ನೃತ್ಯ ಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆ ಅಳವಡಿಸುವ ಸೃಜನಶೀಲ ಪ್ರಯತ್ನ ಅಗತ್ಯ
ಮೈಸೂರು

ನೃತ್ಯ ಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆ ಅಳವಡಿಸುವ ಸೃಜನಶೀಲ ಪ್ರಯತ್ನ ಅಗತ್ಯ

September 23, 2018

ಮೈಸೂರು: ಭಾರತೀಯ ಪರಂಪರೆಯ ಭಾಗವಾದ ನೃತ್ಯಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆಗಳನ್ನು ಅಳವಡಿಸುವ ಬಗ್ಗೆ ತಜ್ಞರಿಂದ ಸೃಜನಶೀಲ ಪ್ರಯತ್ನಗಳಾಗ ಬೇಕಿದೆ ಎಂದು ಹಿರಿಯ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅಭಿಪ್ರಾಯಪಟ್ಟರು.

ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತಾ ಸಭಾಂಗಣದಲ್ಲಿ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ನಡೆದ 32 ನೇ ವರ್ಷದ ರಾಷ್ಟ್ರಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲೆಗಳ ಐದು ದಿನಗಳ ಪಲ್ಲವೋತ್ಸವ-2018ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರದರ್ಶಕ ಕಲೆಗಳ ಉನ್ನತೀಕರಣಕ್ಕೆ ನೂತನ ಗೀತೆ ರಚನೆ, ಸಂಗೀತ ಮತ್ತು ನೃತ್ಯಗಳನ್ನು ಇದಕ್ಕೆ ಅನ್ವಯಿಸುವಂತಹ ಸ್ವೋಪಜ್ಞ ಚಿಂತನೆ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ತಜ್ಞರ ನಡುವೆ ಒಂದು ದೀರ್ಘ ಸಮಾಲೋಚನೆ ಅಗತ್ಯವಿದೆ. ಪಾರಂಪರಿಕವಾದ ನೃತ್ಯದ ವ್ಯಾಕರಣವನ್ನು ಬಳಸಿ, ಹೊಸ ಸಂಯೋಜನೆಗಳಿಂದ ಕಲೆಗಳನ್ನು ಆಯೋಜಿಸುವ ಮೂಲಕ ಜನಮನ ಮನ್ನಣೆ ಪಡೆಯಲು ಅನುಕೂಲವಾಗಲಿದೆ ಎಂದರು.

ಎಲ್ಲಾ ಕ್ಷೇತ್ರದಂತೆ ಈ ಕ್ಷೇತ್ರದತ್ತಲೂ ಯುವ ಪೀಳಿಗೆ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಂಡು ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಹೊಸಹೊಸ ರಾಗ ಸಂಯೋಜನೆಗೆ ಈ ಕ್ಷೇತ್ರದ ತಜ್ಞರು ಆಲೋಚಿಸಬೇಕಿದೆ. ಈ ನಿಟ್ಟಿನಲ್ಲಿ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರವು `ಪಲ್ಲವೋತ್ಸವ’ದ ಮೂಲಕ ಐದು ದಿನಗಳ `ಪಂಚಮಹಾ ಭೂತ’ ನೂತನ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಬಿನಂದನಾರ್ಹ ಎಂದರು.

ಸೆ.23ರಂದು ಮೈಸೂರು, ಮಹಾರಾಷ್ಟ್ರ, ಕೊಲ್ಕತ್ತಾದ ನೃತ್ಯ ಕಲಾತಂಡಗಳಿಂದ ಪ್ರದರ್ಶ ನವಿದೆ. ಸೆ.24ರಂದು ಭುವನೇಶ್ವರ್, ಬೆಂಗಳೂರು ತಂಡಗಳಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ. ಸೆ.25ರಂದು ಮೈಸೂರು, ಮಧ್ಯಪ್ರದೇಶ, ಬೆಂಗಳೂರು ವಿವಿಧ ನೃತ್ಯ ಕಲಾತಂಡದಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ. ಸೆ.26 ರಂದು ಬೆಂಗಳೂರು, ಮೈಸೂರು, ಹೈದ್ರಾಬಾದ್ ಕಲಾ ತಂಡಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ರೋಟರಿ ಮೈಸೂರು ಉತ್ತರದ ಅಧ್ಯಕ್ಷ ಎಂ.ಕೆ.ನಂಜಯ್ಯ, ವಿಪಿಎಸಿ ಅಧ್ಯಕ್ಷ ಕೆ.ವಿ.ಮೂರ್ತಿ, ಡಾ.ವಸುಂಧರ ದೊರೆಸ್ವಾಮಿ, ಹೆಚ್.ಡಿ.ಶ್ರುತಿಸಾಗರ್ ಇದ್ದರು.

Translate »