ಮೈಸೂರು,ಜು.21(ಆರ್‍ಕೆಬಿ)- ಮೈಸೂರಿನ ಅರಿವಿನ ಮನೆ ಮಹಿಳಾ ಬಳಗವು ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಮಾಜಿ ಸೈನಿಕರು ಮತ್ತು ಅನ್ನದಾತ ರೈತರನ್ನು ಗೌರವಿಸುವ ಮೂಲಕ ಅರ್ಥಪೂರ್ಣ ಕಾರ್ಯ ನಡೆಸಿತು.
ಮೈಸೂರಿನ ಜೆ.ಪಿ.ನಗರದ ಪುಟ್ಟ ರಾಜ ಗವಾಯಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಿಪಾಯಿ ಎಲ್.ಸಿದ್ದಪ್ಪಾಜಿ, ಮಾಜಿ ಹವಾಲ್ದಾರ್ ಮೇಚಂಡ ಜಿ.ಚಿಟ್ಟಿಯಪ್ಪ, ಮಾಜಿ ನಾಯಕ್ ಎಂ.ಜಿ.ಹಿರಿಯಣ್ಣ ಹಾಗೂ ಕೊಳ್ಳೇಗಾಲ ತಾಲೂಕಿನ ಪ್ರಗತಿಪರ ರೈತ ಮಹಿಳೆ ಸುನೀತಾ ಅಂದಾನಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಅರಿವಿನ ಮನೆ ಮಹಿಳಾ ಬಳಗದ ಅರ್ಥಪೂರ್ಣ ಕಾರ್ಯವನ್ನು ಪ್ರಶಂಸಿಸಿದರು. ಯಾವುದೇ ಸಂಘ ಸಂಸ್ಥೆ ಗಳು ಇಂತಹ ಸಮಾಜಮುಖಿ ಕಾರ್ಯ ದಲ್ಲಿ ತೊಡಗಿದರೆ ಸಮಾಜ ಪರಿವರ್ತನೆಯ ಜೊತೆಗೆ ಸದೃಢ ಸಮಾಜ ನಿರ್ಮಾಣ ಸಾಧ್ಯ ವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ವಿ-ಕೇರ್ ಎಕ್ಸ್-ಸವಿಶ್ ಮೆನ್ ಟ್ರಸ್ಟ್ ಅಧ್ಯಕ್ಷ ಮಂಡೇಟಿರ ಎನ್. ಸುಬ್ರಮಣಿ ಮಾತನಾಡಿ, ರಾಷ್ಟ್ರೀಯ ಹಬ್ಬ ಗಳಲ್ಲಿ ಸೈನಿಕರನ್ನು ಸನ್ಮಾನಿಸಲಾಗುತ್ತದೆ. ಆದರೆ ರೈತರನ್ನು ಸನ್ಮಾನಿಸುವುದು ವಿರಳ. ಇಂತಹ ಸಂದರ್ಭದಲ್ಲಿ ಮಹಿಳಾ ಬಳಗ, ದೇಶದ ಆಧಾರ ಸ್ಥಂಭಗಳಾದ ಸೈನಿಕರು ಮತ್ತು ರೈತರನ್ನು ಸನ್ಮಾನಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಳಗದ ಅಧ್ಯಕ್ಷೆ ಧನ್ಯ ಸತ್ಯೇಂದ್ರಮೂರ್ತಿ, ಎನ್‍ಎಂಪಿ ಅಕಾಡೆಮಿ ವ್ಯವಸ್ಥಾಪಕಿ ಡಾ.ಸಿ.ತೇಜೋ ವತಿ, ನಗರಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್, ಮಹಿಳಾ ಬಳಗದ ಪದಾಧಿ ಕಾರಿಗಳಾದ ಶೈಲಜಾ ಮಹದೇವಸ್ವಾಮಿ, ಎಂ.ಬಿ.ರಾಜೇಶ್ವರಿ ಮಲ್ಲಿಕಾರ್ಜುನಪ್ಪ, ಮಂಜುಳಾ ಚಿನ್ನಪ್ಪ, ರೂಪಾ ನಾಗೇಶ್, ಗೀತಾ ದಯಾನಂದ್, ಪೂಜಾ ಲಿಂಗಣ್ಣ ಸ್ವಾಮಿ, ಕವಿತಾ ಮಧುಕೇಶ್, ರೇಖಾ ಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.