ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಚಾಮರಾಜನಗರ

ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

June 13, 2018

ಚಾಮರಾಜನಗರ:  ರೈತರ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಶ್ರೀಚಾಮರಾಜೇಶ್ವರಸ್ವಾಮಿ ದೇವ ಸ್ಥಾನದ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ರೈತರು ಪ್ರತಿಭಟನೆ ನಡೆ ಸಿದರು. ವೃತ್ತದಲ್ಲಿ ಜಮಾಯಿಸಿ ರಾಜ್ಯ ದಲ್ಲಿ ಅಧಿಕಾರದಲ್ಲಿ ಇರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಎಲ್ಲಾ ರೀತಿಯ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸಬಾರದು. ಸರ್ಕಾರದ ಆದೇಶ ಬರುವವರೆಗೆ ಬ್ಯಾಂಕ್ ಗಳು ರೈತರ ಮೇಲೆ ಸಾಲ ತೀರಿಸುವಂತೆ ಒತ್ತಡ ತರಬಾರದು. ಯಾವುದೇ ರೀತಿಯ ಷರತ್ತುಗಳು ಇಲ್ಲದೇ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಹಾಗೂ ಸಹಕಾರ ಸಂಘಗಳ ಎಲ್ಲಾ ಅಗ್ರಿಲೋನ್ ಗಳನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಯಶಸ್ವಿನಿ ಯೋಜನೆ, ಸೂಕ್ಷ್ಮ ಹನಿ ನೀರಾವರಿ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಕೃಷಿ ಉಪ ಕರಣಗಳಿಗೆ ಸಬ್ಸಿಡಿ ನೀಡಿಕೆ, ಬೆಂಬಲ ಬೆಲೆ ಯೋಜನೆ ಸೇರಿದಂತೆ ಇನ್ನಿತರ ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಮಂತ್ರಿ ಮಂಡಲ ರಚಿ ಸಿದ್ದು, ಎಲ್ಲಾ ಸಚಿವರು ಈ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ತಮ್ಮ ವೈಯ ಕ್ತಿಕ ವಿಚಾರ ಹಾಗೂ ಪದವಿ ಆಕಾಂಕ್ಷೆ ಗಳನ್ನು ಬದಿಗೊತ್ತಿ ತಮ್ಮ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುವ ಕೆಲಸವನ್ನು ಪ್ರಾರಂಭಿಸಬೇಕು. ಇಲ್ಲದಿದ್ದರೆ ಮಂತ್ರಿ ಪದವಿಯನ್ನು ಬಿಡಬೇಕು ಹಾಗೂ ಕೃಷಿ ಸ್ಥಾಯಿ ಸಮಿತಿಗಳಲ್ಲಿ ರೈತರಿಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಗುರುಪ್ರಸಾದ್, ಮುಖಂಡರಾದ ಮಾಡ್ರಹಳ್ಳಿ ಮಹದೇವಪ್ಪ, ಮಹೇಶ್, ರಘು, ಶಾಂತಪ್ಪ, ಮಹದೇವಸ್ವಾಮಿ, ಮಾದಪ್ಪ, ಶಿವಕುಮಾರ್, ಬಸವಣ್ಣ, ಪ್ರಭು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »