ತಾಲೂಕು ಕಚೇರಿಗೆ ರೈತರ ಮುತ್ತಿಗೆ: ರೈತರ ಸಂಪೂರ್ಣ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಮಂಡ್ಯ

ತಾಲೂಕು ಕಚೇರಿಗೆ ರೈತರ ಮುತ್ತಿಗೆ: ರೈತರ ಸಂಪೂರ್ಣ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

June 15, 2018

ಶ್ರೀರಂಗಪಟ್ಟಣ: ಎಲ್ಲಾ ವರ್ಗದ ರೈತರ ಸಂಪೂರ್ಣ ಸಾಲಮನ್ನಾ, ಬೆಳೆ ನಷ್ಟದ ಪರಿಹಾರಕ್ಕೆ ಆಗ್ರಹಿಸಿ, ಹಾಲಿನ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ ಪಟ್ಟಣದ ತಾಲೂಕು ಕಚೇರಿ ಎದುರು ಸಮಾವೇಶಗೊಂಡ ಪ್ರತಿ ಭಟನಾಕಾರರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 2 ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಇದೇ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ, ಹಲವು ವರ್ಷದಿಂದ ರಾಜ್ಯದಲ್ಲಿ ಬರಗಾಲ ಕಾಡಿದ ಹಿನ್ನೆಲೆಯಲ್ಲಿ ರೈತರು ಬೆಳೆ ಬೆಳೆಯಲು ಸಹಕಾರ ಸಂಘಗಳಿಂದ ಹಾಗೂ ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲವನ್ನು ಬರುಪಾವತಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಚುನಾವಣೆಗೂ ಮುನ್ನ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿ ಈಗ ದಿನ ದೂಡುತ್ತಿದ್ದಾರೆ ಕೂಡಲೇ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಬೆಳೆ ನಷ್ಟದಿಂದ 2016-17ನೇ ಸಾಲಿ ನಲ್ಲಿ ಉಂಟಾದ ಬೆಳೆ ನಷ್ಟಕ್ಕೆ ಹಿಂದಿನ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಅಂದಿನ ಶಾಸಕರು ಹಾಗೂ ಕಂದಾಯ ಇಲಾಖೆಯ ನಿರ್ಲಕ್ಷ್ಯತನದಿಂದ ತಾಲೂಕಿನ ರೈತರಿಗೆ ಈವರೆಗೂ ಪರಿಹಾರದ ಹಣ ದೊರಕಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ರೈತರಿಗೆ ಪರಿಹಾರ ಒದಗಿಸಿ ಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಹಾಲಿನ ಉತ್ಪಾದನಾ ವೆಚ್ಚ ಲೀ.ಗೆ 30 ರೂ. ತಗಲುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತೆ ಹಾಲು ಒಕ್ಕೂಟಗಳು ಹಾಲಿನ ದರವನ್ನು ಇಳಿಸಿ ಹಾಲು ಉತ್ಪಾದಕರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದು ಕೂಡಲೇ ಪ್ರತಿ ಲೀ. ಹಾಲಿಗೆ 35 ರೂ.ನಿಗದಿಪಡಿಸ ಬೇಕು ಎಂದು ತಾಕೀತು ಮಾಡಿದರು.

ತಾಲೂಕು ಕಚೇರಿಯಲ್ಲಿ ರೈತ ಹಾಗೂ ಜನ ಸಾಮಾನ್ಯರ ಕೆಲಸಗಳು ಆಯಾಯ ಕೆಲಸದ ಅವಧಿಯಲ್ಲಿ ನಡೆಯುತ್ತಿಲ್ಲ. ತಾಲೂಕು ಸಿಬ್ಬಂದಿಗಳು ಲಂಚಕ್ಕಾಗಿ ಪೀಡಿಸಿ, ಅವರು ಜೇಬುಗಳಿಂದ ಹಣ ತೆಗೆದು ಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕೆಲಸಗಳಿಗಾಗಿ ಜನಸಾಮಾನ್ಯರನ್ನು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಕಚೇರಿಯಲ್ಲಿ ಏಜೆಂಟರುಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ತಾಲೂಕು ಆಡಳಿತ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ತಾಲೂಕಿನಲ್ಲಿ ಸರ್ಕಾರಿ ಜಾಗ ಒತ್ತುವರಿ ಯಾಗುತ್ತಿದ್ದು, ಅಧಿಕಾರಿಗಳಿಗೇ ಸರ್ಕಾರಿ ಜಾಗ ಯಾವುದು ಎಂದು ಗೊತ್ತಿಲ್ಲ, ತಾಲೂಕು ಕಚೇರಿ ಸೇರಿದಂತೆ ಹೋಬಳಿ ಕೇಂದ್ರಗಳ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ಜಾಗಗಳ ಗುರುತು ಪಟ್ಟಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ರೈತರು ಬೆಳೆದ ಭತ್ತಗಳು ಕಟಾವಾಗುತ್ತಿದ್ದು, ಭತ್ತಕ್ಕೆ ಬೆಲೆ ಇಲ್ಲದೇ ದಲ್ಲಾಳಿಗಳು ಅರ್ಧ ಬೆಲೆಗೆ ಖರೀದಿ ಮಾಡಲು ಮುಂದಾಗಿದ್ದಾರೆ. ಜಿಲ್ಲಾಡಳಿತ ತಕ್ಷಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಮನವಿ ಮಾಡಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು

ನಂತರ ಕಾರ್ಯಕರ್ತರಿಂದ ಮನವಿ ಸ್ವೀಕರಿಸಿದ ಬಳಿಕ ತಹಸೀಲ್ದಾರ್ ನಾಗೇಶ್ ಮಾತನಾಡಿ, ಭತ್ತಕ್ಕೆ ಬೆಲೆ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಜಿಲ್ಲಾಧಿಕಾರಿಗಳು ಭತ್ತ ಖರೀದಿ ಕೇಂದ್ರ ತೆರೆಯಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅಗತ್ಯ ಕ್ರಮ ವಹಿಸ ಲಾಗುವುದು. ಸಾಲ ಮನ್ನಾ ಹಾಗೂ ಹಾಲಿದರ ಸಂಬಂಧ ರಾಜ್ಯ ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗುವುದರಿಂದ ತಮ್ಮ ಎಲ್ಲಾ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾ ಕಾರರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬೋರಾ ಪುರ ಶಂಕರೇಗೌಡ, ಕಾರ್ಯದರ್ಶಿ ಸ್ವಾಮಿ, ಕೃಷ್ಣೇಗೌಡ , ಡಿ.ಎಸ್.ಚಂದ್ರ ಶೇಖರ್, ನಾಗೇಂದ್ರಸ್ವಾಮಿ, ಶ್ರೀಕಂಠಯ್ಯ, ರಮೇಶ್, ಚಂದ್ರು, ಜಯರಾಮೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

Translate »