ಕಾಂಗ್ರೆಸ್‍ನಲ್ಲೀಗ ಖಾತೆ ಕ್ಯಾತೆ
ಮೈಸೂರು

ಕಾಂಗ್ರೆಸ್‍ನಲ್ಲೀಗ ಖಾತೆ ಕ್ಯಾತೆ

December 27, 2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟಕ್ಕೆ ಹೊಸದಾಗಿ ಸೇರ್ಪಡೆ ಗೊಂಡಿರುವ ಎಂಟು ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲು ಇಂದು ಸೇರಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ವಿಫಲಗೊಂಡಿದೆ. ಅಷ್ಟೇ ಅಲ್ಲ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಡುವೆ ಕಾವೇರಿದ ಮಾತಿನ ಚಕಮಕಿ ನಡೆದಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಕೆಲವು ಹಿರಿಯ ಸಚಿವರು ತಮ್ಮ ಬಳಿ ಇರುವ ಹೆಚ್ಚುವರಿ ಖಾತೆಗಳನ್ನು ಬಿಟ್ಟು ಕೊಡದಿ ರಲು ಪಟ್ಟು ಹಿಡಿದಿರುವುದೇ ಇದಕ್ಕೆ ಕಾರಣ. ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಇಂದು ಬೆಳಿಗ್ಗೆ ಕುಮಾರ ಕೃಪಾದಲ್ಲಿ ತಮ್ಮ ಪಾಲಿನ ಖಾತೆ ಹಂಚುವ ಸಂಬಂಧ ಹಿರಿಯ ನಾಯಕರ ಸಭೆ ನಡೆಸಿದರು. ಸಭೆ ಬಹು ಹೊತ್ತಿನವರೆಗೆ ನಡೆದರೂ ಒಮ್ಮತದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಕಾರಣ ಇಲ್ಲಿ ನಡೆದಿರುವ ಚರ್ಚೆಯನ್ನು ಪಕ್ಷದ ಅಧ್ಯಕ್ಷರ ಗಮನಕ್ಕೆ ತಂದು ಅವರೇ ಖಾತೆ ಹಂಚಿಕೆ ಮಾಡುತ್ತಾರೆ ಎಂದು ವೇಣುಗೋಪಾಲ್ ದೆಹಲಿಗೆ ಹಿಂದಿರುಗಿದ್ದಾರೆ.

ನೂತನವಾಗಿ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಎಂ.ಬಿ. ಪಾಟೀಲ್ ಅವರಿಗೆ ತಮ್ಮ ಬಳಿ ಇರುವ ಹೆಚ್ಚುವರಿ ಖಾತೆ ಗೃಹ ಇಲಾಖೆ ಹೊಣೆಗಾರಿಕೆಯನ್ನು ನೀಡುವಂತೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಸಲಹೆ ಮಾಡಿದರು. ಅಷ್ಟೇ ಅಲ್ಲ ಪಕ್ಷದ ಹಿತದೃಷ್ಟಿಯಿಂದ ನೀವು, ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲವರ ಬಳಿ ಇರುವ ಹೆಚ್ಚುವರಿ ಖಾತೆಗಳನ್ನು ಹೊಸಬರಿಗೆ ಬಿಟ್ಟುಕೊಡಬೇಕು ಎಂದಾಗ ಡಾ.ಪರಮೇಶ್ವರ್‍ಗೆ ಎಲ್ಲಿಲ್ಲದ ಕೋಪ ಬಂದಿದೆ.

ನಾನು ಎಂಟು ವರ್ಷಗಳ ಕಾಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿ, ಅದಕ್ಕೂ ಮೊದಲು ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಪಕ್ಷದ ಹಿತದ ಬಗ್ಗೆ ಬುದ್ಧಿವಾದ ಹೇಳುವುದು ಬೇಕಾಗಿಲ್ಲ. ಉಪಮುಖ್ಯಮಂತ್ರಿಯಾಗಿ ಬೆಂಗಳೂರು ಅಭಿವೃದ್ಧಿ ಖಾತೆ ಇಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲು ಸಾಧ್ಯವೇ. ಇದು ನನಗೆ ಮಾಡುತ್ತಿರುವ ಅವಮಾನವಲ್ಲವೇ ಎಂದು ಜೋರಾಗಿ ಪ್ರಶ್ನಿಸಿದ್ದಾರೆ.

