ಬೇಲೂರು: ರಾಜ್ಯದ ಮೈತ್ರಿ ಸರ್ಕಾರ ರೈತರ ಸಾಲಮನ್ನಾಕ್ಕೆ ಮುಂದಾಗಿದ್ದು, ಅಗತ್ಯ ದಾಖಲೆಗಳನ್ನು ಪಡೆಯುವಂತೆ ಸರ್ಕಾರ ಬ್ಯಾಂಕಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಬಳಿ ರೈತರು ದಾಖಲೆಗಳನ್ನು ಹಿಡಿದು ಸಾಲುಗಟ್ಟಿ ನಿಂತಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಬಳಿಕ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾಕ್ಕೆ ಮುಂದಾಗಿದ್ದರು. ಆದರೆ ವಾಣಿಜ್ಯ ಬ್ಯಾಂಕ್‍ಗಳು ಸರ್ಕಾರಕ್ಕೆ ಸ್ಪಂದಿ ಸದ ಹಿನ್ನೆಲೆಯಲ್ಲಿ ಸಾಲಮನ್ನಾ ತೀವ್ರ ವಿಳಂಬವಾಗುತ್ತಿದೆ ಎಂದು ವಿಪಕ್ಷಗಳು ಹಾಗೂ ರೈತ ಸಂಘಗಳ ಅವಿರತ ಹೋರಾಟ ದಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ವಿಧಾನಸಭಾ ಅಧಿವೇಶನ ಆರಂಭಕ್ಕೆ ಮುನ್ನಾ ವಾಣಿಜ್ಯ ಬ್ಯಾಂಕ್‍ಗಳ ಜೊತೆ ಮಾತನಾಡಿ, ಅಗತ್ಯ ದಾಖಲೆಗಳನ್ನು ಪಡೆಯಬೇಕು ಎಂದು ಆಯಾ ಬ್ಯಾಂಕಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಡಿ.1ರಿಂದ ಕೃಷಿಕರಿಂದ ಅಗತ್ಯ ದಾಖಲೆ ಪಡೆಯುವ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದೆ.
ತಾಲೂಕಿನ ಹೆಬ್ಬಾಳು ಗ್ರಾಮದ ಕಾರ್ಪೊ ರೇಷನ್ ಬ್ಯಾಂಕಿನಲ್ಲಿ ಸೋಮವಾರ ದಿಂದಲೇ ಅಧಿಕ ರೈತರು ಆಗಮಿಸಿ, ತಮ್ಮ ದಾಖಲೆಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಿದ್ದಾರೆ. ಆದರೆ ಸಾಲಮನ್ನಾಕ್ಕೆ ಡಿ.5 ಅಂತಿಮ ದಿನವಾದ ಕಾರಣದಿಂದ ಬ್ಯಾಂಕಿಗೆ ಸಾವಿರಕ್ಕೂ ಹೆಚ್ಚು ರೈತರು ಜಮಾ ಸಿದ್ದರು. ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ರಕ್ಷಣೆ ಪಡೆದು ಆಗಮಿಸಿದ ಎಲ್ಲಾ ರೈತರಿಂದ ಅಗತ್ಯ ದಾಖಲೆ ಪತ್ರಗಳನ್ನು ಪಡೆದರು.
