ಪೇದೆ ಪತಿಯ ಮೃಗೀಯ ವರ್ತನೆಗೆ  ಸಾವು-ಬದುಕಿನ ನಡುವೆ ಪತ್ನಿ ಹೋರಾಟ
ಹಾಸನ

ಪೇದೆ ಪತಿಯ ಮೃಗೀಯ ವರ್ತನೆಗೆ  ಸಾವು-ಬದುಕಿನ ನಡುವೆ ಪತ್ನಿ ಹೋರಾಟ

July 2, 2018

ಹಾಸನ: ಪೊಲೀಸ್ ಪೇದೆಯೋರ್ವ ತನ್ನ ಪತ್ನಿ ಯೊಂದಿಗೆ ಮೃಗೀಯವಾಗಿ ವರ್ತಿಸಿದ್ದು, ಮುಖ, ದೇಹದ ಇತರ ಭಾಗಗಳಿಗೆ ಖಾರದ ಪುಡಿ ಹಾಕಿ ಹಿಂಸಿಸಿ, ಚಾಕುವಿ ನಿಂದ ಹಲ್ಲೆ ನಡೆಸಿದ್ದಲ್ಲದೆ, ನಂತರ ವಿಷ ಕುಡಿಸಿ ನಾಟಕೀಯ ವಾಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.

ಅರಕಲಗೂಡು ತಾಲೂಕಿನ ಕೊಣನೂರು ಠಾಣೆ ಪೇದೆ ಮಸವತ್ತೂರು ಗ್ರಾಮದ ನಿವಾಸಿ ಅರುಣ್ ಕುಮಾರ್ ಈ ಕೃತ್ಯ ಎಸಗಿದ್ದು, ಪತ್ನಿ ರೂಪಾ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೇ ಹೋರಾಟ ನಡೆಸುತ್ತಿದ್ದಾರೆ.

ಘಟನೆ ವಿವರ: ಅರಕಲಗೂಡು ತಾಲೂಕು ಮಸವತ್ತೂರು ಗ್ರಾಮದ ಪೊಲೀಸ್ ಪೇದೆ ಅರುಣ್ ಕುಮಾರ್‍ಗೆ ಅಂಚೆ ಇಲಾಖೆ ಉದ್ಯೋಗಿಯಾಗಿದ್ದ ಸೋಮವಾರಪೇಟೆ ತಾಲೂಕಿನ ಬೀಕನಹಳ್ಳಿ ಗ್ರಾಮದ ರೂಪಾಳನ್ನು 2017 ನ.2ರಂದು ಕೇಳಿದಷ್ಟು ವರದಕ್ಷಿಣೆ ನೀಡಿ ರೂಪ ಕುಟುಂಬಸ್ಥರು ಅದ್ಧೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದರು.

ಉಡುಪಿ ಜಿಲ್ಲೆಯಿಂದ ಕೊಣನೂರು ಠಾಣೆಗೆ ವರ್ಗಾವಣೆ ಯಾಗಿ ಬಂದಿದ್ದ ಅರುಣ್ ಕೆಲ ತಿಂಗಳ ನಂತರ ಕೈ ಹಿಡಿದ ಪತ್ನಿಗೆ ಕೊಡ ಬಾರದ ಕಾಟ ಕೊಡಲು ಆರಂಭಿಸಿದ. ಆರಂಭದಲ್ಲಿ ಪತ್ನಿಯ ಶೀಲ ಶಂಕಿಸಿದ ಅರುಣ್, ನಂತರ ಮತ್ತಷ್ಟು ವರದಕ್ಷಿಣೆ ಹಣ ತರುವಂತೆ ಕಿರುಕುಳ ಕೊಡಲು ಆರಂಭಿಸಿದ. ಈತನಿಗೆ ಆತನ ತಂದೆ-ತಾಯಿ ಸಾಥ್ ನೀಡಿದ್ದರು. ಅನೇಕ ಸಲ ರಾಜಿ ಪಂಚಾಯ್ತಿ ಮಾಡಿಸಿದ್ದರೂ ಅರುಣ್ ತನ್ನ ರಕ್ಕಸ ಬುದ್ಧಿ ಬದಲಾಯಿಸಿಕೊಳ್ಳದೆ ಪತ್ನಿಗೆ ಚಿತ್ರಹಿಂಸೆ ನೀಡುವುದನ್ನು ಮುಂದುವರಿಸಿದ್ದ. ಅಲ್ಲದೆ, ಆಕೆಯನ್ನು ಕೆಲಸಕ್ಕೆ ಹೋಗಲೂ ಬಿಡದೆ, ಮನೆಯಲ್ಲೇ ಕೂಡಿ ಹಾಕಿ ಹಿಂಸಿಸುತ್ತಿದ್ದನು.

ಮನಬಂದಂತೆ ಹಲ್ಲೆ: ನಿನ್ನೆ ರೂಪಾಳ ಮೇಲೆ ಪತಿ ಅರುಣ್ ಮನಬಂದಂತೆ ಥಳಿಸಿ, ಮುಖ ಹಾಗೂ ದೇಹದ ವಿವಿಧ ಭಾಗಕ್ಕೆ ಖಾರದ ಪುಡಿ ಹಾಕಿ ಹಿಂಸಿಸಿ, ಚಾಕುವಿನಿಂದ ತೀವ್ರವಾಗಿ ಹಲ್ಲೆ ನಡೆಸಿ ರಾಕ್ಷಸ ಬುದ್ಧಿ ಪ್ರದರ್ಶಿಸಿದ್ದಾನೆ. ಇಷ್ಟಲ್ಲದೆ ರೂಪಾಗೆ ವಿಷ ಕುಡಿಸಿದ್ದಾನೆ ಎನ್ನಲಾಗಿದೆ. ಬಳಿಕ ಆಸ್ಪತ್ರೆಗೆ ಸೇರಿಸುವ ನಾಟಕವಾಡಿ, ಅರುಣ್ ಮತ್ತು ಆತನ ಮನೆಯವರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ರೂಪಾಳ ತಾಯಿ ಜಯಂತಿಯವರು ದೂರಿದ್ದು, ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Translate »