ಡಾ.ಪರಮೇಶ್ವರ್ ಏಕಾಏಕಿ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದನ್ನು ಗಮನಿಸಿದ ವೇಣುಗೋಪಾಲ್, ಇಲ್ಲಿ ನಾನು ಖಾತೆ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ವಿಷಯವನ್ನು ರಾಹುಲ್ ಅಂಗಳಕ್ಕೆ ನೀಡುತ್ತೇನೆ. ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ಅದಕ್ಕೆ ಬದ್ಧರಾಗೋಣ ಎಂದಿದ್ದಾರೆ. ಇದಕ್ಕೂ ಮೊದಲು ಹೊಸಬರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆದು, ಒಂದು ಹಂತಕ್ಕೆ ಬಂತು. ಆದರೆ ಪರಮೇಶ್ವರ್ ಮತ್ತು ಶಿವಕುಮಾರ್ ತಮ್ಮ ಹೆಚ್ಚುವರಿ ಖಾತೆಗಳನ್ನು ಬಿಟ್ಟುಕೊಡಲು ಸಮ್ಮತಿಸಲೇ ಇಲ್ಲ. ಕಳೆದ ರಾತ್ರಿ ಶಿವಕುಮಾರ್, ವೇಣುಗೋಪಾಲ್ ಅವರನ್ನು ಭೇಟಿ ಮಾಡಿ, ನನ್ನ ಬಳಿ ಇರುವ ಎರಡು ಬೃಹತ್ ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಬಿಟ್ಟುಕೊಡಲು ಸಿದ್ಧನಿದ್ದೇನೆ. ಆದರೆ ನನಗೆ ಇಂಧನ ಇಲಾಖೆಯನ್ನು ನೀಡಬೇಕು ಎಂದು ಷರತ್ತು ಹಾಕಿದ್ದಾರೆ.

ಸರ್ಕಾರ ರಚನೆ ಸಂದರ್ಭದಲ್ಲಿ ಇಂಧನ ಇಲಾಖೆ ತಮ್ಮ ಮಿತ್ರ ಪಕ್ಷ ಜೆಡಿಎಸ್ ಪಾಲಾಗಿದೆ. ಆ ಖಾತೆ ಪಡೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಎರಡೂ ಖಾತೆಗಳು ನನ್ನ ಬಳಿಯೇ ಇರಬೇಕು. ಒಂದು ವೇಳೆ ವೈದ್ಯಕೀಯ ಶಿಕ್ಷಣ ಬೇಕೆಂದಲ್ಲಿ ನಾನು ಸಚಿವ ಸ್ಥಾನವನ್ನೇ ಬಿಟ್ಟುಕೊಡುತ್ತೇನೆ.

ನಾನು ಪಕ್ಷದ ಕೆಲಸವನ್ನೂ ಮಾಡುವುದಿಲ್ಲ. ನಾನು ಮತ್ತು ನನ್ನ ಸಹೋದರ ನಮ್ಮ ನಮ್ಮ ಕ್ಷೇತ್ರಗಳನ್ನು ನೋಡಿಕೊಂಡು ಇದ್ದು ಬಿಡುತ್ತೇವೆ. ಪಕ್ಷದಲ್ಲಿ ಸಿದ್ದರಾಮಯ್ಯನವರ ಮಾತೇ ಅಂತಿಮ ಎನ್ನುವುದಾದರೆ, ನಾವು ಏನೂ ಮಾಡಲು ಸಾಧ್ಯವಿಲ್ಲ. ಅವರು ಹೇಳಿದಂತೆ ಎಲ್ಲವೂ ಆಗುವುದಾದರೆ ನಾವುಗಳು ಏತಕ್ಕೆ ಎಂದು ವೇಣುಗೋಪಾಲ್ ಅವರನ್ನು ಪ್ರಶ್ನಿಸಿದ್ದಾರೆ. ನಿನ್ನೆ ಭೇಟಿ ಸಂದರ್ಭದಲ್ಲಿ ಎಲ್ಲವನ್ನೂ ಹೇಳಿದ್ದ ಶಿವಕುಮಾರ್, ಇಂದಿನ ಸಭೆಯಲ್ಲಿ ಏನೂ ಪ್ರಸ್ತಾಪ ಮಾಡಲಿಲ್ಲ. ಆದರೆ ಡಾ.ಪರಮೇಶ್ವರ್ ಇಂದು ಮಾತ್ರ ಮನಬಿಚ್ಚಿ ಎಲ್ಲವನ್ನೂ ಮಾತನಾಡಿದ್ದಾರೆ. ಮೊದಲ ಬಾರಿಗೆ ಸಿದ್ದರಾಮಯ್ಯ ವಿರುದ್ಧವೂ ತಿರುಗಿಬಿದಿದ್ದಾರೆ. ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಂಪುಟಕ್ಕೆ 8 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ತಮಗೆ ಇಂತಹದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿರುವುದರಿಂದ ಖಾತೆ ಕ್ಯಾತೆ ಉಲ್ಬಣಗೊಂಡಿದೆ.

ನಿನ್ನೆ ರಾತ್ರಿಯಿಂದಲೇ ಖಾತೆ ಹಂಚಿಕೆ ಸಂಬಂಧ ನಗರಕ್ಕೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು, ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಡಾ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಅನೇಕರ ಜತೆ ಮಾತುಕತೆ ನಡೆಸಿದರು.

Translate »