ಬ್ಯಾಂಕ್ ವ್ಯವಸ್ಥಾಪಕ ವಿಕ್ರಂಕುಮಾರ್ ಮಾತನಾಡಿ, ಕಳೆದ ಎರಡು ದಿನಗಳಿಂದ ಸಾಲಮನ್ನಾಕ್ಕೆ ರೈತರಿಂದ ಅಗತ್ಯ ದಾಖಲೆ ಪಡೆಯುವ ಬಗ್ಗೆ ತಿಳಿಸಿದ ಅವರು, ರೈತರು ಪ್ರಸಕ್ತ ವರ್ಷದ ಪಹಣಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪುಸ್ತಕ ವನ್ನು ನೀಡಬೇಕು. ಡಿ.5 ರಂದು ಅಂತಿಮ ದಿನವಾದ ಕಾರಣದಿಂದ ಅತಿ ಹೆಚ್ಚು ರೈತರು ತಮ್ಮ ದಾಖಲೆಗಳನ್ನು ಹಿಡಿದು ಬೆಳಗ್ಗಿನಿಂದಲೇ ಕಾಯುತ್ತಿದ್ದಾರೆ. ನಾವು ಗಳು ಸದ್ಯ ಆನ್‍ಲೈನ್ ನೋಂದಣಿ ಮಾಡಲು ಸಮಯ ಬೇಕಾದ ಹಿನ್ನೆಲೆ ಯಲ್ಲಿ ಕೃಷಿಕರ ದಾಖಲೆ ಪಡೆದು ಬಳಿಕ ನೋಂದಣಿ ಮಾಡಲಾಗುತ್ತದೆ. ನಮ್ಮ ಬ್ಯಾಂಕಿನಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಕೃಷಿಕರು ದಾಖಲೆ ನೀಡಿದ್ದಾರೆ ಎಂದರು.
ರೈತ ಸಂಘದ ಪದಾಧಿಕಾರಿ ಕಲ್ಲಹಳ್ಳಿ ಅಣ್ಣೇಗೌಡ ಮಾತನಾಡಿ, ಸರ್ಕಾರ ರೈತರ ಸಾಲಮನ್ನಾ ಮಾಡುತ್ತಿರುವುದು ನಿಜಕ್ಕೂ ಸ್ವಾಗತದ ವಿಷಯವಾಗಿದೆ. ಕಳೆದ ನಾಲ್ಕು ವರ್ಷದಿಂದ ನಾಡಿನಲ್ಲಿ ಬರಗಾಲದಿಂದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಅವರಿಗೆ ಆಶಾಕಿರಣವಾಗಿ ಸಾಲ ಮನ್ನಾ ಯೋಜನೆ ತಂದಿದ್ದಾರೆ. ಆದರೆ ಸರ್ಕಾರ ಸಂಪೂರ್ಣ ರೈತರ ಸಾಲವನ್ನು ಮನ್ನಾ ಮಾಡಬೇಕಿದೆ. ಈ ಹಿಂದೆ 2007ರಲ್ಲಿ ಕೇಂದ್ರ ಸಾಲಮನ್ನಾ ಮಾಡಿದ ಸಂದರ್ಭ ದಲ್ಲಿ ಬಹುತೇಕ ರೈತರಿಗೆ ಪ್ರಯೋಜನ ದೊರಕಿಲ್ಲ. ಬ್ಯಾಂಕ್ ಅಧಿಕಾರಿಗಳು ಸಮಗ್ರ ವರದಿಯನ್ನು ಸರ್ಕಾರಕ್ಕೆ ನೀಡುವ ಮೂಲಕ ರೈತಾಪಿ ವರ್ಗದ ಸರ್ವ ತೋಮುಖ ಬೆಳವಣಿಗೆಗೆ ಪೂರಕವಾಗ ಬೇಕು. ರೈತರು ಮಾಡಿದ ಟ್ರಾಕ್ಟರ್, ಚಿನ್ನಾ ಭರಣ, ವಾಹನದ ಮೇಲಿನ ಸಾಲ, ಕೃಷಿ ಅಭಿವೃದ್ಧಿ ಸಾಲಗಳನ್ನು ಮನ್ನಾ ಮಾಡ ಬೇಕು ಎಂದು ಆಗ್ರಹಿಸಿದ ಅವರು ಅರೆಬರೆ ಸಾಲಮನ್ನಾಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಸಂಪೂರ್ಣ ವಿರೋಧವಿದೆ ಎಂದು ಎಚ್ಚರಿಕೆ ನೀಡಿದರು.