀನಾಧಿಕಾರಿ ನೇಮಕದ ಅಗತ್ಯವಿದ್ದು, ಶೀಘ್ರದಲ್ಲೇ ಸರ್ಕಾರದ ಹಂತದಲ್ಲಿ ಅಧಿಕಾರಿಯನ್ನು ನೇಮಕ ಮಾಡಿಸಿಕೊಂಡು ಬರುವುದಾಗಿ ಶಿವಲಿಂಗೇಗೌಡರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎತ್ತಿನಹಳ್ಳ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆಗೆ ಹಣದ ಕೊರತೆ ಇಲ್ಲ. ಭೂಸ್ವಾಧೀನಾಧಿಕಾರಿ ನೇಮಕದ ನಂತರ ಪ್ರಕ್ರಿಯೆ ಚುರುಕು ಗೊಳ್ಳಲಿದೆ ಎಂದರು. ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ತಹಶೀಲ್ದಾರ್ ನಟೇಶ್, ನಗರ ಸಭೆ ಆಯುಕ್ತ ಪರಮೇಶ್ವರ್, ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

Translate »