ಬಂಡೀಪುರ, ಬಿಳಿಗಿರಿರಂಗನಬೆಟ್ಟ ಅರಣ್ಯ ವಲಯದಲ್ಲಿ ಬೆಂಕಿ; ನೂರಾರು ಎಕರೆ ಕಾಡು ನಾಶ
ಚಾಮರಾಜನಗರ

ಬಂಡೀಪುರ, ಬಿಳಿಗಿರಿರಂಗನಬೆಟ್ಟ ಅರಣ್ಯ ವಲಯದಲ್ಲಿ ಬೆಂಕಿ; ನೂರಾರು ಎಕರೆ ಕಾಡು ನಾಶ

February 22, 2019

ಗುಂಡ್ಲುಪೇಟೆ: ತಾಲೂ ಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಂದಕೆರೆ ಅರಣ್ಯ ವಲಯದ ಲೊಕ್ಕೆರೆ ಸಮೀಪದ ಗುಡ್ಡದಲ್ಲಿ ಬೆಂಕಿ ಕಾಣಿಸಿ ಕೊಂಡು ಸುಮಾರು 300 ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಭಸ್ಮವಾಗಿದೆ.

ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಸಮೀಪದ ಗುಡ್ಡದಲ್ಲಿ ಒಣಗಿದ್ದ ಹುಲ್ಲಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರ ಬಹುದು ಎನ್ನಲಾಗಿದ್ದು, ಪರಿಣಾಮ ನೂರಾರು ಎಕರೆ ಕಾಡು ಭಸ್ಮವಾಗಿದೆ.

ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಗುಡ್ಡದ ಸಮೀಪಕ್ಕೆ ತೆರಳಲು ಸಾಧ್ಯ ವಾಗದ ಪರಿಣಾಮ ಜೋರಾಗಿ ಬೀಸುತ್ತಿದ್ದ ಗಾಳಿಗೆ ಬೆಂಕಿ ಜ್ವಾಲೆ ಹರಡಿಕೊಂಡು ಗುಡ್ಡದ ಸಮೀಪದ ಆನಂಜಿ ಹುಂಡಿ, ಬರಕಟ್ಟೆ, ಗುಡ್ಡೆಕೆರೆ ಅರಣ್ಯ ಪ್ರದೇಶ ಭಸ್ಮವಾಗಿದೆ.
ಸದ್ಯ ನಾಲ್ಕುಗಂಟೆ ನಿರಂತರ ಕಾರ್ಯಾ ಚರಣೆ ನಂತರ ಬೆಂಕಿ ಸಂಪೂರ್ಣವಾಗಿ ಹತೋಟಿಗೆ ತರಲಾಗಿದ್ದು, ಅರಣ್ಯ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ ಎಂದು ಬಂಡಿಪುರ ಉಪಭಾಗದ ಎಸಿಎಫ್ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.

ಪುಣಜನೂರು ಅರಣ್ಯ ವಲಯದಲ್ಲೂ ಬೆಂಕಿ: ಚಾಮರಾಜನಗರ ತಾಲೂಕಿನ ಪುಣಜನೂರು ಅರಣ್ಯ ವಲಯದ ನಾಯರೆ ಮತ್ತು ಚಿಕ್ಕಯ್ಯನಗಿರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 30 ಎಕರೆ ಪ್ರದೇಶ ಸುಟ್ಟು ಹೋಗಿದೆ.

ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾ ರಣ್ಯ ಪ್ರದೇಶಕ್ಕೆ ಒಳಪಟ್ಟ ನಾಯರೆ ಮತ್ತು ಚಿಕ್ಕಯ್ಯನಗಿರಿ ಪ್ರದೇಶದಲ್ಲಿ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾರೋ ಕಿಡಿ ಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ದಳ ತೆರಳಿ ಬೆಂಕಿ ನಂದಿಸಿತು. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ಎಂ. ಶಂಕರ್, ವಲಯ ಅರಣ್ಯಾಧಿಕಾರಿ ಗಳಾದ ನಾಗೇಂದ್ರನಾಯಕ್, ಮಹೇ ದೇವಯ್ಯ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Translate »