ಕೊನೆ ಉಸಿರಿರುವ ತನಕ ತತ್ವ, ಸಿದ್ಧಾಂತದ ರಾಜಕೀಯ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಚಿತ್ರನಟ ಉಪೇಂದ್ರ
ಚಾಮರಾಜನಗರ

ಕೊನೆ ಉಸಿರಿರುವ ತನಕ ತತ್ವ, ಸಿದ್ಧಾಂತದ ರಾಜಕೀಯ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಚಿತ್ರನಟ ಉಪೇಂದ್ರ

April 2, 2019

ಚಾಮರಾಜನಗರ: ನನ್ನ ಕೊನೆ ಉಸಿರಿರುವ ತನಕ ನಾನು ನಂಬಿದ ತತ್ವ-ಸಿದ್ಧಾಂತದಡಿಯಲ್ಲಿ ರಾಜಕೀಯ ಮಾಡುತ್ತೇನೆ ಎಂದು ಉತ್ತಮ ಪ್ರಜಾ ಕೀಯ ಪಕ್ಷದ ಸಂಸ್ಥಾಪಕ ಹಾಗೂ ಚಿತ್ರನಟ ಉಪೇಂದ್ರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಮಾಜ ದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದೇನೆÉ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಹೃದಯವಂತರಿಗೆ ಟಿಕೆಟ್ ನೀಡಿದ್ದೇವೆ. ನಾಗರಿಕರಿಂದ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದ್ದು, ಯುವಕರ ಬೆಂಬಲ ಚೆನ್ನಾಗಿದೆ ಎಂದರು.

ಪ್ರಸ್ತುತ ಸುಳ್ಳಿನ ಪ್ರಪಂಚ ನಡೆಯುತ್ತಿದೆ. ಎಂದಾದರೂ ಸತ್ಯ ಹೊರ ಬರಲೇಬೇಕು. ಸತ್ಯ ಹೊರ ಬರುತ್ತದೆ ಎಂಬ ಆಸೆಯಿಂದ ಪಕ್ಷ ಕಟ್ಟಿದ್ದೇನೆ. ಕೋಟಿ ಕೋಟಿ ಖರ್ಚು ಮಾಡಿ ಪಕ್ಷದ ಅಭ್ಯರ್ಥಿಯಾಗಲೀ, ನಾನಾಗಲೀ ಮತ ಕೇಳುವುದಿಲ್ಲ. ಕೋಟಿ ರೂ. ಖರ್ಚು ಮಾಡಿ ಸಮಾವೇಶ ನಡೆಸುವ ಅಗತ್ಯವೂ ನಮಗೆ ಇಲ್ಲ. ಕೋಟಿ ಕೋಟಿ ಖರ್ಚು ಮಾಡಿ ಗೆಲುವು ಸಾಧಿಸಿದ ಅಭ್ಯರ್ಥಿ ಯಿಂದ ಸಮಾಜ ಸೇವೆ ಮಾಡಲು ಸಾಧ್ಯವೇ ಎಂದು ಉಪೇಂದ್ರ ಪ್ರಶ್ನಿಸಿದರು.

ನಾನು ಪಕ್ಷ ಕಟ್ಟಿರುವುದು ಜನ ಸಾಮಾನ್ಯರಿಗೋಸ್ಕರ. ಅದಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ನಾನು ಸ್ಪರ್ಧಿಸಿದರೆ ಬೇರೆ ಕ್ಷೇತ್ರಗಳಿಗೆ ಗಮನ ಕೊಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ನಾನು ಎಂದಾದರೂ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಎಂ.ನಾಗರಾಜು ಮಾತನಾಡಿ, ನಾನು ಕಳೆದ 23 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ನಾನು ಈಗಲೂ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದೇನೆ. ಬಡವ ರನ್ನು, ಸಮಾಜ ಸೇವೆ ಮಾಡುವವರನ್ನು ರಾಜಕೀಯ ಪಕ್ಷಗಳು ಗುರುತಿಸುವುದಿಲ್ಲವಲ್ಲ ಎಂಬ ಬೇಸರ ನನ್ನಲ್ಲಿದೆ ಎಂದರು.

ಯುವಕರು ಜಮಾವಣೆ: ಚಿತ್ರನಟ ಉಪೇಂದ್ರ ನಗರಕ್ಕೆ ಆಗಮಿಸುವ ವಿಷಯ ತಿಳಿದ ಯುವಕರು ಹಾಗೂ ಉಪ್ಪಿ ಅಭಿಮಾನಿಗಳು ಪತ್ರಕರ್ತರ ಭವನದ ಬಳಿ ಜಮಾಯಿಸಿದ್ದರು.
ಸುದ್ದಿಗೋಷ್ಠಿ ನಡೆಸಲು ಭವನಕ್ಕೆ ಆಗಮಿ ಸಿದ ಉಪೇಂದ್ರ ಅವರಿಗೆ ಹೂಗುಚ್ಛ ನೀಡಿ, ಅಭಿಮಾನಿಗಳು ಸ್ವಾಗತಿಸಿದರು. ಕೆಲವರು ಕಾಲಿಗೆ ಬಿದ್ದು ನಮಸ್ಕರಿಸಿದರು. ಮತ್ತೆ ಕೆಲವರು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.

Translate »