ಸಾಲ ಮನ್ನಾಗೆ ಆಗ್ರಹಿಸಿ ರೈತರ ಪ್ರತಿಭಟನೆ
ಮೈಸೂರು

ಸಾಲ ಮನ್ನಾಗೆ ಆಗ್ರಹಿಸಿ ರೈತರ ಪ್ರತಿಭಟನೆ

June 11, 2018

ಮೈಸೂರು: ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ಹಾಗೂ ರೈತರ ಸಾಲಮನ್ನಾ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮೈಸೂರಿನ ಎಪಿಎಂಸಿ ವೃತ್ತದಲ್ಲಿ ಒಂದು ಗಂಟೆ ಕಾಲ ಭಾನುವಾರ ರೈತರು ರಸ್ತೆತಡೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರಸ್ತೆತಡೆ ನಡೆಸಿದ ನೂರಾರು ರೈತರು, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿಗೊಳಿಸಲು ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಹಾಗೂ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ದೇಶದ 176 ರೈತ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಕಿಸಾನ್ ಮಹಾಸಂಘ ದೇಶಾದ್ಯಂತ ಜೂ.1ರಿಂದ 10ರವರೆಗೆ ಹಳ್ಳಿ ಬಂದ್ ಚಳವಳಿ ನಡೆಸುವ ಮೂಲಕ ನಗರ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡದಂತೆ ಹಾಗೂ ಜೂ.10ರಂದು ದೇಶಾದ್ಯಂತ ಚಳವಳಿ ನಡೆಸಲು ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ರಸ್ತೆತಡೆದು ಪ್ರತಿಭಟನೆ ನಡೆಸಿದ್ದು, ಮೈಸೂರಿನಲ್ಲೂ ಎಪಿಎಂಸಿ ವೃತ್ತದಲ್ಲಿ ರೈತರು ಗಂಟೆ ಕಾಲ ರಸ್ತೆತಡೆದು ಆಕ್ರೋಶ ವ್ಯಕ್ತಪಡಿಸಿದರು.

ಪರಿಣಾಮ ಈ ಅವಧಿಯಲ್ಲಿ ವಾಹನಗಳ ಸಂಚಾರ ಸ್ಥಗಿತಕೊಂಡಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು, ಪ್ರಯಾಣ ಕರು ಪರದಾಡಬೇಕಾಯಿತು. ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ರಾಜ್ಯ ಉಪಾಧ್ಯಕ್ಷ ಕೂಡನಹಳ್ಳಿ ರಾಜಣ್ಣ, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಬಿ.ಪಿ.ಪರಶಿವಮೂರ್ತಿ, ತಾಲೂಕು ಅಧ್ಯಕ್ಷರಾದ ಕುರುಬೂರು ಸಿದ್ಧೇಶ್, ಹಾಡ್ಯ ರವಿ, ಕೃಷ್ಣೇಗೌಡ ವರಕೊಡು, ಮುಖಂಡರಾದ ಬರಡನಪುರ ನಾಗರಾಜು, ಅಂಬಳೆ ಮಂಜುನಾಥ್, ಡಿ.ರವಿ, ಪಿ.ರಾಜು ಮತ್ತಿತರರು ಪಾಲ್ಗೊಂಡಿದ್ದರು.

Translate »